ಬೆಂಗಳೂರು: ಹಣ ಹಂಚಿಕೊಳ್ಳುವ ವಿಚಾರದಲ್ಲಿ ಗಲಾಟೆ ಮಾಡಿಕೊಂಡು ಜೊತೆಗಾರನನ್ನೇ ದೊಣ್ಣೆಯಿಂದ ಹೊಡೆದು ಕೊಂದಿದ್ದ ಆರೋಪಿಯನ್ನು ಮಲ್ಲೇಶ್ವರಂ ಠಾಣಾ ಪೊಲೀಸರು ಬಂಧಿಸಿದ್ದಾರೆ. ಜುಲೈ 8ರಂದು ಮಲ್ಲೇಶ್ವರಂ ಲಿಂಕ್ ರಸ್ತೆಯ ಸಿಗ್ನಲ್ ಬಳಿ ಗುರುಮೂರ್ತಿ ಎಂಬಾತನ ಕೊಲೆ ನಡೆದಿತ್ತು. ಪ್ರಕರಣ ದಾಖಲಿಸಿಕೊಂಡಿದ್ದ ಪೊಲೀಸರು ಪ್ರಭು ಕುಮಾರ ಎಂಬ ಆರೋಪಿಯನ್ನು ಬಂಧಿಸಿದ್ದಾರೆ.
ಕೊಲೆಯಾದ ಗುರುಮೂರ್ತಿ ಹಾಗೂ ಪ್ರಭು ಕುಮಾರ ರಸ್ತೆ ಬದಿ ಚಿಂದಿ ಆಯ್ದು ಅದನ್ನು ಮಾರಾಟ ಮಾಡಿ ಬಂದ ಹಣವನ್ನು ಹಂಚಿಕೊಳ್ಳುತ್ತಿದ್ದರು. ಅದರಿಂದ ಬಂದ ಹಣದಲ್ಲಿ ಜೀವನ ಸಾಗಿಸುತ್ತಿದ್ದರು. ಜುಲೈ 8ರಂದು ಅದೇ ರೀತಿ ಚಿಂದಿ ಮಾರಾಟ ಮಾಡಿದಾಗ ಬಂದ 450ರೂ. ಹಂಚಿಕೊಳ್ಳುವ ವಿಚಾರವಾಗಿ ಗುರುಮೂರ್ತಿ ಹಾಗೂ ಪ್ರಭು ಕುಮಾರನ ನಡುವೆ ಗಲಾಟೆ ಆರಂಭವಾಗಿತ್ತು.
ಈ ವೇಳೆ ಪ್ರಭು ಕುಮಾರ ಹಣ ಕೊಡಲು ನಿರಾಕರಿಸಿದ್ದ. ಇದರಿಂದ ಸಿಟ್ಟಿಗೆದ್ದ ಗುರುಮೂರ್ತಿ ಪ್ರಭುಕುಮಾರನ ಮೇಲೆ ಹಲ್ಲೆ ಮಾಡಿದ್ದ. ಇದರಿಂದ ರೊಚ್ಚಿಗೆದ್ದ ಪ್ರಭು ಕುಮಾರ ಗುರುಮೂರ್ತಿಯ ಮೇಲೆ ದೊಣ್ಣೆಯಿಂದ ಹಲ್ಲೆ ಮಾಡಿದ್ದ. ಇಬ್ಬರ ಗಲಾಟೆ ಗಮನಿಸಿದ್ದ ಸಾರ್ವಜನಿಕರು ಹಿಡಿಯಲು ಯತ್ನಿಸಿದಾಗ ಪ್ರಭು ಕುಮಾರ ಪರಾರಿಯಾಗಿದ್ದ. ತೀವ್ರವಾಗಿ ಗಾಯಗೊಂಡಿದ್ದ ಗುರುಮೂರ್ತಿ ರಕ್ತಸ್ರಾವದಿಂದ ಸಾವನ್ನಪ್ಪಿದ್ದ.
ಮೃತನ ಮಾಹಿತಿ ಪತ್ತೆಹಚ್ಚಿದ ಪೊಲೀಸರು ಅಕ್ಕಪಕ್ಕದ ಸಿಸಿಟಿವಿ ದೃಶ್ಯಗಳನ್ನು ಪರಿಶೀಲಿಸಿದಾಗ ಪ್ರಭುಕುಮಾರ ಗಾಬರಿಯಿಂದ ಓಡುತ್ತಿರುವ ದೃಶ್ಯ ಸೆರೆಯಾಗಿತ್ತು. ಅದರನ್ವಯ ಪ್ರಭು ಕುಮಾರನ ಬೆನ್ನತ್ತಿದ ಪೊಲೀಸರು ಬೆಂಗಳೂರಿನಿಂದ ಆಂಧ್ರಪ್ರದೇಶಕ್ಕೆ ಪರಾರಿಯಾಗಲು ಯತ್ನಿಸುತಿದ್ದ ಆತನನ್ನು ಬಂಧಿಸಿರುವುದಾಗಿ ತಿಳಿಸಿದ್ದಾರೆ.
ಈ ಕುರಿತು ಉತ್ತರ ವಿಭಾಗದ ಡಿಸಿಪಿ ಶಿವಪ್ರಕಾಶ್ ದೇವರಾಜು ಹೇಳಿಕೆ ನೀಡಿದ್ದಾರೆ.' 8/07/2023 ರಾತ್ರಿ ಸುಮಾರು 7.30 ಗೆ ಅಪರಿಚಿತ ಶವ ಸಿಕ್ಕಿತ್ತು. ಆ ವ್ಯಕ್ತಿಯ ತಲೆಗೆ ಹಾಗು ಮುಖಕ್ಕೆ ಗಾಯಗಳಾಗಿತ್ತು. ಅವರನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗುವ ಮುನ್ನವೇ ಸಾವನ್ನಪ್ಪಿದ್ದರು. ಈ ಘಟನೆಗೆ ಸಂಬಂಧ ಪಟ್ಟಂತೆ ಮಲ್ಲೇಶ್ವರಂ ಪೊಲೀಸ್ ಠಾಣೆಯಲ್ಲಿ 133/2023 302, 506 ಸೆಕ್ಷನ್ಗಳ ಅಡಿಯಲ್ಲಿ ಪ್ರಕರಣ ದಾಖಲು ಮಾಡಿದೆವು. ಮೊದಲು ಮಲ್ಲೇಶ್ವರಂ ಎಸಿಪಿ ನೇತೃತ್ವದಡಿಯಲ್ಲಿ ಸಾವನ್ನಪ್ಪಿದ ವ್ಯಕ್ತಿಯನ್ನು ಪತ್ತೆ ಹಚ್ಚಿಲು ತಂಡ ಸಿದ್ಧ ಮಾಡಿದ್ದು, ತನಿಖೆಯಲ್ಲಿ 11/07/2023 ಕ್ಕೆ ನಾವು ಆ ವ್ಯಕ್ತಿಯನ್ನು ಗುರುಮೂರ್ತಿ ಎಂದು ಪತ್ತೆ ಮಾಡಿದೆವು. ಈ ವ್ಯಕ್ತಿ ಹಲವು ವರ್ಷಗಳಿಂದ ಮನೆ ಬಿಟ್ಟು ಹೊರ ಬಂದು, ಚಿಂದಿ ಮಾರಾಟ ಮಾಡಿ ಜೀವನ ಸಾಗಿಸುತ್ತಿದ್ದರು. ಇದಕ್ಕೆ ಸಂಬಂಧಿಸಿ ತನಿಖೆ ಮುಂದುವರೆಸಿದಾಗ ಪ್ರಮುಖ ಆರೋಪಿ ಪ್ರಭು ಕುಮಾರ್ ಎಂದು ತಿಳಿದು ಆತನ ಪತ್ತೆಗಾಗಿ ತನಿಖೆ ಮುಂದುವರೆಸಿದೆವು.
ಕೊನೆಯದಾಗಿ 14 ರಂದು ಯಶವಂತಪುರದ ಬಳಿ ಆರೋಪಿಯನ್ನು ಸೆರೆ ಹಿಡಿದು ವಶಪಡಿಸಿಕೊಂಡೆವು. ಆರೋಪಿಯ ಬಂಧನದ ನಂತರ ಆತನು ಚಿಂದಿ ಮಾರಾಟಗಾರನಾಗಿದ್ದ. ತನಿಖೆ ವೇಳೆ ಜು. 8 ರಂದು ಗುರುಮೂರ್ತಿ, ಅಶೋಕ್, ಪ್ರಭು ಕುಮಾರ ಎಂಬ ಮೂವರು ಚಿಂದಿ ಮಾರಾಟ ಮಾಡಿ 450 ಹಣ ದೊರಕಿದ್ದು ಅದರ ಹಂಚಿಕೆ ವಿಚಾರದಲ್ಲಿ ಜಗಳವಾಗುತ್ತದೆ. ಇದರಿಂದ ಪ್ರಭು ಕುಮಾರ ಮರದ ಬಳಿ ಇದ್ದ ದೊಣ್ಣೆಯಿಂದ ಗುರುಮೂರ್ತಿಗೆ ಮೇಲೆ ಹಲ್ಲೆ ಮಾಡುತ್ತಾನೆ. ಆಮೇಲೆ ಅಲ್ಲಿಂದ ಓಡಿ ಹೋಗುತ್ತಾರೆ. ಇದನ್ನೂ ನೋಡಿದ ಸಾರ್ವಜನಿಕರು ಗಾಯಾಳು ಅನ್ನು ಆಸ್ಪತ್ರೆಗೆ ರವಾನಿಸಲು ಪ್ರಯತ್ನಿಸಿದ್ದಾರೆ. ಆದರೆ ಅಷ್ಟೊತ್ತಿಗಾಗಲೇ ಸಾವನ್ನಪ್ಪಿದ್ದಾರೆ. ಈ ಪ್ರಕರಣವನ್ನು ಮಾಹಿತಿ ಇಲ್ಲದಿದ್ದರೂ ಮಲ್ಲೇಶ್ವರಂ ಪೊಲೀಸ್ ಠಾಣೆ ಪೊಲೀಸರು ಉತ್ತಮ ರೀತಿಯಲ್ಲಿ ಪ್ರಕರಣ ಭೇದಿಸಿದ್ದಾರೆ 'ಎಂದು ಹೇಳಿದರು.
ಇದನ್ನೂ ಓದಿ: Vijayapura crime: ರೌಡಿಶೀಟರ್ ಬರ್ಬರ ಹತ್ಯೆ ಪ್ರಕರಣ.. ಮೂವರು ಆರೋಪಿಗಳ ಬಂಧನ