ಬೆಂಗಳೂರು : ಮ್ಯಾಟ್ರಿಮೊನಿಯಲ್ಲಿ ಪರಿಚಯವಾದ ಮಹಿಳೆಯೊಬ್ಬಳು ಟೆಕ್ಕಿಯೊಬ್ಬರಿಂದ 1.14 ಕೋಟಿ ದೋಚಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ. 41 ವರ್ಷದ ಟೆಕ್ಕಿಯೊಬ್ಬರು ನೀಡಿರುವ ದೂರಿನನ್ವಯ ವೈಟ್ ಫೀಲ್ಡ್ ಸಿಇಎನ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪ್ರಕರಣ ದಾಖಲಾಗುತ್ತಿದ್ದಂತೆ ಕಾರ್ಯಪ್ರವೃತ್ತರಾದ ಪೊಲೀಸರು ಆರೋಪಿಯ ಖಾತೆಯಿಂದ 84 ಲಕ್ಷ ರೂ. ಹಣವನ್ನು ತಡೆಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ.
ಯುಕೆ ಮೂಲದ ಕಂಪನಿಯೊಂದರಲ್ಲಿ ಉದ್ಯೋಗಿಯಾಗಿರುವ ದೂರುದಾರ, ಸಾಫ್ಟ್‌ವೇರ್‌ವೊಂದರ ತರಬೇತಿ ಪಡೆಯಲು ಬೆಂಗಳೂರಿಗೆ ಬಂದಿದ್ದರು. ಇದೇ ಸಂದರ್ಭದಲ್ಲಿ ಮದುವೆಯಾಗುವ ಉದ್ದೇಶದಿಂದ ಮ್ಯಾಟ್ರಿಮೊನಿಯಲ್ಲಿ ನೋಂದಣಿಯಾಗಿದ್ದರು. ಅದೇ ಮ್ಯಾಟ್ರಿಮೊನಿಯಲ್ಲಿ ಸಾನ್ವಿ ಅರೋರಾ ಎಂಬ ಹೆಸರಿನಲ್ಲಿ ಪರಿಚಯವಾದ ಮಹಿಳೆ ಜುಲೈ 7ರಂದು ದೂರುದಾರರಿಗೆ ವಿಡಿಯೋ ಕರೆ ಮಾಡಿದ್ದಾಳೆ.
ವೈಟ್ ಫೀಲ್ಡ್ ಠಾಣೆಗೆ ದೂರು: ಕರೆ ಸ್ವೀಕರಿಸಿದಾಗ ಆರೋಪಿಯು ನಗ್ನವಾಗಿದ್ದು, ದೂರುದಾರನಿಗೆ ತಿಳಿಯದಂತೆ ವಿಡಿಯೋ ಚಿತ್ರೀಕರಣ ಮಾಡಿಕೊಂಡಿದ್ದಾಳೆ. ಬಳಿಕ ಬ್ಲ್ಯಾಕ್‌ಮೇಲ್ ಮಾಡಿ ಹಣಕ್ಕಾಗಿ ಬೇಡಿಕೆಯಿಟ್ಟಿದ್ದು, ಇಲ್ಲವಾದಲ್ಲಿ ವಿಡಿಯೋವನ್ನು ದೂರುದಾರನ ಪೋಷಕರಿಗೆ ಕಳಿಸುವುದಾಗಿ ಬೆದರಿಕೆಯೊಡ್ಡಿದ್ದಾಳೆ. ಇದರಿಂದ ಬೆದರಿದ ದೂರುದಾರರು ಆರೋಪಿಯು ತಿಳಿಸಿದಂತೆ ಆಕೆಯ ಬ್ಯಾಂಕ್ ಖಾತೆಗಳು, ಯುಪಿಐಗಳಿಗೆ ಹಂತಹಂತವಾಗಿ ಒಟ್ಟು 1 ಕೋಟಿ 14 ಲಕ್ಷ 18 ಸಾವಿರದ 121 ರೂಪಾಯಿ ವರ್ಗಾಯಿಸಿದ್ದಾರೆ. ಬಳಿಕ ವೈಟ್ ಫೀಲ್ಡ್ ಠಾಣೆಗೆ ದೂರು ನೀಡಿದ್ದಾರೆ.
84 ಲಕ್ಷ ರೂ. ತಡೆಹಿಡಿದ ಪೊಲೀಸರು: ದೂರಿನನ್ವಯ ಪ್ರಕರಣ ದಾಖಲಿಸಿಕೊಂಡು ಆರೋಪಿಯ ಖಾತೆಯಲ್ಲಿ ಸಂಗ್ರಹವಾಗಿದ್ದ 84 ಲಕ್ಷ ರೂಪಾಯಿ ತಡೆಹಿಡಿದಿದ್ದೇವೆ. ಆರೋಪಿ 30 ಲಕ್ಷ ರೂ. ಬಳಕೆ ಮಾಡಿಕೊಂಡಿದ್ದಾಳೆ. ಆನ್‌ಲೈನ್‌ನಲ್ಲಿ ಪರಿಚಯವಾದವರೊಂದಿಗೆ ವ್ಯವಹರಿಸುವ ಮುನ್ನ ಸಾರ್ವಜನಿಕರು ಸಾಕಷ್ಟು ಎಚ್ಚರ ವಹಿಸಬೇಕು ಎಂದು ವೈಟ್ ಫೀಲ್ಡ್ ವಿಭಾಗದ ಡಿಸಿಪಿ ಎಸ್ ಗಿರೀಶ್ ತಿಳಿಸಿದ್ದಾರೆ.
ಲಕ್ಷಾಂತರ ರೂ. ಮೋಸ ಮಾಡಿದ ಕಂಪನಿ: ಇನ್ನೊಂದೆಡೆ ಮೋಸ ಹೋಗುವವರು ಇರುವವರೆಗೆ ಮೋಸ ಮಾಡುವವರು ಇರುತ್ತಾರೆ ಎನ್ನುವ ಮಾತಿನಂತೆ ಮತ್ತೊಂದು ವಂಚನೆ ಪ್ರಕರಣ (ಜುಲೈ 22-2023)ರಂದು ಬೆಳಕಿಗೆ ಬಂದಿತ್ತು. ಹಣ ಹೂಡಿಕೆ ಮಾಡುವ ಮೂಲಕ ದುಪ್ಪಟ್ಟು ಲಾಭ ಪಡೆಯಲು ಹೋಗಿ ಮಹಿಳೆಯರೇ ಕೈ ಸುಟ್ಟುಕೊಂಡಿದ್ದ ಘಟನೆ ಹುಬ್ಬಳ್ಳಿಯಲ್ಲಿ ಬೆಳಕಿಗೆ ಬಂದಿತ್ತು. ಹುಬ್ಬಳ್ಳಿಯ ಗಿರಿಜಾ ಹಿರೇಮಠ ಹಾಗೂ ವಿಜೇತಾ ಅವರು ತಮಗಾದ ಮೋಸದ ಬಗ್ಗೆ ಪೊಲೀಸ್ ಠಾಣೆ ಮೆಟ್ಟಿಲೇರಿದ್ದರು.
ಕಂಪನಿಯೊಂದಕ್ಕೆ 16,11,982 ಹಾಗೂ 2,00,000 ರೂಪಾಯಿ ಹಣವನ್ನು ಬ್ಯಾಂಕ್ ಮೂಲಕ ವರ್ಗಾವಣೆ ಮಾಡುವ ಮೂಲಕ ವಂಚನೆಗೆ ಒಳಗಾಗಿದ್ದರು. ಕಂಪನಿಯ ಮರುಳು ಮಾತುಗಳಿಗೆ ಹಾಗೂ ಗ್ರಾಸರಿ ಪ್ರಾಡಕ್ಟ್ಗಳಿಗೆ ಶೇ 33% ರಿಯಾಯಿತಿ ಆಸೆಗೆ ಬಿದ್ದು, ಒಬ್ಬ ಮಹಿಳೆ 17 ಲಕ್ಷ ಮತ್ತೊಬ್ಬ ಮಹಿಳೆ 2 ಲಕ್ಷ ರೂಪಾಯಿ ಹಣವನ್ನು ಬಂಡವಾಳ ಹೂಡಿದ್ದರು.
ಸಾಕಷ್ಟು ಜನ ಹಣವನ್ನು ಹೂಡಿಕೆ ಮಾಡಿದ್ದರು: ಹುಬ್ಬಳ್ಳಿಯ ನಾಲ್ಕೈದು ಕಡೆಗಳಲ್ಲಿ ಕಂಪನಿ ಮಳಿಗೆಗಳನ್ನು ತೆರೆದಿದ್ದು, ಜನ ಖರೀದಿಸುವ ಉತ್ಪನ್ನಗಳ ಮೇಲೆ ಭಾರೀ ಪ್ರಮಾಣದಲ್ಲಿ ರಿಯಾಯಿತಿ ನೀಡುವುದರ ಜೊತೆಗೆ ಹೊಸ ಔಟ್ಲೆಟ್ಗಳನ್ನು ಮಾಡಿದರೆ, ಇಂತಿಷ್ಟು ಮಾಸಿಕ ಲಾಭ ನೀಡುವುದಾಗಿ ಜನರನ್ನು ನಂಬಿಸಿದ್ದರು. ಇದರ ಆಸೆಗೆ ಬಿದ್ದ ಸಾಕಷ್ಟು ಜನ ಹಣವನ್ನು ಹೂಡಿಕೆ ಮಾಡಿದ್ದರು. ಪ್ರಾರಂಭದಲ್ಲಿ ಹಣ ಹೂಡಿಕೆ ಮಾಡಿದವರಿಗೆ ಪ್ರಾಡಕ್ಟ್ಗಳನ್ನು ಕೊಟ್ಟಿದ್ದು, ನಂತರದಲ್ಲಿ ಕಂಪನಿಯವರು ಉತ್ಪನ್ನಗಳನ್ನು ಕೊಡದೇ ಎಸ್ಕೇಪ್ ಆಗಿರುವುದು ಜನರ ಆಕ್ರೋಶಕ್ಕೆ ಕಾರಣವಾಗಿತ್ತು.
ಇದನ್ನೂ ಓದಿ: ಹುಬ್ಬಳ್ಳಿ: ಮಹಿಳೆಯರಿಗೆ ರಿಯಾಯಿತಿ ಆಸೆ ತೋರಿಸಿ ಲಕ್ಷಾಂತರ ರೂ ಮೋಸ ಮಾಡಿದ ಕಂಪನಿ.. ಆರೋಪ