ದೊಡ್ಡಬಳ್ಳಾಪುರ : ರೈಲ್ವೆ ಸ್ಟೇಷನ್ ಬಳಿ ರೈಲ್ವೆ ಸಾಮಗ್ರಿಗಳನ್ನು ಕದಿಯುತ್ತಿದ್ದ ಆರೋಪಿಗಳನ್ನು ರಾತ್ರಿ ಪಾಳಿಯಲ್ಲಿದ್ದ ಸೆಕ್ಯೂರಿಟಿ ಗಾರ್ಡ್ ರೆಡ್ ಹ್ಯಾಂಡಾಗಿ ಹಿಡಿದು ಪೊಲೀಸರಿಗೆ ಒಪ್ಪಿಸಿರುವ ಘಟನೆ ದೊಡ್ಡಬಳ್ಳಾಪುರದಲ್ಲಿ ನಡೆದಿದೆ. ಇದೇ ವೇಳೆ ಸೆಕ್ಯೂರಿಟಿ ಗಾರ್ಡ್ ಕಳ್ಳರ ಕೃತ್ಯವನ್ನು ತಮ್ಮ ಮೊಬೈಲಿನಲ್ಲಿ ಸೆರೆ ಹಿಡಿದಿದ್ದಾರೆ. ಕಳೆದ ಆಗಸ್ಟ್ 22ರಂದು ರಾತ್ರಿ ದೊಡ್ಡಬಳ್ಳಾಪುರ ನಗರದ ರೈಲ್ವೆ ಸ್ಟೇಷನ್ ಬಳಿ ಘಟನೆ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ಸದ್ಯ ಕಳ್ಳರನ್ನು ವಶಕ್ಕೆ ಪಡೆದಿರುವ ಪೊಲೀಸರು, ವಿಚಾರಣೆ ಮುಂದುವರೆಸಿದ್ದಾರೆ.
ಕಳೆದ 9 ತಿಂಗಳಿನಿಂದ ಇಲ್ಲಿನ ರೈಲ್ವೇ ಅಂಡರ್ಪಾಸ್ ಕಾಮಗಾರಿಯನ್ನು ಕೆ ಆರ್ ಪುರಂನ ಎಂ ವಿ ಕನ್ಟ್ರಕ್ಷನ್ ಮಾಡುತ್ತಿದೆ. ಕಳೆದ 3 ತಿಂಗಳಿನಿಂದ ಕಾಮಗಾರಿಯ ಸ್ಥಳದಲ್ಲಿ ಕಬ್ಬಿಣದ ಕಂಬಿಗಳು ಮತ್ತು ಮೋಲ್ಡ್ ಶೀಟ್ಗಳು ಕಳ್ಳತನವಾಗುತ್ತಿದ್ದವು. ಈ ಸಂಬಂಧ ಗುತ್ತಿದಾರರಾದ ರಾಮ್ ಬಾಬು ಸ್ಥಳದಲ್ಲಿ ಸೆಕ್ಯೂರಿಟಿಗಳನ್ನು ನಿಯೋಜನೆ ಮಾಡಿದ್ದರು.
ಆಗಸ್ಟ್ 22ರ ರಾತ್ರಿ 2 ಗಂಟೆ ಸಮಯದಲ್ಲಿ ಟೆಂಪೋದಲ್ಲಿ ಇಬ್ಬರು ಖದೀಮರು ಬಂದಿದ್ದಾರೆ. ಕಾಮಗಾರಿ ಸ್ಥಳದಲ್ಲಿ ಟೆಂಪೋ ನಿಲ್ಲಿಸಿದ ಕಳ್ಳರು ರೈಲ್ವೆ ಇಲಾಖೆಗೆ ಸೇರಿದ ಕಬ್ಬಿಣದ ವಸ್ತುಗಳನ್ನು ಟೆಂಪೋಗೆ ತುಂಬಲು ಮುಂದಾಗಿದ್ದಾರೆ. ಈ ವೇಳೆ ರಾತ್ರಿ ಪಾಳಿಯಲ್ಲಿದ್ದ ಸೆಕ್ಯೂರಿಟಿ ಗಾರ್ಡ್ ಕಳ್ಳರ ಕೃತ್ಯವನ್ನು ತನ್ನ ಮೊಬೈಲ್ ನಲ್ಲಿ ಸೆರೆ ಹಿಡಿದಿದ್ದಾರೆ. ಬಳಿಕ ಇತರ ಸೆಕ್ಯೂರಿಟಿ ಗಾರ್ಡ್ಗಳಿಗೆ ಮಾಹಿತಿ ನೀಡಿದ್ದಾನೆ. ಈ ವೇಳೆ ಸೆಕ್ಯೂರಿಟಿ ಗಾರ್ಡ್ಗಳು ತಕ್ಷಣ ಇಬ್ಬರನ್ನು ಸೆರೆ ಹಿಡಿದಿದ್ದಾರೆ. ಬಳಿಕ ಪೊಲೀಸರಿಗೆ ಒಪ್ಪಿಸಿದ್ದಾರೆ. ಈ ಸಂಬಂಧ ದೊಡ್ಡಬಳ್ಳಾಪುರ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಟೆಕ್ಕಿಯನ್ನು ಬೆದರಿಸಿ ದರೋಡೆಗೈದಿದ್ದ ಏಳು ಜನರ ಬಂಧನ : ಸಾಫ್ಟ್‌ವೇರ್ ಉದ್ಯೋಗಿಯನ್ನು ಬೆದರಿಸಿ ಹಣ ದೋಚಿದ್ದ ಏಳು ಜನರನ್ನು ಮಾರತಹಳ್ಳಿ ಪೊಲೀಸರು ಬಂಧಿಸಿದ್ದಾರೆ. ಮೋಹನ್, ನವೀನ್, ಪುನೀತ್, ಅಭಿ, ರೂಪೇಶ್ ಹಾಗೂ ಪ್ರಶಾಂತ್ ಸೇರಿದಂತೆ ಏಳು ಜನ ಆರೋಪಿಗಳನ್ನು ಬಂಧಿಸಲಾಗಿದೆ. ಕಳೆದ ಭಾನುವಾರ ರಾತ್ರಿ ಮಹೇಶ್ ಎಂಬವರನ್ನು ಬೆದರಿಸಿ ಆರೋಪಿಗಳು ಮೊಬೈಲ್ ಫೋನ್ ಹಾಗೂ ಬೈಕ್ ದೋಚಿ ಪರಾರಿಯಾಗಿದ್ದರು.
ಆಂಧ್ರಪ್ರದೇಶ ಮೂಲದ ಮಹೇಶ್ ಐಟಿಪಿಎಲ್ ಬಳಿಯಿರುವ ಟಿಸಿಎಸ್ ಕಂಪನಿಯಲ್ಲಿ ಸಾಫ್ಟ್‌ವೇರ್ ಇಂಜಿನಿಯರ್ ಆಗಿ ಕೆಲಸ ನಿರ್ವಹಿಸುತ್ತಿದ್ದಾರೆ. ಭಾನುವಾರ ಕೆಲಸಕ್ಕೆ ರಜೆಯಿದ್ದುದ್ದರಿಂದ ಊಟಕ್ಕೆ ತೆರಳಿದ್ದ ಮಹೇಶ್ ಮತ್ತು ಆತನ ಸ್ನೇಹಿತರು ರಾತ್ರಿ 10:30ರ ಸುಮಾರಿಗೆ ಪಣತ್ತೂರು ರಸ್ತೆಯ ಅಂಗಡಿಯೊಂದರ ಬಳಿ ಬಾಳೆಹಣ್ಣು ಖರೀದಿಸಲು ಬೈಕ್ ನಿಲ್ಲಿಸಿದ್ದರು.
ಇದೇ ಸಂದರ್ಭದಲ್ಲಿ ಸ್ಮಶಾನದಲ್ಲಿ ಬರ್ತ್ ಡೆ ಪಾರ್ಟಿ ಮಾಡುತ್ತಿದ್ದ ಅರೋಪಿಗಳ ಗುಂಪಿನಲ್ಲಿದ್ದ ರೂಪೇಶ್ ಅದೇ ಅಂಗಡಿಗೆ ಬಂದು ಮಾಲೀಕನೊಂದಿಗೆ ಗಲಾಟೆ ಮಾಡುತ್ತಿದ್ದ. ಅಂಗಡಿಯಲ್ಲಿ ಬಾಳೆಹಣ್ಣು ಕೇಳುತ್ತಿದ್ದ ತರುಣ್ ಬಳಿ ರೂಪೇಶ್ 'ನಾನು ಇಲ್ಲಿ ಇರುವಾಗ ನೀನು ಯಾರು ಮಧ್ಯದಲ್ಲಿ ಬಂದು ವ್ಯಾಪಾರ ಮಾಡೋದಕ್ಕೆ' ಎಂದು ಮೇಲೆ ಜಗಳ ಆರಂಭಿಸಿದ್ದ. ನಂತರ ತನ್ನ ಸ್ನೇಹಿತರಾದ ಉಳಿದ ಆರೋಪಿಗಳನ್ನು ಕರೆಸಿಕೊಂಡು ಬಂದು ಆತನ ಮೇಲೆ ಹಲ್ಲೆ ಮಾಡಿದ್ದ. ತಕ್ಷಣ ತರುಣ್ ಮತ್ತು ಇತರ ಮೂವರು ಸ್ನೇಹಿತರು ತಪ್ಪಿಸಿಕೊಂಡು ಅವರವರ ಬೈಕ್ ನಲ್ಲಿ ಪರಾರಿಯಾಗಿದ್ದರು. ಆದರೆ ಮಹೇಶ್ ಆರೋಪಿಗಳ ಕೈಗೆ ಸಿಕ್ಕಿಹಾಕಿಕೊಂಡಿದ್ದ. ತಕ್ಷಣ ಆರೋಪಿಗಳು 'ನಿನ್ನ ಸ್ನೇಹಿತರನ್ನು ಕರೆಸು' ಎಂದು ಮಹೇಶ್ ನ ಮೇಲೆ ಹಲ್ಲೆ ಮಾಡಿದ್ದರು. ನಂತರ ಆತನ ಬೈಕ್ ಸಮೇತ ಪಕ್ಕದಲ್ಲಿದ್ದ ಸ್ಮಶಾನದ ಬಳಿ ಕರೆದೊಯ್ದು ಬಿಯರ್ ಬಾಟಲಿಯಿಂದ ಆತನ ತಲೆಗೆ ಹೊಡೆದು ಹಲ್ಲೆ ಮಾಡಿದ್ದರು. ತರುಣ್ ಮನೆ ತೋರಿಸುವಂತೆ ಬೆದರಿಸಿ ಮಹೇಶ್ ನನ್ನ ಆತನ ಮನೆ ಬಳಿ ಕರೆದೊಯ್ದಿದ್ದರು. ಆದರೆ ತರುಣ್ ಮನೆಯಲ್ಲಿ ಇರದಿದ್ದರಿಂದ ಪುನಃ ಮಹೇಶ್ ನನ್ನ ಗುಂಜೂರು ಬಳಿ ಕರೆದೊಯ್ದು ನಾಲ್ಕು ಮೊಬೈಲ್ ಫೋನ್‌ಗಳು, ಯಮಹಾ ಎಫ್.ಜೆಡ್ ಬೈಕ್ ಕಿತ್ತುಕೊಂಡು ಮಧ್ಯರಾತ್ರಿ 1:30 ಗುಂಜೂರು ರಸ್ತೆಯಲ್ಲಿ ಬಿಟ್ಟು ಪರಾರಿಯಾಗಿದ್ದರು.
ಸ್ಥಳದಿಂದ ನಡೆದುಕೊಂಡೇ ಮನೆಗೆ ತೆರಳಿದ್ದ ಮಹೇಶ್, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಬಳಿಕ ಮಾರತಹಳ್ಳಿ ಠಾಣೆಗೆ ದೂರು ನೀಡಿದ್ದ. ದೂರಿನನ್ವಯ ಪ್ರಕರಣ ದಾಖಲಿಸಿಕೊಂಡ ಮಾರತಹಳ್ಳಿ ಠಾಣಾ ಪೊಲೀಸರು ಕೃತ್ಯದಲ್ಲಿ ಭಾಗಿಯಾಗಿದ್ದ ಏಳು ಜನ ಅರೋಪಿಗಳನ್ನ ಬಂಧಿಸಿದ್ದಾರೆ.
ಗಣೇಶ ಕೂರಿಸುವ ವಿಚಾರಕ್ಕೆ ಗಲಾಟೆ, ಯುವಕನಿಗೆ ಚಾಕು ಇರಿತ : ಗಣೇಶ ಕೂರಿಸುವ ವಿಚಾರಕ್ಕೆ ಆರಂಭವಾದ ಗಲಾಟೆ ವೇಳೆ ಯುವಕನಿಗೆ ಚಾಕು ಇರಿದಿರುವ ಘಟನೆ ತಡರಾತ್ರಿ ಹಲಸೂರು ಗೇಟ್ ಪೊಲೀಸ್ ಠಾಣಾ ವ್ಯಾಪ್ತಿಯ ಧರ್ಮರಾಯ ಸ್ವಾಮಿ ದೇವಾಲಯದ ಬಳಿ ನಡೆದಿದೆ. ಅಜಿತ್ ಎಂಬಾತ ಚಾಕು ಇರಿತಕ್ಕೊಳಗಾದ ಯುವಕ. ಆರೋಪಿ ಸುಮನ್ ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ.
ಪರಿಚಿತರಾಗಿರುವ ಸುಮನ್ ಮತ್ತು ಅಜಿತ್ ನಡುವೆ ಗಣೇಶ ಕೂರಿಸುವ ವಿಚಾರವಾಗಿ ಗಲಾಟೆ ಆರಂಭವಾಗಿತ್ತು. ಈ ವೇಳೆ ಸಿಟ್ಟಿಗೆದ್ದ ಸುಮನ್, ಅಜಿತ್ನ ಎದೆ, ಕುತ್ತಿಗೆ, ಬೆನ್ನು ಸೇರಿ ಐದಾರು ಕಡೆ ಚಾಕುವಿನಿಂದ ಇರಿದಿದ್ದಾನೆ. ಘಟನೆ ಬಳಿಕ ಗಾಯಾಳು ಅಜಿತ್ನನ್ನು ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ಸಂಬಂಧ ಆರೋಪಿ ಸುಮನ್ನನ್ನು ಹಲಸೂರು ಗೇಟ್ ಠಾಣಾ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಘಟನಾ ಸ್ಥಳಕ್ಕೆ ಕೇಂದ್ರ ವಿಭಾಗದ ಡಿಸಿಪಿ ಶ್ರೀನಿವಾಸ್ ಗೌಡ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಇದನ್ನೂ ಓದಿ : ಕೋಲಾರ: ಅನ್ಯಜಾತಿಯ ಯುವಕನನ್ನು ಪ್ರೀತಿಸಿದ್ದಕ್ಕೆ ಮಗಳನ್ನೇ ಕೊಂದ ತಂದೆ