ಬೆಂಗಳೂರು: ಸುದ್ದಿ ಪ್ರಸಾರ ಮಾಡುವುದಾಗಿ ಬೆದರಿಸಿ ಹಣ ವಸೂಲಿ ಮಾಡುತ್ತಿದ್ದ ಯೂಟ್ಯೂಬ್ ಚಾನಲ್ ಮಾಲೀಕ ಸೇರಿ ನಾಲ್ವರನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ. ಯೂಟ್ಯೂಬ್ ಚಾನಲ್ ನಡೆಸುತ್ತಿದ್ದ ಮಾಲೀಕ ಆತ್ಮಾನಂದ, ಆನಂದ, ಶ್ರೀನಿವಾಸ್, ಕೇಶವಮೂರ್ತಿ ಎಂಬುವರು ಬಂಧಿತ ಆರೋಪಿಗಳು.
ಅಕ್ರಮ ಚಟುವಟಿಕೆಗಳ ಬಗ್ಗೆ ರಹಸ್ಯ ವಿಡಿಯೊ: ವಾಹಿನಿಯೊಂದರ ಮಾಲೀಕನಾಗಿರುವ ಆತ್ಮಾನಂದ ಹಲವು ವರ್ಷಗಳಿಂದ ಚಾನಲ್ ನಡೆಸುತ್ತಿದ್ದ. ಕಾನೂನುಬಾಹಿರ ಚಟುವಟಿಕೆ ಕಂಡುಬಂದರೆ ಸ್ಥಳಕ್ಕೆ ಹೋಗಿ ವಿಡಿಯೋ ಸೆರೆಹಿಡಿದು ವಾಹಿನಿಯಲ್ಲಿ ಸುದ್ದಿ ಪ್ರಸಾರ ಮಾಡುವುದಾಗಿ ಹೇಳಿ, ಪೊಲೀಸರಿಗೆ ಹೇಳಿ ಪ್ರಕರಣ ದಾಖಲಿಸುವುದಾಗಿ ಬೆದರಿಕೆ ಹಾಕುತ್ತಿದ್ದರು. ಸುದ್ದಿ ಪ್ರಸಾರವಾದರೆ ತಮ್ಮ ಕಳ್ಳಾಟ ಬಯಲಾಗಲಿದೆ ಎಂದು ಅರಿತು ದಂಧೆಕೋರರು ಆರೋಪಿಗಳಿಗೆ ಹಣ ನೀಡುತ್ತಿದ್ದರು. ಇದನ್ನೇ ಬಂಡವಾಳ ಮಾಡಿಕೊಳ್ಳುತ್ತಿದ್ದ ಆರೋಪಿಗಳು ನಗರದಲ್ಲಿ ನಡೆಯುವ ಅಕ್ರಮ ಚಟುವಟಿಕೆಗಳ ಬಗ್ಗೆ ರಹಸ್ಯ ವಿಡಿಯೋ ಮಾಡಿ ಸುದ್ದಿ ಪ್ರಸಾರ ಮಾಡುವುದಾಗಿ ಬೆದರಿಸುತ್ತಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.
ಲಕ್ಷಾಂತರ ರೂಪಾಯಿ ಹಣ ವಸೂಲಿ: ಈ ಹಿಂದೆ ಕೆಮಿಕಲ್ಸ್ ದಂಧೆ, ಗ್ಯಾಸ್ ರಿಫಿಲ್ಲಿಂಗ್, ಅಕ್ರಮವಾಗಿ ದನದ ಮಾಂಸ ಮಾರಾಟ ಹೀಗೆ ನಾನಾ ಕಾನೂನುಬಾಹಿರ ಚಟುವಟಿಕೆಯಲ್ಲಿ ತೊಡಗಿದ್ದವರನ್ನು ಬೆದರಿಸಿ, ಅವರಿಂದ ಲಕ್ಷಾಂತರ ರೂಪಾಯಿ ಹಣ ವಸೂಲಿ ಮಾಡಿದ್ದರು. ಕೆ ಆರ್ ಪುರ ಸೇರಿದಂತೆ ನಗರದ ವಿವಿಧ ಪೊಲೀಸ್ ಠಾಣೆಗಳಲ್ಲಿ ಆರೋಪಿಗಳ ವಿರುದ್ಧ ಪ್ರಕರಣ ದಾಖಲಾಗಿದ್ದವು. ಈ ಸಂಬಂಧ ಸಿಸಿಬಿ ತನಿಖೆ ಕೈಗೆತ್ತಿಕೊಂಡು ಆರೋಪಿಗಳನ್ನು ಬಂಧಿಸಿ ಹೆಚ್ಚಿನ ವಿಚಾರಣೆಗಾಗಿ ಪೊಲೀಸ್ ಕಸ್ಟಡಿ ಪಡೆಯಲಾಗಿದೆ ಎಂದು ಸಿಸಿಬಿ ಅಧಿಕಾರಿಗಳು ತಿಳಿಸಿದ್ದಾರೆ.
ಯೂಟ್ಯೂಬ್ ನೋಡಿ ತೂಕದ ಸ್ಕೇಲ್‌ನಲ್ಲಿ ಗೋಲ್ಮಾಲ್ : ಇನ್ನೊಂದೆಡೆ ತೂಕದ ಸ್ಕೇಲ್‌ನಲ್ಲಿ ಚಿಪ್ ಅಳವಡಿಸಿ ಗ್ರಾಹಕರಿಗೆ ವಂಚಿಸುತ್ತಿದ್ದವರ ವಿರುದ್ಧ ಕಾರ್ಯಾಚರಣೆ ಕೈಗೊಂಡ ಕಾಮಾಕ್ಷಿಪಾಳ್ಯ ಠಾಣೆ ಪೊಲೀಸರು ಹದಿನೇಳು ಜನ ಆರೋಪಿಗಳನ್ನ (ಮಾರ್ಚ್ 18-2023) ಬಂಧಿಸಿದ್ದರು. ನ್ಯಾಯಬೆಲೆ ಅಂಗಡಿ, ಗುಜರಿ ಅಂಗಡಿ, ಕೋಳಿ ಮೀನು ಮಾಂಸ ಮಾರಾಟ ಅಂಗಡಿಗಳಲ್ಲಿ ಗ್ರಾಹಕರಿಗೆ ವಂಚಿಸುತ್ತಿದ್ದ ಸೋಮಶೇಖರ್, ನವೀನ್ ಕುಮಾರ್, ವಿನೇಶ್ ಪಟೇಲ್, ರಾಜೇಶ್ ಕುಮಾರ್, ವ್ಯಾಟರಾಯನ್, ಮೇಘನಾಧಮ್, ಲೋಕೆಶ್ ಕೆ, ಲೋಕೆಶ್ ಎಸ್.ಆರ್, ಗಂಗಾಧರ್, ಚಂದ್ರಶೇಖರಯ್ಯ, ಅನಂತಯ್ಯ, ರಂಗನಾಥ್, ಶಿವಣ್ಣ, ಸನಾವುಲ್ಲಾ, ವಿಶ್ವನಾಥ್, ಮಹಮದ್ ಈಶಾಕ್, ಹಾಗೂ ಮಧುಸೂಧನ್ ಬಂಧಿತ ಆರೋಪಿಗಳು.
ವಂಚನೆ ಮಾಡುತ್ತಿದ್ದದ್ದು ಹೇಗೆ? : ಮಾಪನ ಶಾಸ್ತ್ರ ಇಲಾಖೆಯಿಂದ ಪರವಾನಗಿ ಪಡೆದು ಸ್ಕೇಲ್ ಸರ್ವಿಸ್ ಮಾಡುವ ಕೆಲಸ ಮಾಡುತ್ತಿದ್ದ ಸೋಮಶೇಖರ್ ಮತ್ತು ನವೀನ್ ಕುಮಾರ್, ಯೂಟ್ಯೂಬ್ ನೋಡಿ ತೂಕದ ಯಂತ್ರದಲ್ಲಿ ವೈಯರ್ ಬದಲಾವಣೆ ಮಾಡುವುದನ್ನ ಕಲಿತುಕೊಂಡಿದ್ದರು. ತೂಕದ ಯಂತ್ರದಲ್ಲಿನ ಪಿಸಿಬಿ (ಪ್ರಿಂಟೆಡ್ ಸರ್ಕ್ಯೂಟ್ ಬೋರ್ಡ್) ಚಿಪ್ನಲ್ಲಿ ಬದಲಾವಣೆ ಮಾಡಿ ಸ್ಕೇಲ್‌ನಲ್ಲಿ ಹೆಚ್ಚುವರಿ ಬಟನ್ ಹಾಗೂ ರಿಮೋಟ್ ಅಳವಡಿಸುತ್ತಿದ್ದರು. ಇದೇ ರೀತಿ ಎರಡ್ಮೂರು ವರ್ಷಗಳಿಂದ ತೂಕದ ಸ್ಕೇಲ್‌ನಲ್ಲಿ ಮಾರ್ಪಾಡು ಮಾಡಿ ಗ್ರಾಹಕರಿಗೆ ವಂಚಿಸುತ್ತಿದ್ದರು ಎಂಬುದು ತಿಳಿದುಬಂದಿತ್ತು.
ಇದನ್ನೂ ಓದಿ: ಯೂಟ್ಯೂಬ್ ನೋಡಿ ತೂಕದ ಸ್ಕೇಲ್‌ನಲ್ಲಿ ಗೋಲ್ಮಾಲ್: ಗ್ರಾಹಕರಿಗೆ ವಂಚಿಸುತ್ತಿದ್ದ ಹದಿನೇಳು ಜನರ ಬಂಧನ