ಬೆಂಗಳೂರು: ಹೊಟ್ಟೆಪಾಡಿಗಾಗಿ ಕೆಲಸ ಮಾಡುವ ಡೆಲಿವರಿಬಾಯ್ಗಳನ್ನು ಗುರಿಯಾಗಿಸಿಕೊಂಡು ರಾತ್ರಿವೇಳೆ ಅವರ ಎಲೆಕ್ಟ್ರಿಕಲ್ ಬೈಕ್ ಗಳನ್ನು ಅಡ್ಡಗಟ್ಟಿ ಮೊಬೈಲ್ ಸುಲಿಗೆ ಮಾಡುತ್ತಿದ್ದ ಇಬ್ಬರು ಸುಲಿಗೆಕೋರರನ್ನು ಸುದ್ದಗುಂಟೆಪಾಳ್ಯ ಪೊಲೀಸರು ಬಂಧಿಸಿ ಜೈಲಿಗಟ್ಟಿದ್ದಾರೆ.
ಅಸ್ಸೋಂ ಮೂಲದ ರಾಕೇಶ್ ಹಾಗೂ ಮಲ್ಲಿಕ್ ಬಂಧಿತ ಆರೋಪಿಗಳು. ಈ ಹಿಂದೆ ಸೆಕ್ಯೂರಿಟಿಗಾರ್ಡ್ಗಳಾಗಿ ಕೆಲಸ ಮಾಡುತ್ತಿದ್ದರು. ಹಣದ ಆಸೆಗಾಗಿ ಅಪರಾಧ ಎಸಗಲು ನಿರ್ಧರಿಸಿದ್ದ ಆರೋಪಿಗಳು, ಎಲೆಕ್ಟ್ರಿಕ್ ಬೈಕ್ ಗಳಲ್ಲಿ ಫುಡ್ ಡೆಲಿವರಿ ಮಾಡುವ ಯುವಕರನ್ನು ಅಡ್ಡಗಟ್ಟಿ ಮೊಬೈಲ್ ಸುಲಿಗೆಗೆ ಇಳಿದಿದ್ದರು.
ಯುಲು ನಂತಹ ಸಣ್ಣ ಎಲೆಕ್ಟ್ರಿಕ್ ಬೈಕ್ ಗಳ ಮುಂದೆ ಡೆಲಿವರಿ ಬಾಯ್ಗಳು ಕ್ಲಿಪ್ ಹಾಕಿ ಮೊಬೈಲ್ ಸಿಕ್ಕಿಸುತ್ತಾರೆ. ರೂಟ್ ಮ್ಯಾಪ್ ನೋಡಲು ಹೀಗೆ ಕ್ಲಿಪ್ ಹಾಕಿ ಸಿಕ್ಕಿಸಿಕೊಳ್ಳುವ ಡೆಲಿವರಿ ಬಾಯ್ಗಳನ್ನು ಟಾರ್ಗೆಟ್ ಮಾಡಿ ಅವರನ್ನು ಹಿಂಬಾಲಿಸಿ ಫಾಲೋ ಮಾಡಿ ಕ್ಷಣಾರ್ಧದಲ್ಲಿ ಹಿಂಬದಿಯಿಂದ ಬೈಕ್ನಲ್ಲಿ ಬಂದು ಮೊಬೈಲ್ ಕಸಿದು ಪರಾರಿಯಾಗುತ್ತಿದ್ದರು.
ಕಳೆದ ಕೆಲ ದಿನಗಳ ಹಿಂದೆ ಸುದ್ದಗುಂಟೆ ಪಾಳ್ಯದಲ್ಲಿ ಮೊಬೈಲ್ ಸುಲಿಗೆ ವೇಳೆ ಡೆಲಿವರಿ ಬಾಯ್ಯೊಬ್ಬ ತನ್ನ ಮೊಬೈಲ್ ರಕ್ಷಿಸಿಕೊಳ್ಳಲು ಹೋಗಿ ಬೈಕ್ನಿಂದ ಸ್ಕಿಡ್ ಆಗಿ ಬಿದ್ದು ಕೈ ಮುರಿದುಕೊಂಡಿದ್ದ. ನಂತರ ಸುದ್ದುಗುಂಟೆಪಾಳ್ಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದ. ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ಪೊಲೀಸರು ವಿಶೇಷ ತಂಡ ರಚಿಸಿ ಆರೋಪಿಗಳ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಆರೋಪಿಗಳ ವಿಚಾರಣೆ ವೇಳೆ ಬರೊಬ್ಬರಿ 32 ಮೊಬೈಲ್ ಸುಲಿಗೆ ಪ್ರಕರಣಗಳು ಬೆಳಕಿಗೆ ಬಂದಿವೆ. ಸದ್ಯ 25 ಮೊಬೈಲ್ ವಶಕ್ಕೆ ಪಡೆದುಕೊಂಡಿದ್ದಾರೆ.