ಬೆಂಗಳೂರು : ಶಾಸಕರ ಸ್ಥಳೀಯ ಪ್ರದೇಶಾಭಿವೃದ್ಧಿ ಯೋಜನೆಯಡಿ ತೀರಾ ಕಳಪೆ ಸಾಧನೆ ಮಾಡಿರುವುದನ್ನ ನೋಡಿ ಯುವ ಸಬಲೀಕರಣ ಮತ್ತು ಕ್ರೀಡೆ, ಯೋಜನೆ ಕಾರ್ಯಕ್ರಮ ಸಂಯೋಜನೆ ಹಾಗೂ ಸಾಂಖ್ಯಿಕ ಇಲಾಖೆ ಸಚಿವ ಡಾ. ನಾರಾಯಣಗೌಡ ಅವರು ಅಧಿಕಾರಿಗಳ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದರು.
ವಿಕಾಸಸೌಧದಲ್ಲಿ ಇಂದು ಎಲ್ಲ ಜಿಲ್ಲೆಗಳ ಜಿಲ್ಲಾಧಿಕಾರಿಗಳೊಂದಿಗೆ ವಿಡಿಯೋ ಕಾನ್ಫರೆನ್ಸ್ ಮೂಲಕ ಸಚಿವ ಡಾ. ನಾರಾಯಣಗೌಡ ಅವರ ಅಧ್ಯಕ್ಷತೆಯಲ್ಲಿ ಪ್ರಗತಿ ಪರಿಶೀಲನಾ ಸಭೆ ನಡೆಯಿತು. ಸಭೆಯಲ್ಲಿ ಸಚಿವರು ಅಧಿಕಾರಿಗಳ ವಿರುದ್ಧ ಕಿಡಿಕಾರಿದರು.
ಎರಡು ವರ್ಷಕ್ಕಿಂತ ಮೇಲ್ಪಟ್ಟ ಕಾಮಗಾರಿಗಳಿಗೆ ಬಿಡುಗಡೆಯಾಗಿರುವ 433 ಕೋಟಿ ರೂ. ಸೇರಿ ಪ್ರಸಕ್ತ ಸಾಲಿನಲ್ಲಿ 447 ಕೋಟಿ ರೂ. ನೀಡಲಾಗಿದೆ. ಜಿಲ್ಲಾಧಿಕಾಕಾರಿಗಳ ಪಿಡಿ ಖಾತೆಯಲ್ಲಿ ಸುಮಾರು 880 ಕೋಟಿ ರೂ. ಅನುದಾನ ಕೊಳೆಯುತ್ತಿದೆ. ರಾಜ್ಯದಲ್ಲಿ 18,647 ಕಾಮಗಾರಿ ಬಾಕಿ ಇವೆ. 444 ಕೋಟಿ ರೂ. ಹಣ ಖರ್ಚಾಗದೆ ಬಾಕಿ ಇದೆ.
ಇಷ್ಟೊಂದು ಅನುದಾನ ಇದ್ದರೂ ಶೇ.25ರಷ್ಟೂ ಪ್ರಗತಿಯಾಗಿಲ್ಲ. ಇದಕ್ಕೆ ಅಧಿಕಾರಿಗಳೇ ನೇರ ಹೊಣೆ. ಜನಸಾಮಾನ್ಯರ ಅನುಕೂಲಕ್ಕಾಗಿ ಬಳಕೆಯಾಗಬೇಕಾದ ಅನುದಾನವನ್ನು ಬಳಸಿಲ್ಲ. ಶಿಕ್ಷಣ, ಆರೋಗ್ಯ ಹಾಗೂ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಇಲಾಖೆಯಡಿ ಹಣ ಬಿಡುಗಡೆ ಮಾಡಲಾಗಿತ್ತು.
ಪ್ರಮುಖವಾಗಿ ಶಾಲಾ-ಕಾಲೇಜುಗಳ ಕಟ್ಟಡ, ಹಳ್ಳಿಗಳಲ್ಲಿ ಆರ್‌ಒ ಮಾದರಿಯ ಕುಡಿಯುವ ನೀರಿನ ಸೌಲಭ್ಯ, ಆರೋಗ್ಯಕ್ಕಾಗಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ, ಮೂಲಸೌಕರ್ಯಗಳ ಅಭಿವೃದ್ಧಿ ಸೇರಿ ಜನಸಾಮಾನ್ಯರ ಅಗತ್ಯಕ್ಕೆ ಅನುಗುಣವಾಗಿ ಅನುದಾನ ಬಳಕೆಯಾಗಬೇಕಿತ್ತು. ಆದರೆ, ಅಧಿಕಾರಿಗಳ ಬೇಜವಾಬ್ದಾರಿತನಕ್ಕೆ ಜನಪ್ರತಿನಿಧಿಗಳಾಗಿ ನಾವು ತಲೆ ತಗ್ಗಿಸಬೇಕಾ ಎಂದು ಅಧಿಕಾರಿಗಳನ್ನ ತರಾಟೆಗೆ ತೆಗೆದುಕೊಂಡರು.
ಓದಿ:ರಾಜ್ಯ ಬಜೆಟ್: 11 ಬೇಡಿಕೆ ಸಿಎಂ ಮುಂದಿಟ್ಟ ಸರ್ಕಾರಿ ನೌಕರರ ಸಂಘ
ಏನು ಮಾಡುತ್ತಿದ್ದೀರಿ?: ಕೊಟ್ಟ ಅನುದಾನವನ್ನೂ ಬಳಸದೆ ಏನು ಮಾಡುತ್ತಿದ್ದೀರಿ. ಹೀಗೆ ಮಾಡಿದರೆ ಪ್ರಗತಿ ಹೇಗೆ ಸಾಧ್ಯ?. ಕೊರೊನಾ ಸಂದರ್ಭದಲ್ಲಿ ಆರ್ಥಿಕ ಸಮಸ್ಯೆ ಇದ್ದರೂ ಅಭಿವೃದ್ಧಿ ದೃಷ್ಟಿಯಿಂದ ಮಾನ್ಯ ಮುಖ್ಯಮಂತ್ರಿಗಳು ಎಲ್ಲ ಶಾಸಕರಿಗೆ ತಲಾ 1.5 ಕೋಟಿ ರೂ. ಅನುದಾನ ಬಿಡುಗಡೆ ಮಾಡಿದ್ದಾರೆ. ಆದಾಗ್ಯೂ ಇರುವ ಅನುದಾನವನ್ನೇ ಬಳಸದೆ ಮತ್ತೆ ಅನುದಾನ ಬೇಕು ಎಂದು ಪ್ರಸ್ತಾವನೆ ನೀಡಿದ್ದೀರಿ.
ಜಿಲ್ಲಾಧಿಕಾರಿಗಳ ಪಿಡಿ ಖಾತೆಯಲ್ಲಿ ಹಣ ಇಟ್ಟು ಕೊಳೆಸುವುದಕ್ಕೆ ಹೆಚ್ಚಿನ ಅನುದಾನ ಬೇಕಾ ನಿಮಗೆ?. ಮೊದಲು ನೀಡಿದ ಅನುದಾನವನ್ನ ಯಾಕೆ ಬಳಸಿಲ್ಲ ಎಂದು ಸ್ಪಷ್ಟನೆ ನೀಡಿ ಎಂದು ಸಚಿವರು ಗದರಿದ್ದಾರೆ. ಅಲ್ಲದೆ ಕಡಿಮೆ ಪ್ರಗತಿ ಸಾಧಿಸಿರುವ ಜಿಲ್ಲಾಧಿಕಾರಿಗಳಿಗೆ, ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳಿಗೆ ಶೋಕಾಸ್ ನೋಟಿಸ್ ಜಾರಿ ಮಾಡಿ ಎಂದು ಸಚಿವರು ಸೂಚಿಸಿದ್ದಾರೆ.
ಯಾವ ಪುರುಷಾರ್ಥಕ್ಕೆ ಪ್ರಗತಿ ಪರಿಶೀಲನೆ?: 2021ರ ಜನವರಿ ಅಂತ್ಯಕ್ಕೆ ಬೆಂಗಳೂರು ಗ್ರಾಮಾಂತರ, ಉಡುಪಿ, ಚಿಕ್ಕಮಗಳೂರು ಜಿಲ್ಲೆ ಬಿಟ್ಟರೆ ಉಳಿದ ಯಾವ ಜಿಲ್ಲೆಯೂ ಶೇ.50 ರಷ್ಟು ಕಾಮಗಾರಿ ಪ್ರಗತಿ ಸಾಧಿಸಿಲ್ಲ. ಯಾವ ಪುರುಷಾರ್ಥಕ್ಕೆ ಪ್ರಗತಿ ಪರಿಶೀಲನೆ ಮಾಡಬೇಕು.
ಬಾಗಲಕೋಟೆ, ಹಾವೇರಿ, ಬೆಂಗಳೂರು ನಗರ, ಚಿಕ್ಕಬಳ್ಳಾಪುರ, ಬೀದರ್, ಚಿತ್ರದುರ್ಗ, ಬಳ್ಳಾರಿ, ಯಾದಗಿರಿ, ಕೋಲಾರ, ದಕ್ಷಿಣ ಕನ್ನಡ, ಮಂಡ್ಯ, ಬೆಳಗಾವಿ, ಧಾರವಾಡ, ಶಿವಮೊಗ್ಗ, ಕೊಪ್ಪಳ, ಕಲಬುರಗಿ, ರಾಮನಗರ, ಗದಗ, ಮೈಸೂರು, ಉತ್ತರಕನ್ನಡ ಹಾಗೂ ಚಾಮರಾಜನಗರ ಜಿಲ್ಲೆಗಳ ಶೇ.30ರಷ್ಟನ್ನು ಸಹ ಪ್ರಗತಿ ಸಾಧಿಸಲು ಸಾಧ್ಯವಾಗಿಲ್ಲ.
2021ರ ಜನವರಿ ಅಂತ್ಯದವರೆಗೆ ಎಲ್ಲ ಜಿಲ್ಲೆಗಳಿಂದ ಒಟ್ಟು 1,127.60 ಕೋಟಿ ರೂ. ಪಿಡಿ ಖಾತೆಯಲ್ಲಿತ್ತು. ಇನ್ನೂ 851.28 ಕೋಟಿ ರೂ. ಹಣ ಬಳಕೆಯಾಗದೆ ಉಳಿದಿದೆ. ಇಡೀ ರಾಜ್ಯದಲ್ಲಿ ಆಗಿರುವ ಪ್ರಗತಿ ಕೇವಲ ಶೇ. 25ರಷ್ಟು ಮಾತ್ರ. ಕಡಿಮೆ ಪ್ರಗತಿ ಸಾಧಿಸಿದ್ದರೂ ಜಿಲ್ಲಾಧಿಕಾರಿಗಳು ಶಾಸಕರನ್ನು ಸಂಪರ್ಕಿಸಿಲ್ಲ ಎಂದು ತರಾಟೆಗೆ ತೆಗೆದುಕೊಂಡರು.