ಬೆಂಗಳೂರು: ಪತ್ನಿ ಸರಿಯಿಲ್ಲ ಎಂದು ಹಾಡಹಗಲೇ ಪತಿಯೇ ಆಕೆಗೆ ಚಾಕು ಇರಿದಿರುವ ಘಟನೆ ಜೂನ್ 21 ರಂದು ಸಂಜೆ ಬಾಣಸವಾಡಿಯ ಸೆಂಟ್ ಜೋಸೆಫ್ ಚರ್ಚ್ ಬಳಿ ನಡೆದಿದೆ. ನಿಖಿತಾ (30) ತನ್ನ ಗಂಡ ದಿವಾಕರ್ನಿಂದ ಚಾಕು ಇರಿತಕ್ಕೊಳಗಾಗಿದ್ದು ಸದ್ಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಚಾಕು ಇರಿದ ದಿವಾಕರ್ ಹಾಗೂ ಕೃತ್ಯಕ್ಕೆ ಸಾಥ್ ನೀಡಿದ್ದ ಆತನ ಚಿಕ್ಕಪ್ಪನ ಮಗ ಪ್ರತೀಭ್ನನ್ನು ಬಾಣಸವಾಡಿ ಠಾಣಾ ಪೊಲೀಸರು ಬಂಧಿಸಿದ್ದಾರೆ.
ನಿಖಿತಾ ಹಾಗೂ ದಿವಾಕರ್ 9 ವರ್ಷಗಳ ಹಿಂದೆ ಪ್ರೀತಿಸಿ ವಿವಾಹವಾಗಿದ್ದರು. ಅತಿಯಾದ ಮದ್ಯಪಾನದ ಚಟ ಹೊಂದಿದ್ದ ದಿವಾಕರನಿಂದ ದೂರವಾಗಿದ್ದ ನಿಖಿತಾ ಲಿಂಗರಾಜಪುರದಲ್ಲಿ ಪ್ರತ್ಯೇಕವಾಗಿ ವಾಸವಿದ್ದರು. ಇತ್ತೀಚಿಗೆ ಪುನಃಶ್ಚೇತನ ಕೇಂದ್ರದಲ್ಲಿ ಚಿಕಿತ್ಸೆ ಪಡೆದು ಬಂದಿದ್ದ ದಿವಾಕರ್ ತನ್ನ ಚಿಕ್ಕಪ್ಪನ ಮಗ ಪ್ರತೀಭ್ ಮನೆಯ ಸಮೀಪದಲ್ಲಿ ವಾಸವಿದ್ದ.
ಪತ್ನಿ ಸರಿಯಿಲ್ಲ ಎಂದು ಅನುಮಾನ ಹೊಂದಿದ್ದ ದಿವಾಕರ್ ಆಕೆಯ ಹತ್ಯೆಗೆ ಸಂಚು ರೂಪಿಸಿದ್ದ. ಅದರಂತೆ ಜೂನ್ 21ರಂದು ಲಿಂಗಾರಾಜಪುರಂನ ಅವರ ಮನೆಯಿಂದ ಕರೆದೊಯ್ಯಲು ದಿವಾಕರ್ ಹಾಗೂ ಪ್ರತೀಭ್ ಬಂದಿದ್ದರು. ಪ್ರತೀಭ್ ಬೈಕ್ ಚಾಲನೆ ಮಾಡುತ್ತಿದ್ದರೆ ನಿಖಿತಾಳನ್ನು ಮಧ್ಯೆ ಕೂರಿಸಿ ಕರೆದೊಯ್ದಿದ್ದ ಆರೋಪಿಗಳು ಮಾರ್ಗ ಮಧ್ಯೆ ತಿರುವಿನಲ್ಲಿ ಆಕೆಯನ್ನು ಬೈಕಿನಿಂದ ಬೀಳಿಸಿದ್ದರು. ಬಳಿಕ ದಿವಾಕರ್, ನಿಖಿತಾಳ ಕುತ್ತಿಗೆ, ಹೊಟ್ಟೆ, ಎದೆ ಸೇರಿದಂತೆ ಐದು ಕಡೆ ಚಾಕು ಇರಿದಿದ್ದ. ನಂತರ ಆರೋಪಿಗಳು ಅಲ್ಲಿಂದ ಪರಾರಿಯಾಗಿದ್ದರು.
ಮಹಿಳೆಯ ಜೀವ ಉಳಿಸಲು ಪೊಲೀಸ್ ಸಿಬ್ಬಂದಿ ಪಣ: ರಕ್ತದ ಮಡುವಿನಲ್ಲಿ ಬಿದ್ದಿದ್ದ ನಿಖಿತಾಳನ್ನು ಗಮನಿಸಿದ್ದ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದರು. ತಕ್ಷಣ ಸ್ಥಳಕ್ಕೆ ಧಾವಿಸಿದ್ದ ಬಾಣಸವಾಡಿ ಠಾಣಾ ಪೊಲೀಸರು ನಿಖಿತಾಳನ್ನು ಖಾಸಗಿ ನರ್ಸಿಂಗ್ ಹೋಂಗೆ ದಾಖಲಿಸಿದ್ದರು.
ನಂತರ ಆಕೆಯನ್ನು ಹೆಚ್ಚಿನ ಚಿಕಿತ್ಸೆಗಾಗಿ ಪೊಲೀಸರೇ ಬೌರಿಂಗ್ ಆಸ್ಪತ್ರೆಗೆ ದಾಖಲಿಸಿದ್ದರು. ಅಲ್ಲದೇ ಆಕೆಗೆ ತುರ್ತಾಗಿ ರಕ್ತ ಅಗತ್ಯ ಇರುವುದರಿಂದ ಪೊಲೀಸರೇ ರಕ್ತದಾನ ಮಾಡಿದ್ದಾರೆ. ಬಳಿಕ ಆರೋಪಿಗಳನ್ನು ಪತ್ತೆಹಚ್ಚಿ ಬಂಧಿಸುವಲ್ಲಿ ಬಾಣಸವಾಡಿ ಠಾಣಾ ಪೊಲೀಸರು ಯಶಸ್ವಿಯಾಗಿದ್ದು, ಕೊಲೆಯತ್ನ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಸದ್ಯ ನಿಖಿತಾ ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂದು ಪೂರ್ವ ವಿಭಾಗದ ಡಿಸಿಪಿ ಡಾ.ಭೀಮಾಶಂಕರ ಗುಳೇದ್ ತಿಳಿಸಿದ್ದಾರೆ.
ವಿವಾಹೇತರ ಸಂಬಂಧ ಮಹಿಳೆಗೆ ಇರಿದು ಆತ್ಮಹತ್ಯೆಗೆ ಯುವಕ ಯತ್ನ: ಬೆಂಗಳೂರಿನ ಆನೇಕಲ್ ಪಟ್ಟಣದಲ್ಲಿ ಶನಿವಾರ (ಇಂದು) ಮಹಿಳೆ ಕುತ್ತಿಗೆಗೆ ಇರಿದು ಯುವಕ ಆತ್ಮಹತ್ಯೆಗೆ ಯತ್ನಿಸಿರುವ ಘಟನೆ ನಡೆದಿದೆ. 2 ವರ್ಷಗಳಿಂದ ಮಹಿಳೆ ಮತ್ತು ಯುವಕ ಬಟ್ಟೆ ಮಳಿಗೆಯಲ್ಲಿ ಒಟ್ಟಿಗೆ ಕೆಲಸ ಮಾಡುತ್ತಿದ್ದರು. ಮಹಿಳೆಗೆ ಮೊದಲೇ ವಿವಾಹವಾಗಿದ್ದು ಇಬ್ಬರು ಮಕ್ಕಳಿದ್ದಾರೆ. ಈ ವಿಚಾರ ತಿಳಿದಿದ್ದರೂ ಇಬ್ಬರ ಮಧ್ಯೆ ಸ್ನೇಹ ಬೆಳೆದು ವಿವಾಹೇತರ ಸಂಬಂಧ ಏರ್ಪಟ್ಟಿತ್ತು. ಈ ವಿಷಯ ಮನೆಯವರಿಗೆ ತಿಳಿದು ಪೊಲೀಸರ ಮೂಲಕ ರಾಜಿ ಸಂಧಾನವಾಗಿತ್ತು. ಇದರಿಂದ ಯುವಕ 2 ದಿನಗಳ ಹಿಂದೆ ವಿಷ ಕುಡಿದು ಆಸ್ಪತ್ರೆಯಲ್ಲಿ ದಾಖಲಾಗಿದ್ದ, ಅಲ್ಲಿಂದ ಮಹಿಳೆ ಮನೆಗೆ ಬಂದು ಕತ್ತರಿ ಮೂಲಕ ಆಕೆಯ ಕುತ್ತಿಗೆಗೆ ಇರಿದಿದ್ದಾನೆ. ಇಬ್ಬರು ಈಗ ಆಸ್ಪತ್ರೆಗೆ ದಾಖಲಾಗಿದ್ದಾರೆ.
ಇದನ್ನೂ ಓದಿ: 500 ರೂಪಾಯಿಗಾಗಿ ಯುವಕನ ಕೊಲೆಗೈದ ಸ್ನೇಹಿತರು; ಮೂವರ ಬಂಧನ