ಬೆಂಗಳೂರು: ಹೆಂಡತಿಗೆ ಅಕ್ರಮ ಸಂಬಂಧವಿದೆ ಎಂದು ಆರೋಪಿಸಿದ ಗಂಡ ಆಕೆಯನ್ನು ಹತ್ಯೆಗೈದು ಪೊಲೀಸ್ ಠಾಣೆಗೆ ಬಂದು ಶರಣಾದ ಘಟನೆ ತಡರಾತ್ರಿ ಚಂದ್ರಾಲೇಔಟ್ ಠಾಣಾ ವ್ಯಾಪ್ತಿಯ ಶಿವಾನಂದ ನಗರದಲ್ಲಿ ನಡೆದಿದೆ. ಗೀತಾ (33) ಎಂಬಾಕೆಯ ತಲೆಗೆ ಬಲವಾದ ಆಯುಧದಿಂದ ಹೊಡೆದು, ಹತ್ಯೆಗೈದ ಬಳಿಕ ಆಕೆಯ ಪತಿ ಶಂಕರ್ ಪೊಲೀಸ್ ಠಾಣೆಗೆ ತೆರಳಿ ತಪ್ಪೊಪ್ಪಿಕೊಂಡಿದ್ದಾನೆ.
ಘಟನೆ ಹಿನ್ನೆಲೆ: ಹದಿಮೂರು ವರ್ಷಗಳ ಹಿಂದೆ ಶಂಕರ್ ಹಾಗೂ ಹೊಸೂರು ಮೂಲದ ಗೀತಾಗೆ ಮದುವೆಯಾಗಿತ್ತು. ದಂಪತಿಗೆ ಇಬ್ಬರು ಮಕ್ಕಳಿದ್ದಾರೆ. ಆದರೆ ಗೀತಾಳಿಗೆ ಬೇರೊಬ್ಬನೊಂದಿಗೆ ಸಂಬಂಧವಿದೆ ಎಂದು ಇತ್ತೀಚೆಗೆ ಇಬ್ಬರ ನಡುವೆ ಗಲಾಟೆ ನಡೆಯುತ್ತಿತ್ತು. ಕಳೆದ ಹದಿನೈದು ದಿನಗಳಿಂದಲೂ ಇದೇ ವಿಚಾರವಾಗಿ ದಂಪತಿ ಜಗಳವಾಡುತ್ತಿದ್ದರು. ನಿನ್ನೆ ರಾತ್ರಿ ಗೀತಾಳ ತಾಯಿಗೆ ಕರೆ ಮಾಡಿದ್ದ ಶಂಕರ್, ಆಕೆಯನ್ನು ಹತ್ಯೆಗೈದಿರುವುದಾಗಿ ತಿಳಿಸಿ ಕರೆ ಸ್ಥಗಿತಗೊಳಿಸಿದ್ದ. ಗೀತಾಳ ತಾಯಿ ಹೊಸೂರಿನಿಂದ ಮಗಳ ಮನೆಗೆ ಬಂದು ನೋಡಿದಾಗ ಆಕೆ ಕೊಲೆಯಾಗಿರುವುದು ತಿಳಿದು ಬಂದಿದೆ.
ಪತ್ನಿಗೆ ಬೇರೆ ಸಂಬಂಧವಿದೆ ಎಂದು ಬೇಸತ್ತಿದ್ದ ಶಂಕರ್, ಹತ್ಯೆಯ ಬಳಿಕ ತನ್ನ ಬಳಿ ಆಕೆಯ ಅಕ್ರಮ ಸಂಬಂಧದ ವಿಡಿಯೋಗಳಿವೆ. ತಾನು ಪೊಲೀಸರ ಮುಂದೆ ಶರಣಾಗುತ್ತಿದ್ದೇನೆ. ಮಕ್ಕಳನ್ನು ನೀವು ನೋಡಿಕೊಳ್ಳಬೇಕು ಎಂದು ತಮ್ಮ ಬಳಿ ಹೇಳಿ ತೆರಳಿದ್ದಾನೆ ಎಂದು ಸ್ಥಳಿಯರು ತಿಳಿಸಿದ್ದಾರೆ. ಸದ್ಯ ಪ್ರಕರಣ ದಾಖಲಿಸಿಕೊಂಡು ಆರೋಪಿಯನ್ನು ಬಂಧಿಸಿರುವ ಚಂದ್ರಾಲೇಔಟ್ ಠಾಣಾ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.
ವರದಕ್ಷಿಣೆ ಕಿರುಕುಳಕ್ಕೆ ಬೇಸತ್ತ ಗೃಹಿಣಿ ಆತ್ಮಹತ್ಯೆ: ಗಂಡನ ಮನೆಯವರ ವರದಕ್ಷಿಣೆ ಕಿರುಕುಳಕ್ಕೆ ಬೇಸತ್ತ ಗೃಹಿಣಿ ಆತ್ಮಹತ್ಯೆಗೆ ಶರಣಾದ ಘಟನೆ ಕಬ್ಬನ್ ಪೇಟೆಯ 2ನೇ ಮುಖ್ಯ ರಸ್ತೆಯ ಮನೆಯಲ್ಲಿ ನಡೆದಿದೆ. ಐಶ್ವರ್ಯ (24) ಮೃತ ಮಹಿಳೆ. ವಾಟ್ಸ್‌ಆ್ಯಪ್ ಮೂಲಕ ಕುಟುಂಬಸ್ಥರಿಗೆ ಡೆತ್ ನೋಟ್ ರವಾನಿಸಿ ಮನೆಯಲ್ಲಿ ಯಾರೂ ಇಲ್ಲದ ಸಮಯ ನೋಡಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಘಟನೆಯ ಹಿನ್ನೆಲೆ: ಬಿಇ ಪದವೀಧರೆಯಾಗಿದ್ದ ಐಶ್ವರ್ಯಾಗೆ 2020ರಲ್ಲಿ ಮಂಜುನಾಥ್ ಜತೆಗೆ ವಿವಾಹವಾಗಿತ್ತು. 240 ಗ್ರಾಂ. ಚಿನ್ನಾಭರಣ 2 ಲಕ್ಷ ರೂ. ವರದಕ್ಷಿಣೆ ನೀಡಿ ಮದುವೆ ಮಾಡಿಕೊಡಲಾಗಿತ್ತು. ಮಂಜುನಾಥ್ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ. ದಂಪತಿಗೆ ಒಂದೂವರೆ ವರ್ಷದ ಮಗು ಸಹ ಇದೆ. ಮದುವೆಯ ನಂತರವೂ ಗಂಡನ ಮನೆಯವರು ವರದಕ್ಷಿಣೆಗಾಗಿ ಪೀಡಿಸಿದ ಕಾರಣ ಐಶ್ವರ್ಯಾ ಪೋಷಕರು ಪುನಃ ಐದು ಲಕ್ಷ ನೀಡಿದ್ದರು.
ಆದರೆ ವರದಕ್ಷಿಣೆಗಾಗಿ ಗಂಡನ ಮನೆಯವರ ಕಿರುಕುಳ ನಿಲ್ಲದಿದ್ದರಿಂದ ಬೇಸತ್ತ ಐಶ್ವರ್ಯಾ, ಪತಿ ಮಂಜುನಾಥ್, ಮಾವ ರಾಜೇಂದ್ರನ್, ಅತ್ತೆ ರತ್ನ, ನಾದಿನಿ ಸುಧಾ ವಿರುದ್ದ ಡೆತ್ ನೋಟ್ ಬರೆದು ವಾಟ್ಸ್ಯಾಪ್ ಮೂಲಕ ಪೋಷಕರಿಗೆ ಕಳುಹಿಸಿ ಆತ್ಮಹತ್ಯೆಗೆ ಶರಣಾಗಿದ್ದಾರೆ. ಸ್ಥಳಕ್ಕೆ ಹಲಸೂರುಗೇಟ್ ಠಾಣಾ ಪೊಲೀಸರು ಭೇಟಿ ನೀಡಿದ್ದು, ಪ್ರಕರಣ ದಾಖಲಿಸಿಕೊಂಡಿದ್ದಾರೆ. ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ವಿಕ್ಟೋರಿಯಾ ಆಸ್ಪತ್ರೆಗೆ ರವಾನಿಸಲಾಗಿದೆ.
ಇದನ್ನೂ ಓದಿ: ಕಾಲೇಜು ವಿದ್ಯಾರ್ಥಿ ಅನುಮಾನಾಸ್ಪದ ಸಾವು: ಪೋಷಕರಿಂದ ದೂರು ದಾಖಲು