ಬೆಂಗಳೂರು: ರಸ್ತೆಯಲ್ಲಿ ತಾವು ಬಂದಾಗ ಎದ್ದು ಮರ್ಯಾದೆ ಕೊಡಲಿಲ್ಲವೆಂದು ಯುವಕನೊಬ್ಬನನ್ನು ಪುಂಡರ ಗುಂಪೊಂದು ಮಾರಕಾಸ್ತ್ರ ಹಿಡಿದು ಅಟ್ಟಾಡಿಸಿ ಹಲ್ಲೆ ಮಾಡಿರುವ ಘಟನೆ ಆಗಸ್ಟ್ 27ರಂದು ಮಡಿವಾಳದ ವೆಂಕಟಾಪುರದಲ್ಲಿ ನಡೆದಿದೆ. ರಮೇಶ್ ಹಲ್ಲೆಗೊಳಗಾದ ಯುವಕ. ಸಂಜೆ 6:30 ರ ಸುಮಾರಿಗೆ ರಮೇಶ್ ವೆಂಕಟಾಪುರ ಬಳಿ ಟೀ ಕುಡಿಯಲು ತೆರಳಿದ್ದ. ಈ ವೇಳೆ ಟೀ ಅಂಗಡಿ ಬಳಿ ಬಂದಿದ್ದ ಕಾವೇರಿ ಶಿವು ಮತ್ತವನ ಗ್ಯಾಂಗ್ ರಮೇಶನಿಗೆ 'ಏನೋ ನಾವ್ ಬಂದ್ರು ಎದ್ದೇಳಲ್ವಾ?' ಎಂದು ಅವಾಜ್ ಹಾಕಿದೆ. ನೋಡ ನೋಡುತ್ತಿದ್ದಂತೆ ಮಾರಕಾಸ್ತ್ರ ಹಿಡಿದು ಆತನನ್ನ ಅಟ್ಟಾಡಿಸಿ ಹಲ್ಲೆ ನಡೆಸಿದೆ. ಸದ್ಯ ರಮೇಶ್ ನೀಡಿರುವ ದೂರಿನನ್ವಯ ಮಡಿವಾಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಈ ಬಗ್ಗೆ ಆಗ್ನೇಯ ವಿಭಾಗದ ಡಿಸಿಪಿ ಸಿ ಕೆ ಬಾಬಾ ಮಾತನಾಡಿ, "ಆರೋಪಿ ಶಿವು ಹಾಗೂ ರಮೇಶ್ ಪರಿಚಿತರೇ ಆಗಿದ್ದು ಹಣಕಾಸಿನ ವ್ಯವಹಾರ ಸಹ ಇತ್ತು. ಸೆಪ್ಟೆಂಬರ್ 1ರ ಸಂಜೆ ಮಡಿವಾಳ ಸಮೀಪದ ವೆಂಕಟಾಪುರದಲ್ಲಿ ಕ್ರಿಕೆಟ್ ಆಡುವಾಗ, ಶಿವು ತನ್ನ ಬ್ಯಾಟಿಂಗ್ ಸರದಿ ಬಂದಾಗ ರಮೇಶ್ ಬಳಿ ಬ್ಯಾಟ್ ಕೇಳಿದ್ದ, ಆದರೆ ರಮೇಶ್ ಬ್ಯಾಟ್ ಕೊಟ್ಟಿರಲಿಲ್ಲ. ಇದೇ ಸಿಟ್ಟಿನಿಂದ ಪಂದ್ಯ ಮುಗಿದ ಮೇಲೆ ಶಿವು ಮತ್ತು ಆತನ ಸ್ನೇಹಿತರು ರಮೇಶ್ ನನ್ನ ಅಟ್ಟಾಡಿಸಿ ಹಲ್ಲೆ ಮಾಡಿದ್ದಾರೆ. ಸದ್ಯ ಘಟನೆ ಸಂಬಂಧ ಕೊಲೆಯತ್ನ ಪ್ರಕರಣ ದಾಖಲಾಗಿದ್ದು, ಶಿವು ಸೇರಿದಂತೆ ಕೆಲವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುತ್ತಿದೆ. ಯಾರಿಗೆ ಯಾರು ಹಣ ಕೊಡಬೇಕಿತ್ತು ಅನ್ನೋದು ತನಿಖೆ ನಡೆಯುತ್ತಿದೆ" ಎಂದು ತಿಳಿಸಿದ್ದಾರೆ.
ಸರಗಳ್ಳತನದ ಕುಖ್ಯಾತ ಆರೋಪಿಗಳ ಸೆರೆ: ಮತ್ತೊಂದೆಡೆ, ಜ್ಯುವೆಲರಿ ಅಂಗಡಿಗಳಲ್ಲಿ, ಜನ ನಿಬಿಡ ಸ್ಥಳಗಳಲ್ಲಿ ಗಮನ ಬೇರೆಡೆ ಸೆಳೆದು ಕಳ್ಳತನ ಮಾಡುತ್ತಿದ್ದ ಇಬ್ಬರು ಮಹಿಳೆಯರನ್ನ ಬನಶಂಕರಿ ಠಾಣಾ ಪೊಲೀಸರು ಬಂಧಿಸಿದ್ದಾರೆ. ತಮಿಳುನಾಡು ಮೂಲದ ರತ್ನ ಪೆರುಮಾಳ್ ಹಾಗೂ ಕೃಷ್ಣವೇಣಿ ಬಂಧಿತರು. ಹತ್ತು ವರ್ಷದ ಬಳಿಕ ಇಬ್ಬರು ಖತರ್ನಾಕ್ ಕಳ್ಳಿಯರ ಜೋಡಿಯನ್ನು ಪೊಲೀಸರು ಹೆಡೆಮುರಿ ಕಟ್ಟಿದ್ದಾರೆ. ನಕಲಿ ಚಿನ್ನದೊಂದಿಗೆ ಚಿನ್ನದ ಅಂಗಡಿಗಳಿಗೆ ತೆರಳುತ್ತಿದ್ದ ಆರೋಪಿಗಳು, ಮಾಲೀಕರ ಗಮನ ಬೇರೆಡೆ ಸೆಳೆದು ನಕಲಿ ಚಿನ್ನವನ್ನಿಟ್ಟು ಅಸಲಿ ಚಿನ್ನದೊಂದಿಗೆ ಎಸ್ಕೇಪ್ ಆಗುತ್ತಿದ್ದರು.
ಅಲ್ಲದೇ ದೇವಸ್ಥಾನ, ಸಭೆ ಸಮಾರಂಭಗಳಲ್ಲಿಯೂ ಗಮನ ಬೇರೆಡೆ ಸೆಳೆದು ಚಿನ್ನಾಭರಣ ದೋಚಿ ಪರಾರಿಯಾಗುತ್ತಿದ್ದರು. ಕರ್ನಾಟಕ ಮಾತ್ರವಲ್ಲದೆ ಅನೇಕ ರಾಜ್ಯಗಳಲ್ಲೂ ಕೃತ್ಯ ಎಸಗಿದ್ದ ಆರೋಪಿಗಳು ಇತ್ತೀಚಿಗೆ ಬನಶಂಕರಿ ಠಾಣಾ ವ್ಯಾಪ್ತಿಯ ಚಿನ್ನದ ಅಂಗಡಿಯಲ್ಲಿ ಕೈಚಳಕ ತೋರಿದ್ದರು. ಕೃತ್ಯದ ಸಿಸಿಟಿವಿ ದೃಶ್ಯಾವಳಿ ಆಧರಿಸಿ ತನಿಖೆ ಆರಂಭಿಸಿದ ಬನಶಂಕರಿ ಠಾಣಾ ಪೊಲೀಸರು ತಮಿಳುನಾಡಿಗೆ ತೆರಳಿ ಆರೋಪಿಗಳಿಬ್ಬರನ್ನೂ ಬಂಧಿಸಿದ್ದಾರೆ. ಬರೊಬ್ಬರಿ 10 ವರ್ಷಗಳ ನಂತರ ಆರೋಪಿಗಳು ರಾಜ್ಯದ ಪೊಲೀಸರ ಕೈಗೆ ಸಿಕ್ಕಿದ್ದು ಹಲವು ಪೊಲೀಸ್ ಠಾಣೆಗಳಿಗೆ ಬೇಕಾಗಿರುವ ಆರೋಪಿಗಳ ವಿರುದ್ಧ ತನಿಖೆ ಮುಂದುವರೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಇದನ್ನೂ ಓದಿ: ಮೈಸೂರು: ಸ್ನೇಹಿತನನ್ನೇ ಕೊಂದು, ಬೇರೊಬ್ಬರ ಮೇಲೆ ಹಾಕಲು ಯತ್ನಿಸಿ ಸಿಕ್ಕಿಬಿದ್ದ ಖದೀಮರು