ಬೆಂಗಳೂರು: ನಾಳೆಯಿಂದ ಏಕದಿನ ಕ್ರಿಕೆಟ್ ವಿಶ್ವಕಪ್ ಹಬ್ಬ ಆರಂಭವಾಗುತ್ತಿದ್ದು, ಕೋಟ್ಯಂತರ ಕ್ರಿಕೆಟ್ ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದಾರೆ. ಅಹಮದಾಬಾದ್ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ಇಂಗ್ಲೆಂಡ್ ಮತ್ತು ನ್ಯೂಜಿಲೆಂಡ್ ನಡುವೆ ಮೊದಲ ಪಂದ್ಯದ ಮೂಲಕ ವಿಶ್ವಕಪ್ ಪಂದ್ಯಾವಳಿಗೆ ವಿಧ್ಯುಕ್ತ ಚಾಲನೆ ಸಿಗಲಿದೆ.
ಅಕ್ಟೊಬರ್ 5ರಿಂದ ನವೆಂಬರ್ 19ರವರೆಗೆ ದೇಶದ 10 ಕ್ರೀಡಾಂಗಣದಲ್ಲಿ 48 ಪಂದ್ಯಗಳು ನಡೆಯಲಿವೆ. ಕ್ರೀಡಾಕೂಟವನ್ನು ಯಶಸ್ವಿಯಾಗಿ ನಡೆಸಲು ಅಗತ್ಯ ಸಿದ್ಧತೆ ನಡೆಸಲಾಗುತ್ತಿದೆ. ಪಂದ್ಯ ನಡೆಯುವ ಸ್ಥಳಗಳಲ್ಲಿ ಕಾನೂನು ಸುವ್ಯವಸ್ಥೆಗೆ ಧಕ್ಕೆಯಾಗದಂತೆ ಪೊಲೀಸ್ ಬಂದೋಬಸ್ತ್ ಮಾಡಿಕೊಳ್ಳಲಾಗುತ್ತಿದೆ.
ಅಕ್ಟೋಬರ್ 20ರಂದು ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಪಂದ್ಯವಿದೆ. ಇಲ್ಲಿ ಒಟ್ಟು 5 ಪಂದ್ಯಗಳು ನಡೆಯಲಿವೆ. ಈ ಕ್ರೀಡಾ ಸಂಭ್ರಮದ ಮಧ್ಯೆ ಏಕದಿನ ವಿಶ್ವಕಪ್ ಟೂರ್ನಿಗೆ ಉಗ್ರರ ಕರಿನೆರಳು ಕೂಡಾ ಬಿದ್ದಿದೆ. ಖಲಿಸ್ತಾನಕ್ಕಾಗಿ ಹೋರಾಟ ನಡೆಸುತ್ತಿರುವ ನಿಷೇಧಿತ ಸಿಖ್ಸ್ ಫಾರ್ ಜಸ್ಟೀಸ್ (ಎಸ್ಎಫ್‌ಜೆ) ಸಂಘಟನೆಯ ಉಗ್ರರು ರಾಷ್ಟ್ರ ರಾಜಧಾನಿ ದೆಹಲಿ ಸೇರಿದಂತೆ ದೇಶದ ಹಲವೆಡೆ ಪ್ರತ್ಯೇಕತೆಯ ಘೋಷಣೆ ಮೊಳಗಿಸಿದ್ದಾರೆ.
ಇತ್ತೀಚೆಗೆ ದೆಹಲಿಯ ಗೋಡೆಗಳ ಮೇಲೆ ಭಾರತ ವಿರೋಧಿ ಹೇಳಿಕೆ ಬರೆಯಲಾಗಿತ್ತು. ಅಲ್ಲದೆ ಅಹಮದಾಬಾದ್ನಲ್ಲಿ ನಡೆಯುವ ಪಂದ್ಯಗಳಿಗೂ ಖಲಿಸ್ತಾನಿಗಳು ಸಮಸ್ಯೆ ಸೃಷ್ಟಿಸುವ ಸಾಧ್ಯತೆಯಿದೆ. ಅಕ್ಟೋಬರ್ನಲ್ಲಿ ವಿಶ್ವಕಪ್ ನಡೆಯುವ ಬದಲು ವಿಶ್ವ ಭಯೋತ್ಪಾದಕ ಕಪ್ ಆಗಲಿದೆ ಎಂದು ಉಗ್ರರು ಬೆದರಿಕೆ ಸಂದೇಶ ಕಳುಹಿಸಿದ್ದರು. ಇದರ ಬೆನ್ನಲ್ಲೇ ಸ್ಥಳೀಯ ಪೊಲೀಸರು ಬಿಗಿ ಪೊಲೀಸ್ ಬಂದೋಬಸ್ತ್ ಮಾಡಿಕೊಂಡಿದ್ದಾರೆ.
ಕೇಂದ್ರ ಗೃಹ ಸಚಿವಾಲಯ ಪರಿಸ್ಥಿತಿಯನ್ನು ಗಂಭೀರವಾಗಿ ಪರಿಗಣಿಸಿದ್ದು ಪಂದ್ಯ ನಡೆಯುವ ರಾಜ್ಯಗಳ ಪೊಲೀಸರಿಗೆ ಹೈ ಆರ್ಲಟ್ ಆಗಿರುವಂತೆ ಸೂಚನೆ ನೀಡಿರುವುದಾಗಿ ತಿಳಿದುಬಂದಿದೆ. ಅದರಂತೆ, ಬೆಂಗಳೂರು ನಗರ ಪೊಲೀಸರು ಬಿಗಿಭದ್ರತೆ ಒದಗಿಸಲು ಮುಂದಾಗಿದ್ದಾರೆ. 2010ರಲ್ಲಿ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಐಪಿಎಲ್ ಮ್ಯಾಚ್ ನಡೆಯುತ್ತಿದ್ದಾಗ ಬಾಂಬ್ ಸ್ಫೋಟವಾಗಿತ್ತು. ಗೇಟ್ ನಂಬರ್ 11 ಹಾಗೂ 15ರಲ್ಲಿ ಇಂಡಿಯನ್ ಮುಜಾಹಿದ್ದೀನ್ ಸಂಘಟನೆಯ ಉಗ್ರರು ಬಾಂಬ್ ಬ್ಲಾಸ್ಟ್ ಮಾಡಿದ್ದರು. ಘಟನೆಯಲ್ಲಿ 15 ಮಂದಿ ಗಾಯಗೊಂಡಿದ್ದರು.
ಇದೀಗ ವಿಶ್ವಕಪ್ ವೇಳೆ ಯಾವುದೇ ಅಹಿತಕರ ಘಟನೆ ನಡೆಯದಂತೆ ಎಚ್ಚರ ವಹಿಸಲು ಹೆಚ್ಚಿನ ಸಂಖ್ಯೆಯಲ್ಲಿ ಪೊಲೀಸರನ್ನು ನಿಯೋಜಿಸಲು ಸಿದ್ಧತೆ ಮಾಡಿಕೊಳ್ಳಲಾಗಿದೆ. ನಗರ ಪೊಲೀಸರ ಭದ್ರತೆ ಜೊತೆಗೆ ಹೆಚ್ಚುವರಿ ಕೇಂದ್ರ ಪೊಲೀಸ್ ಮೀಸಲು ಪಡೆಯನ್ನು ಕರೆಯಿಸಿಕೊಳ್ಳಬೇಕೇ ಎಂಬುದರ ಕುರಿತು ಪರಿಸ್ಥಿತಿ ಅವಲೋಕಿಸಿ ಸಿಬ್ಬಂದಿ ನಿಯೋಜಿಸಲು ಚಿಂತನೆ ನಡೆದಿದೆ.
ಈ ಬಗ್ಗೆ ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ಪ್ರತಿಕ್ರಿಯಿಸಿದ್ದು, "ಖಲಿಸ್ತಾನಿ ಉಗ್ರರಿಂದ ಬೆದರಿಕೆ ಹಿನ್ನೆಲೆಯಲ್ಲಿ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಅಗತ್ಯ ಭದ್ರತಾ ಕ್ರಮ ಕೈಗೊಳ್ಳಲಾಗುವುದು. ಅಗತ್ಯಕ್ಕನುಗುಣವಾಗಿ ಪೊಲೀಸರನ್ನು ನಿಯೋಜಿಸಲಾಗುವುದು" ಎಂದು ಮಾಹಿತಿ ನೀಡಿದ್ದಾರೆ.
ಬೆಂಗಳೂರಿನಲ್ಲಿ ನಡೆಯುವ ಪಂದ್ಯಗಳ ವೇಳಾಪಟ್ಟಿ:
ಅ.20 ಆಸ್ಟ್ರೇಲಿಯಾ-ಪಾಕಿಸ್ತಾನ
ಅ.26 ಇಂಗ್ಲೆಂಡ್- ಶ್ರೀಲಂಕಾ
ನ.4 ನ್ಯೂಜಿಲೆಂಡ್- ಪಾಕಿಸ್ತಾನ
ನ.9 ನ್ಯೂಜಿಲೆಂಡ್- ಶ್ರೀಲಂಕಾ
ನ.12 ಭಾರತ-ನೆದರ್ಲೆಂಡ್
ಇದನ್ನೂ ಓದಿ: ಏಷ್ಯನ್ ಗೇಮ್ಸ್: ಹರ್ಮಿಲನ್ ಬೇನ್ಸ್, ಅವಿನಾಶ್ ಸೇಬಲ್ ಎರಡನೇ ಪದಕ.. ಮಹಿಳೆಯರ ರಿಲೇ ತಂಡಕ್ಕೆ ಬೆಳ್ಳಿ