ಬೆಂಗಳೂರು: ನಗರದಲ್ಲಿ ಬಿಟ್ ಕಾಯಿನ್ ಎಟಿಎಂ ಕಿಯೋಸ್ಕ್ ಸ್ಥಾಪಿಸಿದ್ದ ವರ್ಚುವಲ್ ಕರೆನ್ಸಿ ವಿನಿಮಯ ಕಂಪನಿ ಯುನೋ ಕಾಯಿನ್ ಸಂಸ್ಥಾಪಕರ ವಿರುದ್ಧ ಸೈಬರ್ ಪೊಲೀಸರು ದಾಖಲಿಸಿದ್ದ ಎಫ್‌ಐಆರ್ ಅನ್ನು ಹೈಕೋರ್ಟ್ ರದ್ದುಪಡಿಸಿದೆ.
ಯುನೋ ಕಾಯಿನ್ ಸಹ ಸಂಸ್ಥಾಪಕರಾದ ಸಾತ್ವಿಕ್ ವಿಶ್ವನಾಥ್ ಮತ್ತು ಬಿ.ಎನ್. ಹರೀಶ್ ತಮ್ಮ ವಿರುದ್ಧ ದಾಖಲಿಸಿರುವ ಪ್ರಕರಣ ರದ್ದುಪಡಿಸುವಂತೆ ಕೋರಿ ಅರ್ಜಿ ಸಲ್ಲಿಸಿದ್ದರು. ಈ ಅರ್ಜಿ ವಿಚಾರಣೆ ನಡೆಸಿದ ನ್ಯಾ.ಹೆಚ್.ಪಿ. ಸಂದೇಶ್ ಅವರಿದ್ದ ಏಕಸದಸ್ಯ ಪೀಠ ಎಫ್ಐಆರ್ ರದ್ದುಪಡಿಸಿದೆ.
ಬಿಟ್ ಕಾಯಿನ್ ವ್ಯವಹಾರವನ್ನು ಆರ್‌ಬಿಐ ನಿರ್ಬಂಧಿಸಿತ್ತು. ಆದರೆ ಸುಪ್ರೀಂಕೋರ್ಟ್ ಬಿಟ್ ಕಾಯಿನ್ ವಿರುದ್ಧದ ನಿರ್ಬಂಧ ರದ್ದುಪಡಿಸಿದೆ. ಹೀಗಾಗಿ ಎಫ್‌ಐಆರ್ ರದ್ದುಪಡಿಸಬಹುದು ಎಂದು ಪೀಠ ಅಭಿಪ್ರಾಯಪಟ್ಟಿದೆ.
ಯುನೋ ಕಾರ್ನ್ ಕಂಪನಿ 2018ರಲ್ಲಿ ಬೆಂಗಳೂರಿನ ಕೆಂಪ್ ಫೋರ್ಟ್ ಮಾಲ್ ಎದುರು ಬಿಟ್ ಕಾಯಿನ್ ಕಿಯೋಸ್ಕ್ ಸ್ಥಾಪನೆ ಮಾಡಿತ್ತು. ಆದರೆ ಅದಕ್ಕೆ ಆರ್ಬಿಐನಿಂದಾಗಲಿ ಅಥವಾ ರಾಜ್ಯ ಸರ್ಕಾರದಿಂದಾಗಲಿ ಅನುಮತಿ ಪಡೆದಿರಲಿಲ್ಲ. ಹೀಗಾಗಿ ಸೈಬರ್ ಪೊಲೀಸರು ಕಂಪನಿಯ ಸಂಸ್ಥಾಪಕರ ವಿರುದ್ಧ ಎಫ್ಐಆರ್ ದಾಖಲಿಸಿದ್ದರು.
ಪೊಲೀಸರ ಈ ಕ್ರಮ ಪ್ರಶ್ನಿಸಿ ಹೈಕೋರ್ಟ್ ಮೆಟ್ಟಿಲೇರಿದ್ದ ಅರ್ಜಿದಾರರು, ಎಫ್ಐಆರ್ ದಾಖಲಿಸಿರುವ ಕ್ರಮ ಕಾನೂನು ಬಾಹಿರ, ಆರ್‌ಬಿಐ ಬಿಟ್ ಕಾಯಿನ್ ವ್ಯವಹಾರಕ್ಕೆ ವಿಧಿಸಿದ್ದ ನಿರ್ಬಂಧವನ್ನು ಸುಪ್ರೀಂಕೋರ್ಟ್ ರದ್ದುಗೊಳಿಸಿದೆ. ಆದರೂ ಪೊಲೀಸರು ನಿಯಮಬಾಹಿರವಾಗಿ ಪ್ರಕರಣ ದಾಖಲು ಮಾಡಿದ್ದು, ಅದನ್ನು ರದ್ದುಗೊಳಿಸಬೇಕು ಎಂದು ಕೋರಿದ್ದರು.
ಇದನ್ನೂ ಓದಿ: ಕ್ರಿಪ್ಟೋಕರೆನ್ಸಿ ಮತ್ತು ಬಿಟ್‌ಕಾಯಿನ್ ಎಂದರೇನು?.. ಇಲ್ಲಿದೆ ಸಂಪೂರ್ಣ ಮಾಹಿತಿ