ಬೆಂಗಳೂರು : ಸಿನಿಮಾ ನೋಡಿ ಪ್ರೇರಿತನಾಗಿ ಜ್ಯೋತಿಷಿ ಪುತ್ರನನ್ನು ಕಿಡ್ನ್ಯಾಪ್ ಮಾಡಿ ಹಣಕ್ಕೆ ಬೇಡಿಕೆ ಇಟ್ಟಿದ್ದ ಯುವಕನನ್ನು ಹೆಚ್ಎಸ್ಆರ್ ಲೇಔಟ್ ಠಾಣೆ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಜ್ಯೋತಿಷಿ ಮಣಿವಾಸನ್ ಎಂಬುವರ ಪುತ್ರನನ್ನು ಅಪಹರಿಸಿದ ಆರೋಪದಡಿ ತುಮಕೂರು ಮೂಲದ ಅರ್ಜುನ್ (19) ಎಂಬಾತನನ್ನು ಬಂಧಿಸಲಾಗಿದೆ.
ಆರೋಪಿ ದ್ವಿತೀಯ ಪಿಯುಸಿವರೆಗೂ ವ್ಯಾಸಂಗ ಮಾಡಿ ನಗರದ ಪಿಜಿಯೊಂದರಲ್ಲಿ ವಾಸವಾಗಿದ್ದ. ಜೀವನದಲ್ಲಿ ಏನಾದರೂ ಸಾಧಿಸಬೇಕೆಂದು ನಗರಕ್ಕೆ ಕಾಲಿಟ್ಟಿದ್ದ ಅರ್ಜುನ್ ಗ್ಯಾರೇಜ್ನಲ್ಲಿ ಕೆಲಸ ಮಾಡಿತ್ತಿದ್ದ. ಬಿಡುವಿನ ವೇಳೆ ಸಿನಿಮಾ, ವೆಬ್ ಸೀರಿಸ್ಗಳನ್ನು ನೋಡಿ ಕಿಡ್ನ್ಯಾಪ್ ಮಾಡುವುದಕ್ಕೆ ಸ್ಫೂರ್ತಿ ಪಡೆಯುವ ಮೂಲಕ ಕಡಿಮೆ ಅವಧಿಯಲ್ಲಿ ಹೆಚ್ಚು ಹಣ ಗಳಿಸಬೇಕೆಂಬ ಹಪಾಹಪಿಗೆ ಬಿದ್ದಿದ್ದ.
ಶ್ರೀಮಂತರ ಬಳಿ ಹೇಗಾದರೂ ಮಾಡಿ ಹಣ ಸುಲಿಗೆ ಮಾಡಬೇಕೆಂದು ಆರೋಪಿ ತೀರ್ಮಾನಿಸಿದ್ದ. ಇದಕ್ಕಾಗಿ ಸಂಚು ರೂಪಿಸುವಾಗ ಜ್ಯೋತಿಷಿ ಪುತ್ರ ನೀಟ್ಗಾಗಿ ಕೋಚಿಂಗ್ ಸೆಂಟರ್ಗೆ ಕಾರಿನಲ್ಲಿ ಹೋಗುತ್ತಿರುವ ಬಗ್ಗೆ ತಿಳಿದುಕೊಂಡಿದ್ದಾನೆ. ಕಳೆದ ಒಂದು ತಿಂಗಳಿಂದ ಕೋಚಿಂಗ್ ಸೆಂಟರ್ ಹೋಗುವ ಸಮಯವನ್ನು ಅರಿತುಕೊಂಡಿದ್ದ. ಆಗಸ್ಟ್ 4 ರಂದು ಕೋಚಿಂಗ್ ಸೆಂಟರ್ ಮುಗಿಸಿಕೊಂಡು ಕಾರಿನಲ್ಲಿ ಬರುವಾಗ ಈತನ ಕಾರು ಅಡ್ಡಗಟ್ಟಿ ತಿಲಕ್ ನಗರಕ್ಕೆ ಡ್ರಾಪ್ ಮಾಡುವಂತೆ ಕೇಳಿದ್ದಾನೆ. ಕಾರು ಹತ್ತಿಸಿಕೊಂಡ ಅರ್ಜುನ್ಗೆ ಕೆಲ ಸಮಯದ ಬಳಿಕ ನಕಲಿ ಗನ್ ತೋರಿಸಿ ನಿನ್ನನ್ನು ಕಿಡ್ನ್ಯಾಪ್ ಮಾಡಿರುವುದಾಗಿ ಹೇಳಿ 5 ಲಕ್ಷ ರೂ. ಹಣಕ್ಕಾಗಿ ಬೇಡಿಕೆಯಿಟ್ಟು, ಪೋಷಕರಿಗೆ ಕರೆ ಮಾಡಿ ದುಡ್ಡು ತರಿಸುವಂತೆ ಒತ್ತಾಯಿಸಿದ್ದಾನೆ.
ಈ ವೇಳೆ ಭಯಗೊಂಡಿದ್ದ ಜಯಸೂರ್ಯನ ಮೊಬೈಲ್ಯಿಂದ ಆತನ ಪೋಷಕರಿಗೆ ವಿಡಿಯೋ ಕಾಲ್ ಮಾಡಿ ಹಣ ತರಿಸುವಂತೆ ಬೆದರಿಕೆ ಹಾಕಿದ್ದ. ಆತಂಕಗೊಂಡ ಪೋಷಕರು, ಚಿನ್ನ ತೆಗೆದುಕೊಂಡು ಬರುವುದಾಗಿ ಭರವಸೆ ನೀಡಿದ್ದರು. ಈ ಸಂಬಂಧ ಹೆಚ್ಎಸ್ಆರ್ ಲೇಔಟ್ ಪೊಲೀಸರಿಗೆ ದೂರು ನೀಡಿದ್ದರು. ಕೂಡಲೇ ಕಾರ್ಯಪ್ರವೃತ್ತರಾದ ಪೊಲೀಸರು ಮೊಬೈಲ್ ಕರೆ ಆಧಾರದ ಮೇರೆಗೆ ಕಾರ್ಯಾಚರಣೆ ನಡೆಸಿ ಆರೋಪಿಯನ್ನು ಬಂಧಿಸಿ ಜೈಲಿಗಟ್ಟಲಾಗಿದೆ ಎಂದು ಆಗ್ನೇಯ ವಿಭಾಗದ ಡಿಸಿಪಿ ಸಿ.ಕೆ ಬಾಬಾ ಮಾಹಿತಿ ನೀಡಿದ್ದಾರೆ.
ಬೆಳಗಾವಿಯಲ್ಲಿ ಬಾಲಕಿ ಅಪಹರಣ ಯತ್ನ: ಅಪರಿಚಿತ ವ್ಯಕ್ತಿಯೋರ್ವ ಬಾಲಕಿಯನ್ನು ಅಪಹರಿಸಲು ಯತ್ನಿಸಿದ್ದ ಘಟನೆ ಇತ್ತೀಚೆಗೆ ಬೆಳಗಾವಿಯಲ್ಲಿ ನಡೆದಿತ್ತು. ಪ್ರಕರಣ ದಾಖಲಾದ 12 ಗಂಟೆಯೊಳಗೆ ಮಾರುತಿ ನಗರದ ಆರೋಪಿ ಗಜಾನನ ಪಾಟೀಲ (40) ಎಂಬಾತನನ್ನು ಪೊಲೀಸರು ಖೆಡ್ಡಾಕ್ಕೆ ಬೀಳಿಸಿದ್ದರು. ಟ್ಯೂಶನ್ಗೆ ಹೊರಟಿದ್ದ ಬಾಲಕಿಗೆ ಚಾಕೋಲೆಟ್ ಆಮಿಷವೊಡ್ಡಿ ಆರೋಪಿ ಹೆಗಲ ಮೇಲೆ ಎತ್ತಿಕೊಂಡು ಹೋಗಲು ಯತ್ನಿಸಿದ್ದ. ಆತನ ಕೈಯಿಂದ ತಪ್ಪಿಸಿಕೊಳ್ಳಲು ಬಾಲಕಿ ಜೋರಾಗಿ ಚೀರಾಟ ಮಾಡಿದ್ದರಿಂದ ಸಮೀಪದ ಗಾರ್ಡನ್ನಲ್ಲಿ ವಾಕಿಂಗ್ ಮಾಡುತ್ತಿದ್ದ ಜನರು ನೋಡಿ ತಕ್ಷಣ ರಕ್ಷಣೆಗೆ ಧಾವಿಸಿದ್ದರು. ಅಷ್ಟರಲ್ಲಿ ಆರೋಪಿ ಬಾಲಕಿಯನ್ನು ಅಲ್ಲೇ ಬಿಟ್ಟು ಪರಾರಿಯಾಗಿದ್ದ.
ಬಳಿಕ ಬಾಲಕಿಯ ತಾಯಿ ಈ ಬಗ್ಗೆ ಟಿಳಕವಾಡಿ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಘಟನಾ ಸ್ಥಳಕ್ಕೆ ಭೇಟಿ ನೀಡಿ ಕೊಟ್ಟ ಪೊಲೀಸರು ಸಿಸಿಟಿವಿ ಪರಿಶೀಲಿಸಿದಾಗ ಆರೋಪಿ ಬಾಲಕಿಯನ್ನು ಹೊತ್ತೊಯ್ಯುತ್ತಿರುವ ದೃಶ್ಯ ಸೆರೆಯಾಗಿತ್ತು. ತಕ್ಷಣ ಆರೋಪಿ ಪತ್ತೆಗಾಗಿ ಒಂದು ತಂಡ ರಚಿಸಿದ್ದ ಪೊಲೀಸರು ಪ್ರಕರಣ ದಾಖಲಾದ 12 ಗಂಟೆಯೊಳಗೆ ಆರೋಪಿಯನ್ನು ಬಂಧಿಸಿದ್ದರು.
ಇದನ್ನೂ ಓದಿ : ಗ್ರಾಮ ಪಂಚಾಯತ್ ರಾಜಕೀಯ: ಕಲಬುರಗಿ ಗೆಸ್ಟ್‌ಹೌಸ್‌ನಲ್ಲಿ ತಂಗಿದ್ದ ವಿಜಯಪುರ ಗ್ರಾಪಂ ಸದಸ್ಯರ ಅಪಹರಣ