ಬೆಂಗಳೂರು: ಚಲನಚಿತ್ರ ನಿರ್ಮಾಣಕ್ಕಾಗಿ ಸಾಲ ಪಡೆದ ಸಹೋದರ, ಸಾಲ ಮರುಪಾವತಿಸದೇ ಜೀವ ಬೆದರಿಕೆ ಹಾಕುತ್ತಿದ್ದಾನೆ ಎಂದು ಆರೋಪಿಸಿ ಉದಯೋನ್ಮುಖ ನಟರೊಬ್ಬರು ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾರೆ. ನಾಯಕ ನಟ, ನಿರ್ದೇಶಕನಾಗಿ ಗುರುತಿಸಿಕೊಂಡಿರುವ ರೂಪೇಶ್ ಎಂಬವರು ತಮ್ಮ ಸಹೋದರ ಗಿರೀಶ್ ವಿರುದ್ಧ ಮಹಾಲಕ್ಷ್ಮಿ ಲೇಔಟ್ ಪೊಲೀಸ್ ಠಾಣೆದಗೆ ದೂರು ಸಲ್ಲಿಸಿದ್ದಾರೆ.
ಗಿರೀಶ್ 2014-19ರ ಅವಧಿಯಲ್ಲಿ 'ಸಾರೀ ಕಣೇ' ಹಾಗೂ 'ಧೂಳಿಪಟ' ಎಂಬ ಹೆಸರಿನ ಎರಡು ಚಿತ್ರಗಳ ನಿರ್ಮಾಣದ ಜವಾಬ್ದಾರಿ ವಹಿಸಿದ್ದರು. ಎರಡೂ ಚಿತ್ರಗಳಿಗೆ ಗಿರೀಶ್ ಸಹೋದರ ರೂಪೇಶ್ ನಾಯಕ ನಟನಾಗಿ, ನಿರ್ದೇಶಕನಾಗಿ ಕೆಲಸ ಮಾಡಿದ್ದರು. ಚಿತ್ರೀಕರಣದ ವೇಳೆ ಹಣವಿಲ್ಲ ಎಂದಿದ್ದ ಗಿರೀಶ್, ರೂಪೇಶ್ ಅವರಿಂದ 33 ಲಕ್ಷ ರೂ. ಸಾಲ ಪಡೆದುಕೊಂಡಿದ್ದರಂತೆ. ಅಲ್ಲದೇ ರೂಪೇಶ್‌ನನ್ನು ಸಾಕ್ಷಿಯಾಗಿರಿಸಿಕೊಂಡು ಬೇರೆ ಬೇರೆ ವ್ಯಕ್ತಿಗಳಿಂದ ಒಟ್ಟು 1 ಕೋಟಿ 10 ಲಕ್ಷ ರೂ ಸಾಲ ಪಡೆದಿದ್ದರಂತೆ. ನಂತರ ಹಣ ವಾಪಸ್ ನೀಡದೆ, ಕೇಳಿದರೆ ಕೊಲ್ಲುವುದಾಗಿ ಬೆದರಿಕೆ ಹಾಕಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖಿಸಿದ್ದಾರೆ.
ಇದಲ್ಲದೇ ಗಿರೀಶ್ ತನ್ನ ಸ್ನೇಹಿತರಾದ ಅಂಜುಂ, ವಿ.ಕೆ. ಮೂರ್ತಿ ಹಾಗೂ ಮೋಹನ್ ಎಂಬವರಿಂದ ಕರೆ ಮಾಡಿಸಿ, 'ನೀನು ಹಣ ನೀಡಿಯೇ ಇಲ್ಲ ಎಂದು ಬರೆದುಕೊಡಬೇಕು' ಎಂದು ಬೆದರಿಕೆ ಹಾಕಿಸುತ್ತಿದ್ದಾರೆ ಎಂದು ಆರೋಪಿಸಲಾಗಿದೆ. ಸದ್ಯ ರೂಪೇಶ್ ನೀಡಿದ ದೂರಿನ ಅನ್ವಯ ಗಿರೀಶ್ ಹಾಗೂ ಆತನ ಸ್ನೇಹಿತರಾದ ಅಂಜುಂ, ವಿ.ಕೆ. ಮೂರ್ತಿ ಹಾಗೂ ಮೋಹನ್ ವಿರುದ್ಧ ಮಹಾಲಕ್ಷ್ಮಿ ಲೇಔಟ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ: ವಿಜಯನಗರ: ಸಾಹಿತಿ ಕುಂ.ವೀರಭದ್ರಪ್ಪಗೆ 16ನೇ ಬಾರಿ ಬಂದ ಬೆದರಿಕೆ ಪತ್ರ
ಸಾಹಿತಿ ಬಂಜಗೆರೆ ಜಯಪ್ರಕಾಶ್ಗೆ ಜೀವ ಬೆದರಿಕೆ: ಸಾಹಿತಿ ಬಂಜಗೆರೆ ಜಯಪ್ರಕಾಶ್ ಅವರಿಗೆ ಇತ್ತೀಚೆಗೆ ಜೀವ ಬೆದರಿಕೆ ಪತ್ರ ಬಂದಿತ್ತು. ಅನಾಮಿಕನೊಬ್ಬನಿಂದ ಬಂದಿರುವ ಪತ್ರ ಇದಾಗಿತ್ತು. ಬಂಡಾಯ ಸಾಹಿತಿಯಾಗಿ ಗುರುತಿಸಿಕೊಂಡಿರುವ ಸಾಹಿತಿ ಬಂಜಗೆರೆ ಜಯಪ್ರಕಾಶ್ ಹಾರೋಹಳ್ಳಿ ಠಾಣೆಗೆ ದೂರು ನೀಡಿದ್ದರು. ಪ್ರಕರಣ ದಾಖಲಾಗಿದ್ದು, ತನಿಖೆ ನಡೆಯುತ್ತಿದೆ. ಜೀವ ಬೆದರಿಕೆ ಪತ್ರ ಸಿಕ್ಕಿದ ಹಿನ್ನೆಲೆ ಹಾರೋಹಳ್ಳಿಯಲ್ಲಿರುವ ಬಂಜಗೆರೆ ಮನೆಗೆ ಪೊಲೀಸರು ಭೇಟಿ ನೀಡಿ ವಿಚಾರಣೆ ನಡೆಸುದ್ದರು.
ಇದನ್ನೂ ಓದಿ: ಸಾಹಿತಿ ಬಂಜಗೆರೆ ಜಯಪ್ರಕಾಶ್ಗೆ ಜೀವ ಬೆದರಿಕೆ ಪತ್ರ: ದೂರು ದಾಖಲು
ಕೆಎಎಸ್ ಅಧಿಕಾರಿಗೆ ಸಹೋದರನಿಂದಲೇ ಜೀವ ಬೆದರಿಕೆ: ಇತ್ತೀಚೆಗೆ ಕರ್ನಾಟಕ ಆಡಳಿತ ಸೇವೆ (ಕೆಎಎಸ್) ಮಹಿಳಾ ಅಧಿಕಾರಿಗೆ ಸ್ವಂತ ಸಹೋದರನೇ ಬೆದರಿಕೆ ಹಾಕಿರುವ ಆರೋಪ ಕೇಳಿ ಬಂದಿದ್ದು ಜಯನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಚಿಕ್ಕಬಳ್ಳಾಪುರ ಜಿಲ್ಲಾ ಪಂಚಾಯತ್ ಅಧಿಕಾರಿ ಡಾ. ಮೈತ್ರಿ ನೀಡಿರುವ ದೂರಿನನ್ವಯ ಅವರ ಸಹೋದರ ಡಾ.ಸಂಜಯ್ ವಿರುದ್ಧ ಹಲ್ಲೆ, ಜೀವ ಬೆದರಿಕೆ ಆರೋಪದಡಿ ಪ್ರಕರಣ ದಾಖಲಾಗಿತ್ತು.
ಇದನ್ನೂ ಓದಿ: ಮಹಿಳಾ KAS ಅಧಿಕಾರಿಗೆ ಸಹೋದರನಿಂದಲೇ ಜೀವ ಬೆದರಿಕೆ: ಪ್ರಕರಣ ದಾಖಲು