ಬೆಂಗಳೂರು: ಲಾಕ್‌ಡೌನ್‌ನಿಂದ ಮುಂದೂಡಲ್ಪಟ್ಟಿದ್ದ ಎಸ್ಎಸ್ಎಲ್ಸಿ ಪರೀಕ್ಷೆಗೆ ದಿನಾಂಕ ನಿಗದಿಯಾಗಿದೆ. ಜೂನ್-ಜುಲೈನಲ್ಲಿ ನಡೆಯಲಿರುವ ಪರೀಕ್ಷೆಗೆ ಇಲಾಖೆ ತಯಾರಿ ನಡೆಸುತ್ತಿದೆ. ಪರೀಕ್ಷೆಗೆ ಸಂಬಂಧಿಸಿದಂತೆ ಸುಳ್ಳು ವದಂತಿ ಹರಡುವ ಕಿಡಿಗೇಡಿಗಳ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸುವುದಾಗಿ ಸಾರ್ವಜನಿಕ ಶಿಕ್ಷಣ ಇಲಾಖೆ ಎಚ್ಚರಿಸಿದೆ.
ಪರೀಕ್ಷಾ ಕೇಂದ್ರಗಳಲ್ಲಿ ಕಟ್ಟುನಿಟ್ಟಿನ ಕ್ರಮಗಳನ್ನು ಪಾಲಿಸಿ ವಿದ್ಯಾರ್ಥಿಗಳ ಸುರಕ್ಷತೆ ಕಾಪಾಡಿ ಪರೀಕ್ಷೆಯನ್ನು ನಿಗದಿತ ವೇಳಾಪಟ್ಟಿಯಂತೆ ಸುಲಲಿತವಾಗಿ ನಡೆಸಲು ಆದೇಶಿಸಿದೆ. ಅದರಂತೆ ಜಿಲ್ಲಾ, ತಾಲೂಕು ಮತ್ತು ಪರೀಕ್ಷಾ ಕೇಂದ್ರದಲ್ಲಿ ಕಾರ್ಯನಿರ್ವಹಿಸುವ ಅಧಿಕಾರಿ/ಸಿಬ್ಬಂದಿಗೆ ಸೂಚಿಸಲಾಗಿದೆ.
ಹಾಗೇ ಪರೀಕ್ಷಾ ಪ್ರಾರಂಭದ ಮುನ್ನ ಮತ್ತು ಪರೀಕ್ಷಾ ಅವಧಿಯಲ್ಲಿ ಕೆಲ ಕಿಡಿಗೇಡಿಗಳು ಪರೀಕ್ಷೆಗೆ ಸಂಬಂಧಿಸಿದ ವಿಷಯಗಳ ಕುರಿತಾಗಿ ಸುಳ್ಳು ವದಂತಿ ಹರಡುವುದನ್ನು ಗಮನಿಸಲಾಗಿದೆ. ಈ ಸಂಬಂಧ ಜಿಲ್ಲಾ ಹಂತದಲ್ಲಿ ಸಂಬಂಧಿಸಿದ ಜಿಲ್ಲಾ ಉಪನಿರ್ದೇಶಕರು (ಆಡಳಿತ) ಮತ್ತು ರಾಜ್ಯ ಮಟ್ಟದಲ್ಲಿ ಕಾರ್ಯದರ್ಶಿಗಳು, ಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿ ಇವರನ್ನು ನೋಡಲ್ ಅಧಿಕಾರಿಗಳನ್ನಾಗಿ ನೇಮಿಸಲಾಗಿದೆ.
ಈ ರೀತಿ ಸುಳ್ಳು ವದಂತಿ ಹರಡುವ ಪ್ರಕರಣಗಳು ಇವರ ವ್ಯಾಪ್ತಿಯಲ್ಲಿ ಕಂಡು ಬಂದಲ್ಲಿ, ಅಂತಹ ವ್ಯಕ್ತಿಗಳ ವಿರುದ್ಧ ಕಾನೂನಿನ ಪ್ರಕಾರ ತಕ್ಷಣವೇ ಸಂಬಂಧಿಸಿದ ಪೊಲೀಸ್ ಠಾಣೆಯಲ್ಲಿ ಕ್ರಿಮಿನಲ್ ಮೊಕದ್ದಮೆ ದಾಖಲಿಸಿ ಮಂಡಳಿಗೆ ವರದಿ ನೀಡುವಂತೆ ಸಾರ್ವಜನಿಕ ಶಿಕ್ಷಣ ಇಲಾಖೆ ಆಯುಕ್ತ ಜಗದೀಶ್ ಆದೇಶ ಹೊರಡಿಸಿದ್ದಾರೆ.