ಬೆಂಗಳೂರು: ಒಂಟಿ ಮಹಿಳೆಯರನ್ನ ಗುರಿಯಾಗಿಸಿಕೊಂಡು ಅವರನ್ನು ಹಿಂಬಾಲಿಸಿ ಮನೆಗೆ ನುಗ್ಗಿ ಬೆದರಿಸಿ ನಗದು -ಚಿನ್ನಾಭರಣ ದೋಚುತ್ತಿದ್ದ ದರೋಡೆಕೋರನನ್ನು ಹೆಚ್ಎಸ್ಆರ್ ಲೇಔಟ್ ಠಾಣೆ ಪೊಲೀಸರು ಬಂಧಿಸಿದ್ದಾರೆ. ಸುದ್ದುಗುಂಟೆಪಾಳ್ಯದ ನಿವಾಸಿಯಾಗಿರುವ ಜೋಶ್ವಾ ಬಂಧಿತ ಆರೋಪಿ.
ಈತ ಖಾಸಗಿ ಕಂಪನಿಯಲ್ಲಿ ಹೆಚ್ಆರ್ ಆಗಿ ಕೆಲಸ ಮಾಡುತ್ತಿದ್ದ. ಅನಂತರ ಕೆಲಸ ತೊರೆದು ಸ್ಟಾರ್ಟ್ ಅಪ್ ಕಂಪೆನಿ ತೆರೆಯಲು ನಿರ್ಧರಿಸಿದ್ದ. ಇದರಂತೆ 40 ಸಾವಿರ ರೂ. ಕೊಟ್ಟು ಗ್ರೇಟ್ ಜಾಬ್ ಹೆಸರಿನಲ್ಲಿ ಅಗ್ರಿಮೆಂಟ್ ಮಾಡಿಕೊಂಡಿದ್ದ. ಆದರೆ ನಿರೀಕ್ಷೆಯಂತೆ ಕಾರ್ಯ ಸಾಧುವಾಗಿರಲಿಲ್ಲ. ಕೆಲಸವಿಲ್ಲದೆ ಹಣವಿಲ್ಲದೆ ಸುತ್ತಾಡುತ್ತಿದ್ದ ಆರೋಪಿ ಸುಲಿಗೆ ಮಾಡಲು ತೀರ್ಮಾನಿಸಿದ್ದ. ಶಾಲೆಯಿಂದ ಮಕ್ಕಳನ್ನು ಮನೆಗೆ ಕರೆದೊಯ್ಯಲು ಬರುವ ಒಂಟಿ ಮಹಿಳೆಯರನ್ನೇ ತನ್ನ ಕೃತ್ಯಕ್ಕೆ ಗುರಿಯಾಗಿಸಿಕೊಳ್ಳುತ್ತಿದ್ದ.
ಅಲ್ಲದೆ ಕೈಯಲ್ಲಿ ಬೀಗದ ಕೀ ಇರುವುದನ್ನ ಗಮನಿಸಿ ಮನೆಯಲ್ಲಿ ಯಾರು ಇಲ್ಲದಿರುವುದನ್ನು ಖಚಿತಪಡಿಸಿಕೊಳ್ಳುತ್ತಿದ್ದ. ನಿರಂತರ ಚಲನವಲನ ಗಮನಿಸಿ ಬಳಿಕ ಮಹಿಳೆಯರ ಮನೆಗೆ ನುಗ್ಗಿ ಚಾಕು ತೋರಿಸಿ ಬೆದರಿಸುತ್ತಿದ್ದ. ಇದೇ ರೀತಿ ಆಗಸ್ಟ್ 21ರಂದು ಹೆಚ್ಎಸ್ಆರ್ ಲೇಔಟ್ನಲ್ಲಿ ಮಹಿಳೆಯೊಬ್ಬರ ಮನೆಗೆ ನುಗ್ಗಿ ಖಾರದಪುಡಿ ಎರಚಿ ಆಕೆ ಕೈಯನ್ನು ಕುಯ್ದು ಚಿನ್ನಾಭರಣ ದೋಚಿ ಪರಾರಿಯಾಗಿದ್ದ. ಈ ಸಂಬಂಧ ಮಹಿಳೆಯು ದೂರು ನೀಡಿದ ಮೇರೆಗೆ ಪೊಲೀಸರು ದರೋಡೆಕೋರನನ್ನು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ.
ಕೃತ್ಯವೆಸಗಲು ಶಾಲೆ ಬಳಿ ಒಂಟಿ ಮಹಿಳೆಯರು ಹೋಗುವುದನ್ನ ಗಮನಿಸುತ್ತಿದ್ದ ಆರೋಪಿ. ಶಾಲಾ ಸಮೀಪದಲ್ಲಿರುವ ಬೇಕರಿಗೆ ಹೋಗಿ ಸಿಗರೇಟ್ ಖರೀದಿಸಿ ಅಲ್ಲಿಂದನೇ ಎಲ್ಲವನ್ನೂ ಲೆಕ್ಕ ಹಾಕುತ್ತಿದ್ದ. ಪ್ರಕರಣ ದಾಖಲಿಸಿಕೊಂಡಿದ್ದ ಪೊಲೀಸರು ಶಾಲಾ ಸಮೀಪದ ಅಳವಡಿಸಲಾಗಿದ್ದ ಸಿಸಿಟಿವಿ ಪರಿಶೀಲಿಸಿದಾಗ ಆರೋಪಿಯು ಬೇಕರಿ ಬಳಿ ನಿಂತಿರುವುದು ಗೊತ್ತಾಗಿದೆ. ಅಲ್ಲಿಗೆ ಹೋದ ಪೊಲೀಸರು ಆನ್‌ಲೈನ್ ಮೂಲಕ ಪಾವತಿ ಮಾಡಿರುವ ಮೊಬೈಲ್ ನಂಬರ್ ಆಧಾರದ ಮೇಲೆ ಸಂಬಂಧಿಸಿದ ಬ್ಯಾಂಕ್ ನಿಂದ ಖಾತೆದಾರನ ಮಾಹಿತಿ ಪಡೆದು ಆರೋಪಿಯನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಸುಲಿಗೆ ಮಾಡಿದ್ದ ಚಿನ್ನಾಭರಣಗಳನ್ನು ಏರಿಯಾದಲ್ಲಿ ಪರಿಚಿತರಾಗಿದ್ದ ರವೀಂದ್ರನ್ ಹಾಗೂ ಅಕ್ಷಯ್ ಎಂಬುವರಿಗೆ ನೀಡಿ ಅವರಿಂದ ಮಾರಾಟ ಮಾಡಿಸಿ ಹಣ ಪಡೆಯುತ್ತಿದ್ದ. ರವೀಂದ್ರನ್ ಹಾಗೂ ಅಕ್ಷಯ್ ವಿರುದ್ಧ ಸುದ್ದುಗುಂಟೆಪಾಳ್ಯ ಪೊಲೀಸ್ ಠಾಣೆಯಲ್ಲಿ ವಿವಿಧ ಅಪರಾಧ ಪ್ರಕರಣಗಳು ದಾಖಲಾಗಿರುವುದು ತಿಳಿದುಬಂದಿದೆ.
ಅಂತಾರಾಜ್ಯ ಸೈಬರ್ ವಂಚಕರ ಬಂಧನ: ಆನ್‌ಲೈನ್ ಇ-ಕಾಮರ್ಸ್ ಕಂಪನಿಗಳಿಂದ ಬರುವ ಕ್ಯಾಶ್ ಆನ್ ಡೆಲವರಿ ಆರ್ಡರ್ ದತ್ತಾಂಶಗಳನ್ನು ಕಳವು ಮಾಡಿ ಗ್ರಾಹಕರಿಗೆ ಅಸಲಿ ವಸ್ತುಗಳ ಬದಲಾಗಿ ನಕಲಿ ವಸ್ತುಗಳನ್ನ ಕಳುಹಿಸಿ, ಗ್ರಾಹಕರು ಮತ್ತು ಕಂಪನಿಗೆ ನಷ್ಟವುಂಟು ಮಾಡುತ್ತಿದ್ದ ಸೈಬರ್ ವಂಚಕರನ್ನು ಬೆಂಗಳೂರು ಉತ್ತರ ವಿಭಾಗದ ಸಿಇಎನ್ ಠಾಣಾ ಪೊಲೀಸರು ಬಂಧಿಸಿದ್ದರು. ಮುಂಬೈ, ಗುಜರಾತ್, ಮಧ್ಯಪ್ರದೇಶ ರಾಜ್ಯಗಳಲ್ಲಿ ಕುಳಿತು ಎರಡು ವರ್ಷಗಳಿಂದ 70 ಲಕ್ಷ ರೂ. ವಂಚಿಸಿದ್ದ ಒಟ್ಟು 21 ಜನ ಆರೋಪಿಗಳನ್ನು ಬಂಧಿಸಲಾಗಿತ್ತು.
ಇದನ್ನೂ ಓದಿ: ತನ್ನ ಅಪ್ರಾಪ್ತ ಪುತ್ರಿಯನ್ನೇ ಮಾರಾಟ ಮಾಡಿದ ತಾಯಿ ಪ್ರಿಯಕರನೊಂದಿಗೆ ಎಸ್ಕೇಪ್: ಖರೀದಿದಾರ, ಮಧ್ಯವರ್ತಿಯ ಬಂಧನ