ಬೆಂಗಳೂರು: ದೇಶದ್ರೋಹಿ ಚಟುವಟಿಕೆಗಳಲ್ಲಿ ಭಾಗಿಯಾಗುತ್ತಿದ್ದ ಮಾಹಿತಿ ಮೇರೆಗೆ ನಗರದ ಸಿಸಿಬಿ ಪೊಲೀಸರು ಐವರು ಶಂಕಿತ ಉಗ್ರರನ್ನು ಬಂಧಿಸಿದ್ದು, ವಿಚಾರಣೆ ಮುಂದುವರೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಸುಹೇಲ್, ಉಮರ್, ಜಾಹಿದ್, ಮುದಾಸಿರ್ ಹಾಗೂ ಫೈಜರ್ ಎಂಬ ಐವರನ್ನು ಬಂಧಿಸಲಾಗಿದೆ. ಈ ಆರೋಪಿಗಳಲ್ಲಿ ಸ್ಪೋಟಕ ವಸ್ತುಗಳು, 4 ವಾಕಿಟಾಕಿ, 7 ಕಂಟ್ರಿ ಮೇಡ್ ಪಿಸ್ತೂಲ್, 42 ಸಜೀವ ಗುಂಡುಗಳು, ಮದ್ದುಗುಂಡು, 2 ಡ್ರ್ಯಾಗರ್, 2 ಸೆಟಲೈಟ್ ಫೋನ್ ಹಾಗೂ 4 ಗ್ರೆನೈಡ್ ಪತ್ತೆಯಾಗಿದ್ದು, ವಶಕ್ಕೆ ಪಡೆಯಲಾಗಿದೆ.
ತನಿಖೆ ತೀವ್ರ: ಮಡಿವಾಳ ಟೆಕ್ನಿಕಲ್ ಸೆಲ್ನಲ್ಲಿ ಶಂಕಿತರ ತೀವ್ರ ವಿಚಾರಣೆ ನಡೆಯುತ್ತಿದೆ. ಸಿಸಿಬಿ ಅಧಿಕಾರಿಗಳು ಶಂಕಿತರ ಮೊಬೈಲ್ ಫೋನ್ಗಳ ಪರಿಶೀಲನೆ ನಡೆಸುತ್ತಿದ್ದಾರೆ. ಇನ್ನಿಬ್ಬರು ಇವರ ಜೊತೆ ನಂಟು ಹೊಂದಿರುವ ಮಾಹಿತಿ ಇದೆ. ಆ ಇಬ್ಬರ ಬಗ್ಗೆಯೂ ಮಾಹಿತಿ ಕಲೆ ಹಾಕಲಾಗುತ್ತಿದ್ದು, ಮತ್ತೊಂದು ಪೊಲೀಸ್ ತಂಡದಿಂದ ತೀವ್ರ ಹುಡುಕಾಟ ನಡೆಯುತ್ತಿದೆ.
ವಿಧ್ವಂಸಕ ಕೃತ್ಯಕ್ಕೆ ಸಂಚು: ತನಿಖಾ ತಂಡಗಳು ಶಂಕಿತ ಉಗ್ರರನ್ನು ಬಂಧಿಸುವ ಮೂಲಕ ಅವರು ರೂಪಿಸಿದ ಪ್ರಮುಖ ದುಷ್ಕೃತ್ಯಕ್ಕೆ ಕಡಿವಾಣ ಹಾಕಿದ್ದಾರೆ. ಆರೋಪಿಗಳು ದೊಡ್ಡ ಮಟ್ಟದ ಸ್ಫೋಟಕ್ಕೆ ಸಂಚು ರೂಪಿಸಿದ್ದರು. ಪಿಸ್ತೂಲ್ ಸೇರಿದಂತೆ ಬಾಂಬ್ ರಾ ಮಟೀರಿಯಲ್ ಸಿದ್ಧಪಡಿಸಿಕೊಂಡಿದ್ದರು. ಸುಮಾರು 10ಕ್ಕೂ ಹೆಚ್ಚು ಜನರಿಂದ ಬೃಹತ್ ಸ್ಫೋಟಕ ಮಾಡುವ ಯೋಜನೆ ನಡೆದಿತ್ತು.
ಈ ಬಗ್ಗೆ ಗುಪ್ತಚರ ಇಲಾಖೆಗೆ ನಿಖರ ಮಾಹಿತಿ ಸಿಕ್ಕಿತ್ತು. ಕೂಡಲೇ ಬೆಂಗಳೂರು ಸಿಸಿಬಿ ತಂಡಕ್ಕೆ ಮಾಹಿತಿ ರವಾನಿಸಲಾಗಿದೆ. ತಕ್ಷಣ ಅಲರ್ಟ್ ಆದ ಸಿಸಿಬಿ ಪೊಲೀಸರು ಶಂಕಿತರ ಲೊಕೇಶನ್ ಟ್ರೇಸ್ ಮಾಡಿ ಬಂಧಿಸಿದ್ದಾರೆ. ಗುಪ್ತಚರ ಇಲಾಖೆ, ಎನ್ಐಎ ಹಾಗೂ ಸಿಸಿಬಿ ತಂಡಗಳಿಂದ ಜಂಟಿ ಕಾರ್ಯಾಚರಣೆ ನಡೆದಿದೆ.
ಉಗ್ರರಲ್ಲಿ ನಾಲ್ವರು ರೌಡಿಶೀಟರ್ಗಳು: ಸಿಸಿಬಿ ವಶದಲ್ಲಿರುವ ಶಂಕಿತರಲ್ಲಿ ನಾಲ್ವರು ಆರ್ಟಿನಗರ ಪೊಲೀಸ್ ಠಾಣೆ ವ್ಯಾಪ್ತಿಯ ರೌಡಿಶೀಟರ್ಗಳಾಗಿದ್ದಾರೆ. ಕೊರೊನಾ ಸಮಯದಲ್ಲಿ ಓರ್ವನನ್ನೂ ಅಪಹರಿಸಿ ಕೊಲೆ ಮಾಡಿದ್ದ ಆರೋಪಿಗಳಾಗಿದ್ದಾರೆ. ಜೈಲಿನಲ್ಲಿಯೇ ಈ ನಾಲ್ವರಿಗೂ ಶಂಕಿತ ಉಗ್ರರ ಪರಿಚಯ ಆಗಿತ್ತು. ಬಳಿಕ ಶಂಕಿತರ ಜೊತೆ ಸಂಪರ್ಕ ಮುಂದುವರೆಸಿಕೊಂಡು ದುಷ್ಕೃತ್ಯ ಎಸಗಲು ತರಬೇತಿ ಪಡೆದಿದ್ದಾರೆ. ಜೈಲಿನಿಂದ ಹೊರಬಂದ ಬಳಿಕ ವಿಧ್ವಂಸಕ ಕೃತ್ಯಕ್ಕೆ ಪ್ಲಾನ್ ಮಾಡಿದ್ದರು. ಬಾಂಬ್ ತಯಾರಿಕೆಗೆ ಬೇಕಾದ ಕಚ್ಚಾ ವಸ್ತುಗಳನ್ನೆಲ್ಲ ಸಿದ್ಧಪಡಿಸಿದ್ದರು. ಇವರ ಜೊತೆಗೆ ಇನ್ನೂ ಹಲವರು ಸೇರಿ ಕೃತ್ಯಕ್ಕೆ ಯೋಜನೆ ರೂಪಿಸಿದ್ದ ಮಾಹಿತಿ ಇದೆ. ಇವರಿಗೆ ಲಿಂಕ್ ಇರುವ ಮತ್ತಷ್ಟು ಜನರ ಹುಡುಕಾಟ ನಡೆಯುತ್ತಿದೆ.
ಪೊಲೀಸ್ ಆಯುಕ್ತರ ಮಾಹಿತಿ: ಈ ಬಗ್ಗೆ ಮಾಧ್ಯಮಗೋಷ್ಠಿ ನಡೆಸಿ ಮಾಹಿತಿ ನೀಡಿರುವ ನಗರ ಪೊಲೀಸ್ ಆಯುಕ್ತ ಬಿ. ದಯಾನಂದ್ ಅವರು, ಬೆಂಗಳೂರು ನಗರದಲ್ಲಿ ವಿಧ್ವಂಸಕ ಕೃತ್ಯ ಎಸಗಲು ಯೋಜನೆ ರೂಪಿಸಿದ್ದ ಐವರನ್ನು ಪತ್ತೆ ಹಚ್ಚಿ ಬಂಧಿಸುವಲ್ಲಿ ಸಿಸಿಬಿ ತಂಡ ಯಶಸ್ವಿಯಾಗಿದೆ. ಹೆಬ್ಬಾಳ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ವಾಸವಿದ್ದ ಐವರನ್ನು ಅವರ ಮನೆಗಳ ಮೇಲೆ ದಾಳಿ ನಡೆಸಿ ಬಂಧಿಸಲಾಗಿದೆ. ಬಂಧಿತರಿಂದ ಏಳು ಪಿಸ್ತೂಲ್, ಹಲವು ಜೀವಂತ ಗುಂಡುಗಳು, ವಾಕಿಟಾಕಿ ಸೇರಿದಂತೆ ವಸ್ತುಗಳು ವಶಕ್ಕೆ ಪಡೆಯಲಾಗಿದೆ. ಐವರೂ ಸಹ ಬೆಂಗಳೂರಿನಲ್ಲಿ ವಿಧ್ವಂಸಕ ಕೃತ್ಯ ಎಸಗಲು ಪ್ಲಾನ್ ಮಾಡಿದ್ದರು. ವಿಚಾರಣೆ ವೇಳೆ ಆರೋಪಿಗಳು ಈ ಬಗ್ಗೆ ಒಪ್ಪಿಕೊಂಡಿದ್ದಾರೆ ಎಂದು ಹೇಳಿದ್ದಾರೆ.
2008ರ ಸರಣಿ ಬಾಂಬ್ ಸ್ಫೋಟ ಪ್ರಕರಣದ ರುವಾರಿ ಟಿ ನಜೀರ್ ಮತ್ತು 2017ರ ಪ್ರಕರಣದ ಮುಖ್ಯ ಆರೋಪಿ ಜುನೈದ್ ಈ ಐವರಿಗೆ ತರಬೇತಿ ನೀಡಿದ್ದಾರೆ. ಸದ್ಯ ನಜೀರ್ ಜೈಲಿನಲ್ಲಿದ್ದು, ಮತ್ತೋರ್ವ ಆರೋಪಿ ಜುನೈದ್ ವಿದೇಶಕ್ಕೆ ಎಸ್ಕೇಪ್ ಆಗಿದ್ದಾನೆ. ವಿಧ್ವಂಸಕ ಕೃತ್ಯ ಎಸಗಲು ಶಂಕಿತರು ಏನೆಲ್ಲಾ ಪ್ಲಾನ್ ಮಾಡಿದ್ದರು ಎಂಬ ಬಗ್ಗೆ ತನಿಖೆ ಮಾಡಲಾಗುತ್ತದೆ. ಬಂಧಿತರನ್ನು 15 ದಿನ ಕಸ್ಟಡಿಗೆ ಪಡೆಯಲಾಗಿದೆ ಎಂದು ಆಯುಕ್ತರು ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿ: ನಿಜಾಮಾಬಾದ್ ಭಯೋತ್ಪಾದನೆ ಸಂಚು ಕೇಸ್: ಕರ್ನಾಟಕದಲ್ಲಿ ಅಡಗಿದ್ದ PFI ಶಸ್ತ್ರಾಸ್ತ್ರ ತರಬೇತುದಾರ ಅರೆಸ್ಟ್