ಬೆಂಗಳೂರು: ''ವಿಳಾಸ ಕೇಳುವ ನೆಪದಲ್ಲಿ ವಕೀಲರೊಬ್ಬರನ್ನು ಅಡ್ಡಗಟ್ಟಿ ಅಪಹರಿಸಿ, ಹಣ ಸುಲಿಗೆ ಮಾಡಿದ್ದ ಐವರ ಪೈಕಿ ಇಬ್ಬರು ಅಪಹರಣಕಾರರನ್ನು ಗಿರಿನಗರ ಪೊಲೀಸರು ಸೆರೆಹಿಡಿದ್ದಾರೆ. ಹಣವಿಲ್ಲ ಎಂದು ಗೊತ್ತಾಗುತ್ತಿದ್ದಂತೆ ಆಕ್ಸಿಡೆಂಟ್ ಆಗಿದೆ ಎಂದು ವಕೀಲನ ಸ್ನೇಹಿತರಿಗೆ ಕರೆ ಮಾಡಿಸಿ, 20 ಸಾವಿರ ಹಣವನ್ನು ಸುಲಿಗೆ ಮಾಡಿದ್ದಾರೆ.
ಮೂಲತಃ ಹಾಸನದ ಶಾಂತಿ ಗ್ರಾಮದ ನಿವಾಸಿಯಾಗಿರುವ ವಕೀಲ ಅಶೋಕ್ ಅವರನ್ನು ಅಪಹರಿಸಿದ ಆರೋಪಿಗಳಾದ ಯಶವಂತ್ ಹಾಗೂ ನಂದೀಶ್ ಎಂಬುವರನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ನಾಗೇಂದ್ರ ಬ್ಲಾಕ್ನಲ್ಲಿ ವಾಸವಾಗಿದ್ದ ಅಶೋಕ್, ಜೂನ್ 19 ರಂದು ಊರಿಗೆ ಹೋಗಿ ಹನುಮಂತ ನಗರದ ಪಿಎಸ್ಐ ಕಾಲೇಜು ಬಳಿ ಮನೆಗೆ ನಡೆದುಕೊಂಡು ಬರುತ್ತಿದ್ದರು. ಈ ವೇಳೆ ಅಪಹರಣಕಾರರ ಗುಂಪು ಆಟೋದಲ್ಲಿ ಬಂದಿದೆ. ಅಶೋಕ್ ಅವರನ್ನು ತಡೆದು ಕತ್ತರಿಗುಪ್ಪೆಗೆ ಹೇಗೆ ಹೋಗಬೇಕು ಎಂದು ಗ್ಯಾಂಗ್ನ ಓರ್ವ ಆರೋಪಿ ವಿಳಾಸ ಕೇಳಿದ್ದಾನೆ. ಈ ಮಧ್ಯೆ ಸಮಯ ನೋಡಿಕೊಂಡು ಅವರನ್ನು ಆಟೋದಲ್ಲಿ ಕೂರಿಸಿ ಆರೋಪಿಗಳು ಕಿಡ್ನ್ಯಾಪ್ ಮಾಡಿದ್ದಾರೆ. ನೈಸ್ ರಸ್ತೆ ಪೂರ್ತಿ ತಿರುಗಾಡಿಸಿದ್ದಾರೆ.
ಹಣ ನೀಡುವಂತೆ ಧಮ್ಕಿ ಹಾಕಿ ಹಲ್ಲೆ ಮಾಡಿದ್ದರು. ಅಶೋಕ್ ಬಳಿ ಹಣವಿಲ್ಲದಿರುವುದನ್ನು ಗಮನಿಸಿದ ಆರೋಪಿಗಳು ಸಹದ್ಯೋಗಿಗಳಿಗೆ ಕರೆ ಮಾಡಿಸಿ ತಮಗೆ ಆಕ್ಸಿಡೆಂಟ್ ಆಗಿದ್ದು, ತುರ್ತು ಹಣದ ಅಗತ್ಯವಿದೆ ಎಂದು ಹೇಳಿಸಿ ಆನ್ಲೈನ್ ಮೂಲಕ 20 ಸಾವಿರ ಹಣ ಹಾಕಿಸಿಕೊಂಡಿದ್ದಾರೆ. ಬಳಿಕ ಎಟಿಎಂ ಮೂಲಕ ಹಣ ಬಿಡಿಸಿಕೊಂಡು ಪೊಲೀಸರಿಗೆ ಹೇಳಿದರೆ ಸಾಯಿಸುತ್ತೇವೆ ಎಂದು ಬೆದರಿಕೆ ಹಾಕಿ ಕನಕಪುರದ ರವಿಶಂಕರ್ ಗುರೂಜಿ ಆಶ್ರಮದ ಬಳಿ ಬಿಟ್ಟು ಐವರು ಆರೋಪಿಗಳು ಪರಾರಿಯಾಗಿದ್ದರು. ಅಪಹರಣ ಸಂಬಂಧ ಪೊಲೀಸರಿಗೆ ದೂರು ನೀಡಿದ ಹಿನ್ನೆಲೆ ಇಬ್ಬರು ಆರೋಪಿಗಳನ್ನು ಬಂಧಿಸಲಾಗಿದೆ. ಉಳಿದ ಆರೋಪಿಗಳಿಗಾಗಿ ಶೋಧ ಕಾರ್ಯ ನಡೆಸುತ್ತಿರುವುದಾಗಿ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
ಸಂಬಂಧಿಯಿಂದಲೇ ಯುವತಿ ಅಪಹರಣದ ಯತ್ನ, ಆರೋಪಿಗಳು ಅರೆಸ್ಟ್: ಯುವತಿಯನ್ನು ಅಪಹರಿಸಲು ಯತ್ನಿಸಿದ್ದ ಆರೋಪಿಗಳನ್ನು ಕೆಐಎಸ್ಐಎಫ್ ಮತ್ತು ಸಿಆರ್ಪಿಎಫ್ ಪೊಲೀಸರ ತಂಡವು ಇತ್ತೀಚೆಗೆ ವಶಕ್ಕೆ ಪಡೆದಿತ್ತು. ಈ ಘಟನೆ ವಿಧಾನಸೌಧ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಮೇ ಸಂಜೆ ಏಳು ಗಂಟೆಯ ಸುಮಾರಿಗೆ ನಡೆಯಿತು. ಸಮಾಜ ಕಲ್ಯಾಣ ಇಲಾಖೆಯಲ್ಲಿ ಕೆಲಸ ಮಾಡುತ್ತಿದ್ದ ಯುವತಿ ಮೇ 24ರ ಸಂಜೆ ಕೆಲಸ ಮುಗಿಸಿಕೊಂಡು ಮನೆಗೆ ತೆರಳುತ್ತಿದ್ದರು. ಈ ವೇಳೆ ಅಲ್ಲಿಗೆ ಬಂದ ಇಬ್ಬರು ಆರೋಪಿಗಳು ವಿಧಾನಸೌದ ಮೆಟ್ರೋ ಸ್ಟೇಷನ್ ಬಳಿ ಆಕೆಯನ್ನು ಏಕಾಏಕಿ ಎಳೆದು ತಮ್ಮ ಕಾರಿನಲ್ಲಿ ಕೂರಿಸಿಕೊಂಡಿದ್ದರು. ತಕ್ಷಣವೇ ಸ್ಥಳದಲ್ಲಿದ್ದ ಸಿಆರ್ಪಿಎಫ್ ತಂಡ ಅಲರ್ಟ್ ಆಗಿತ್ತು. ಕೂಡಲೇ ಇಬ್ಬರು ಆರೋಪಿಗಳನ್ನು ವಶಕ್ಕೆ ಪಡೆದಿದ್ದರು.
ಕೆಲವು ತಿಂಗಳ ಹಿಂದೆ ಯುವತಿಯ ತಂದೆಯು ನಿಧನ ಹೊಂದಿದ್ದರು. ಅವರು ಮಾಡುತ್ತಿದ್ದ ಎಫ್‌ಡಿಎ ಕೆಲಸ ಪುತ್ರಿಗೆ ದೊರೆತಿತ್ತು. ಈ ವಿಚಾರ ಯುವತಿಯ ತಂದೆಯ ಎರಡನೇ ಪತ್ನಿಯ ಕಿರಿಯ ಸಹೋದರನ ಕೋಪಕ್ಕೆ ಕಾರಣವಾಗಿತ್ತು. ಎಫ್‌ಡಿಎ ಕೆಲಸ ತನ್ನ ಸಹೋದರಿಗೆ ದೊರೆಯಬೇಕಿತ್ತು ಎಂದು ಜಗಳ ತೆಗೆದಿದ್ದರು. ಜೊತೆಗೆ ಆ ಯುವತಿಯನ್ನು ಆರೋಪಿ ವಿವಾಹವಾಗಲು ಇಚ್ಛಿಸಿದ್ದ. ಆದ್ರೆ, ಯುವತಿಗೆ ಆತನನ್ನು ವಿವಾಹವಾಗಲು ಇಷ್ಟವಿರಲಿಲ್ಲ ಎಂದು ವಿಚಾರಣೆ ವೇಳೆ ತಿಳಿದಿತ್ತು.
ಇದನ್ನೂ ಓದಿ: ಕೊಟ್ಟ ಸಾಲ ವಾಪಸ್ ಕೇಳಿದ ತಾಯಿ-ಮಗನನ್ನು ಸಿನಿಮಾ ಶೈಲಿಯಲ್ಲಿ ಕಿಡ್ನಾಪ್ ಮಾಡಿಸಿದ ಮಹಿಳೆ!