ಬೆಂಗಳೂರು: ಗೇಲ್ ಗ್ಯಾಸ್ ಪೈಪ್‌ಲೈನ್ ಸೇರಿ ಇನ್ನಿತರ ವಸ್ತುಗಳಿಗೆ ಹಾನಿಯುಂಟು ಮಾಡುವ ದೂರುಗಳು ಬಂದರೆ ಕ್ರಿಮಿನಲ್ ಮೊಕದ್ದಮೆ ದಾಖಲಿಸಿ ಕ್ರಮ ಕೈಗೊಳ್ಳಲಾಗುವುದು ಎಂದು ನಗರ ಪೊಲೀಸ್ ಆಯುಕ್ತ ಭಾಸ್ಕರ್‌ರಾವ್ ಎಚ್ಚರಿಕೆ ನೀಡಿದ್ದಾರೆ.
ಇಂದು ಗೇಲ್ ಗ್ಯಾಸ್ ಲಿಮಿಟೆಡ್ನಿಂದ ಖಾಸಗಿ ಹೋಟೆಲ್‌ನಲ್ಲಿ ಆಯೋಜಿಸಲಾಗಿದ್ದ ಗ್ಯಾಸ್ ವಿತರಣೆ ಕುರಿತ ‘ಸುರಕ್ಷತಾ ಜಾಗೃತಿ ಕಾರ್ಯಾಗಾರ'ದಲ್ಲಿ ಪಾಲ್ಗೊಂಡು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಭಾಸ್ಕರ್‌ರಾವ್ ಉದ್ಯಾನನಗರಿ ಬೆಂಗಳೂರಿನಲ್ಲಿ ನೈಸರ್ಗಿಕ ಅನಿಲ ಪೈನ್ ಲೈನ್ ಅಳವಡಿಕೆ ಕಾರ್ಯ ವೇಗವಾಗಿ ನಡೆಯುತ್ತಿದೆ. ಆದರೆ ಇದರ ನಡುವೆ ಗೇಲ್ ಗ್ಯಾಸ್ ಪೈಪ್‌ಲೈನ್ ಸೇರಿ ಇನ್ನಿತರ ವಸ್ತುಗಳಿಗೆ ಹಾನಿಯುಂಟು ಮಾಡುವವರ ವಿರುದ್ಧ ದೂರುಗಳು ಹೆಚ್ಚಾಗುತ್ತಿದೆ. ಅದಕ್ಕೆ ಕಾರಣರಾದವರ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸಲಾಗುವುದು ಎಂದು ಆಯುಕ್ತರು ಎಚ್ಚರಿಕೆ ನೀಡಿದರು.
ಮನೆ- ಮನೆಗಳಿಗೆ ಗ್ಯಾಸ್ ಪೂರೈಕೆ ಮಾಡುವ ಯೋಜನೆ ಸಾಕಷ್ಟು ಸವಾಲಿನದು. ಅದನ್ನು ಗೇಲ್ ಗ್ಯಾಸ್ ಸಂಸ್ಥೆ ಉತ್ತಮವಾಗಿ ಅನುಷ್ಠಾನಗೊಳಿಸುತ್ತಿದೆ. ಆದರೆ, ಕೆಲವೆಡೆ ಖಾಸಗಿ ವ್ಯಕ್ತಿಗಳು ನಡೆಸುತ್ತಿರುವ ಕಾಮಗಾರಿಗಳಿಂದಾಗಿ ಗ್ಯಾಸ್ ಪೈಪ್‌ಗಳಿಗೆ ಹಾನಿಯಾಗುತ್ತಿದೆ ಎಂಬ ದೂರುಗಳಿರುವ ಕಾರಣ ಈ ಕ್ರಮ ಕೈಗೊಳ್ಳಲಾಗಿದೆಯೆಂದು ತಿಳಿಸಿದರು.