ಬೆಂಗಳೂರು: ವಿಪತ್ತು ನಿರ್ವಹಣಾ ಪ್ರಾಧಿಕಾರದ ಅಡಿ ಜಿಲ್ಲಾ ವಿಪತ್ತು ನಿರ್ವಹಣಾ ಸಮಿತಿಗಳನ್ನು ರಚಿಸಿದರೆ ಸಾಲದು, ಅವುಗಳ ಕಾರ್ಯ ನಿರ್ವಹಣೆಗೆ ಅನುದಾನ ಒದಗಿಸಬೇಕು ಎಂದು ಹೈಕೋರ್ಟ್ ರಾಜ್ಯ ಸರ್ಕಾರಕ್ಕೆ ಸೂಚಿಸಿದೆ.
ವಿಪತ್ತು ನಿರ್ವಹಣಾ ಕಾಯ್ದೆ 2005 ಅನ್ನು ಪರಿಣಾಮಕಾರಿಯಾಗಿ ಜಾರಿ ಮಾಡಿಲ್ಲ ಎಂದು ಆರೋಪಿಸಿ ತುಮಕೂರಿನ ಮಲ್ಲಿಕಾರ್ಜುನ ಎಂಬುವರು ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಮುಖ್ಯನ್ಯಾಯಮೂರ್ತಿ ಎ.ಎಸ್ ಓಕ ನೇತೃತ್ವದ ವಿಭಾಗೀಯ ಪೀಠ ವಿಚಾರಣೆ ನಡೆಸಿತು.
ಸರ್ಕಾರದ ಪರ ವಕೀಲರು ಹೈಕೋರ್ಟ್ ನ್ಯಾಯಪೀಠಕ್ಕೆ ಮಾಹಿತಿ ನೀಡಿ, ನ್ಯಾಯಾಲಯದ ನಿರ್ದೇಶನದಂತೆ ಜಿಲ್ಲಾ ಮಟ್ಟದಲ್ಲಿ ವಿಪತ್ತು ನಿರ್ವಹಣಾ ಮತ್ತು ನಿಯಂತ್ರಣ ಸಮಿತಿಗಳನ್ನು ರಚಿಸಲಾಗಿದೆ. ಜೊತೆಗೆ ಸಮಿತಿಗಳ ಕಾರ್ಯ ನಿರ್ವಹಣೆಗೆ ನಿಯಮಗಳನ್ನು ರೂಪಿಸಲಾಗಿದೆ ಎಂದರು.
ಸರ್ಕಾರದ ಪರ ವಕೀಲರ ಹೇಳಿಕೆಗೆ ಆಕ್ಷೇಪಿಸಿದ ಅರ್ಜಿದಾರರು, ಸರ್ಕಾರ ಸಮಿತಿಗಳನ್ನು ರಚಿಸಿದೆ. ಆದರೆ, ಅವುಗಳಿಗೆ ಯಾವುದೆ ಅನುದಾನ ಮೀಸಲಿಟ್ಟಿಲ್ಲ. ಹಣ ಇಲ್ಲದಿದ್ದರೆ ಸಮಿತಿಗಳು ಕಾರ್ಯ ನಿರ್ವಹಣೆ ಮಾಡುವುದು ಸಾಧ್ಯವಿಲ್ಲ ಎಂದರು.
ಸರ್ಕಾರದ ಪರ ವಕೀಲರು, 'ರಾಜ್ಯ ವಿಪತ್ತು ನಿರ್ವಹಣಾ ನಿಧಿಯಿಂದ ಹಣ ಒದಗಿಸಲಾಗುವುದು. ಹಣದ ಕೊರತೆ ಇಲ್ಲ ಎಂದು ಸಮಜಾಯಿಷಿ ನೀಡಿದರು'. ವಾದ ಒಪ್ಪದ ಪೀಠ, ಕೇವಲ ಸಮಿತಿಗಳನ್ನು ರಚನೆ ಮಾಡಿದರೆ ಸಾಲದು. ನಿಧಿ ಮೀಸಲಿಟ್ಟು ಹಣ ಒದಗಿಸಬೇಕು ಎಂದಿತು. ಅಲ್ಲದೆ, ವಿಪತ್ತು ನಿರ್ವಹಣಾ ಕಾಯ್ದೆ ಅಡಿಯಲ್ಲಿ ಜಿಲ್ಲಾ ಮಟ್ಟದಲ್ಲಿ ರಚಿಸಿರುವ ಸಮಿತಿಗಳಿಗೆ ಹಣ ಒದಗಿಸಿ. ಆ ಕುರಿತ ವರದಿ ಸಲ್ಲಿಸುವಂತೆ ಸರ್ಕಾರಕ್ಕೆ ಸೂಚಿಸಿ ವಿಚಾರಣೆ ಮುಂದೂಡಿತು.