ಬೆಂಗಳೂರು : ರಾಜ್ಯ ರಾಜಧಾನಿಯಲ್ಲಿ ನಕಲಿ ನೋಟುಗಳ ಹಾವಳಿ ಹೆಚ್ಚಾಗುತ್ತಿದೆ. ಪೊಲೀಸರು ಖೋಟಾ ನೋಟಿನ ಜಾಲ ಭೇದಿಸಿ ಆರೋಪಿಗಳನ್ನು ಬಂಧಿಸುತ್ತಿದ್ದರೂ ಮತ್ತೆ ಜಾಲ ವಿಸ್ತರಣೆಯಾಗುತ್ತಿದೆ. ಇತ್ತೀಚೆಗಷ್ಟೇ ತಲಘಟ್ಟಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ 10 ಕೋಟಿ ಮೌಲ್ಯದ ಜೆರಾಕ್ಸ್ ನೋಟುಗಳು ಸಿಕ್ಕಿದ್ದವು.
ಇದೀಗ ಅಕ್ರಮದಲ್ಲಿ ತೊಡಗಿದ್ದ ಮೂವರು ಆರೋಪಿಗಳನ್ನು ಕಾಟನ್‌ಪೇಟೆ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಬಂಧಿತರನ್ನು ತಮಿಳನಾಡು ಮೂಲದ ಶರವಣನ್, ಕೇರಳದ ನಿತಿನ್ ಹಾಗೂ ದೇವನ್ ಎಂದು ಗುರುತಿಸಲಾಗಿದೆ. ಇವರಿಂದ 500 ಮುಖಬೆಲೆಯ 6,53,500 ಬೆಲೆಯ 1307 ಖೋಟಾ ನೋಟು ವಶಪಡಿಸಿಕೊಳ್ಳಲಾಗಿದೆ.
ಬಿಹಾರದಿಂದ ನಕಲಿ ನೋಟು ತಂದು ಬೆಂಗಳೂರಿನಲ್ಲಿ ಚಲಾವಣೆ ಮಾಡುತ್ತಿದ್ದ ಜಾಲವನ್ನು ಭೇದಿಸಿದ ಕಾಟನ್‌ಪೇಟೆ ಠಾಣೆಯ ಇನ್‌ಸ್ಪೆಕ್ಟರ್ ಬಾಲರಾಜ್ ನೇತೃತ್ವದ ತಂಡ ಆರೋಪಿಗಳನ್ನು ಬಂಧಿಸಿದೆ. Fake currency tamlinadu ಹಾಗೂ Motohaker.93 ಇನ್ಸ್ಟಾಗ್ರಾಂ ಅಕೌಂಟ್ ಮೂಲಕ ಗ್ರಾಹಕರಿಗೆ ಗಾಳ ಹಾಕುತ್ತಿದ್ದ ಆರೋಪಿಗಳು 25 ಸಾವಿರ ಅಸಲಿ ನೋಟು ಕೊಟ್ಟರೆ 1 ಲಕ್ಷ ನಕಲಿ ನೋಟುಗಳನ್ನು ನೀಡಿ ಅಕ್ರಮವೆಸಗಿರುವುದು ತನಿಖೆ ವೇಳೆ ಬಯಲಾಗಿದೆ.
ಜನನಿಬಿಡ ಪ್ರದೇಶಗಳಾದ ರೈಲ್ವೇ ಸ್ಟೇಷನ್ ಹಾಗೂ ಬಸ್ ಸ್ಟಾಂಡ್ಗಳಲ್ಲಿ ಆರೋಪಿಗಳು ಖೋಟಾ ನೋಟು ಎಕ್ಸ್‌ಚೇಂಜ್ ಮಾಡುತ್ತಿದ್ದರು. ಎಲ್ಲವನ್ನೂ ಇನ್ಸ್ಟಾಗ್ರಾಮ್ ಮೂಲಕವೇ ವ್ಯವಹರಿಸುತಿದ್ದ ಆರೋಪಿ ಶರವಣನ್ ಬಿಹಾರಕ್ಕೆ ತೆರಳಿ 10 ಲಕ್ಷ ನೋಟಿಗೆ 3 ಲಕ್ಷ ಅಸಲಿ ನೋಟು ನೀಡಿ ಬೆಂಗಳೂರಿಗೆ ತಂದಿದ್ದ. ಬೆಂಗಳೂರಿನಲ್ಲಿ 4 ಸಾವಿರ ಅಸಲಿ ನೋಟಿಗೆ 10 ಸಾವಿರ ಖೋಟಾ ನೋಟು ನೀಡುತ್ತಿದ್ದ. ಸದ್ಯ ಈತನಿಂದ ನಕಲಿ ನೋಟು ಪಡೆದ ಮತ್ತಿಬ್ಬರು ಕೇರಳ ಮೂಲದ ಆರೋಪಿಗಳ ಬಂಧಿಸಲಾಗಿದ್ದು, ಆರೋಪಿಗಳಿಂದ ಸುಮಾರು 6 ಲಕ್ಷಕ್ಕೂ ಹೆಚ್ಚು ಮೌಲ್ಯದ ಖೋಟಾ ನೋಟುಗಳನ್ನು ವಶಕ್ಕೆ ಪಡೆದಿರುವುದಾಗಿ ನಗರ ಪೊಲೀಸ್ ಆಯುಕ್ತ ದಯಾನಂದ ಮಾಹಿತಿ ನೀಡಿದ್ದಾರೆ.
2 ಸಾವಿರ ಮುಖಬೆಲೆಯ ಜೆರಾಕ್ಸ್ ನೋಟುಗಳು ಪತ್ತೆ : ಕಳೆದ ಕೆಲವು ದಿನಗಳ ಹಿಂದೆ ಬೆಂಗಳೂರು ನಗರದ ಹೊರವಲಯದಲ್ಲಿ 2 ಸಾವಿರ ಮುಖಬೆಲೆಯ 10 ಕೋಟಿ ಮೌಲ್ಯದ ಜೆರಾಕ್ಸ್ ನೋಟುಗಳು ಪತ್ತೆಯಾಗಿದ್ದವು. ಕನಕಪುರ ರಸ್ತೆಯ ಪಕ್ಕದಲ್ಲಿದ್ದ ಎರಡು ಬಾಕ್ಸ್ಗಳಲ್ಲಿ ಎರಡು ಸಾವಿರ ಮುಖಬೆಲೆಯ ನಕಲಿ ನೋಟುಗಳು ಸಿಕ್ಕಿದ್ದವು.
ಕನಕಪುರ ರಸ್ತೆಯ ಪಕ್ಕದಲ್ಲಿದ್ದ ಖಾಲಿ ಜಾಗದಲ್ಲಿ ಎರಡು ಬಾಕ್ಸ್ಗಳನ್ನು ಕಂಡ ಸ್ಥಳೀಯರು ಅನುಮಾನಗೊಂಡು ಸಮೀಪದಲ್ಲೇ ಕರ್ತವ್ಯದಲ್ಲಿದ್ದ ಸಂಚಾರಿ ಪೊಲೀಸರಿಗೆ ಮಾಹಿತಿ ನೀಡಿದ್ದರು. ಕೂಡಲೇ ಸ್ಥಳಕ್ಕಾಗಮಿಸಿದ ತಲಘಟ್ಟಪುರ ಕಾನೂನು ಸುವ್ಯವಸ್ಥೆ ವಿಭಾಗದ ಪೊಲೀಸರು ಬಾಕ್ಸ್ ಬಿಚ್ಚಿ ಪರಿಶೀಲಿಸಿದಾಗ ಕಂತೆ-ಕಂತೆ ನೋಟುಗಳು ದೊರತಿದ್ದವು. ಸಂಪೂರ್ಣವಾಗಿ ಪರಿಶೀಲಿಸಿದಾಗ ನಕಲಿ ನೋಟು ಎಂಬುದು ಗೊತ್ತಾಗಿತ್ತು. ಬಳಿಕ ಈ ನಕಲಿ ನೋಟುಗಳನ್ನು ವಶಕ್ಕೆ ಪಡೆದುಕೊಳ್ಳಲಾಗಿತ್ತು.
ಇದನ್ನೂ ಓದಿ : ಮಂಡ್ಯ: ನೋಟಿನ ಕಂತೆ ನಡುವೆ ಬಿಳಿ ಹಾಳೆ ಇಟ್ಟು ವಂಚಿಸಲು ಯತ್ನಿಸಿದವನಿಗೆ ಬಿತ್ತು ಗೂಸಾ