ಬೆಂಗಳೂರು: ಕೊರೊನಾ ಮಹಾಮಾರಿಯಿಂದಾಗಿ ಕೆಲಸ ಕಳೆದುಕೊಂಡ ಕಾರಣ ಸುಲಭವಾಗಿ ಹಣ ಗಳಿಸುವ ಉದ್ದೇಶದಿಂದ ನಕಲಿ ವಾಟ್ಸ್‌ಆ್ಯಪ್ ಖಾತೆ ತೆರೆದು ಸಾರ್ವಜನಿಕರಿಗೆ ವಂಚಿಸಿ ಹಣ ಪಡೆಯುತ್ತಿದ್ದ ವ್ಯಕ್ತಿಯೋರ್ವನನ್ನು ಬಂಧಿಸುವಲ್ಲಿ ಪೂರ್ವ ವಿಭಾಗದ ಸೈಬರ್ ಸಿಇಎನ್ ಪೊಲೀಸರು ಯಶಸ್ವಿಯಾಗಿದ್ದಾರೆ.
ಸಮೀರ್ ಕುಮಾರ್ ಬಂಧಿತ ಆರೋಪಿ. ಮಂಜುಳಾ ಎಂಬ ಮಹಿಳೆಯ ಫೋಟೋವನ್ನ ಉಪಯೋಗಿಸಿಕೊಂಡು ಆರೋಪಿ ನಕಲಿ ವಾಟ್ಸ್‌ಆ್ಯಪ್ ಪ್ರೊಫೈಲ್ ಕ್ರಿಯೇಟ್ ಮಾಡಿ, ಅದಕ್ಕೆ ಮಂಜುಳಾ ಫೋಟೋ ಹಾಕಿ ಆಕೆಯ ಸ್ನೇಹಿತೆಯರಿಗೆ ಮಂಜುಳಾ ಮೆಸೇಜ್ ಕಳುಹಿಸುವ ಹಾಗೆ ಬಿಂಬಿಸಿ ತಾಯಿಯ ವೈದ್ಯಕೀಯ ಚಿಕಿತ್ಸೆಗೆ ಹಣ ಬೇಕಾಗಿದೆ ಎಂದು ಬ್ಯಾಂಕ್ ವಿವರವುಳ್ಳ ಮೆಸೇಜ್ ಫಾರ್ವರ್ಡ್ ಮಾಡಿದ್ದ. ಹೀಗಾಗಿ ಕೆಲ ಸ್ನೇಹಿತರು ಆರೋಪಿ ಕಳುಹಿಸಿರುವ ಮೆಸೇಜ್ ಮಂಜುಳಾ ಕಳುಹಿಸಿದ್ದಾಗಿ ನಂಬಿ ಆರೋಪಿ ಕಳುಹಿಸಿದ ಅಕೌಂಟ್ ನಂಬರ್ಗೆ ಹಣ ಹಾಕಿದ್ದಾರೆ.
ಸ್ನೇಹಿತರು ಒಂದು ದಿನ ತಾಯಿ ಹೇಗಿದ್ದಾರೆಂದು ಕರೆ ಮಾಡಿದಾಗ ವಿಚಾರ ಬಯಲಾಗಿದೆ. ಹೀಗಾಗಿ ಆರೋಪಿ ವಿರುದ್ಧ ದೂರು ನೀಡಿದ್ದರು. ಪ್ರಕರಣ ದಾಖಲಿಸಿಕೊಂಡು, ಪೂರ್ವ ವಿಭಾಗ ಡಿಸಿಪಿ ಶರಣಪ್ಪ ಅವರ ನೇತೃತ್ವದಲ್ಲಿನ ತಂಡ ಕಾರ್ಯಾಚರಣೆಗೆ ಇಳಿದು ಆರೋಪಿಯನ್ನು ಬಂಧಿಸಿ ಸೈಬರ್ ಕಾಯ್ದೆ ಅಡಿ ಪ್ರಕರಣ ದಾಖಲಿಸಿದ್ದಾರೆ.
ಆರೋಪಿಯನ್ನ ಹೆಚ್ಚಿನ ವಿಚಾರಣೆಗೆ ಒಳಪಡಿಸಿದಾಗ ಆರೋಪಿ ಮೂಲತಃ ಪಶ್ಚಿಮ ಬಂಗಾಳದವನಾಗಿದ್ದು, ಮಾರ್ಚ್ 2020ರಲ್ಲಿ ವಿಧಿಸಲಾದ ಲಾಕ್ಡೌನ್ ಸಂದರ್ಭದಲ್ಲಿ ತನ್ನ ಕೆಲಸ ಕಳೆದುಕೊಂಡಿದ್ದ. ಹೀಗಾಗಿ ಜೀವನ ನಿರ್ವಹಣೆಗೆ ಕಷ್ಟವಾದ ಕಾರಣ ಕಳೆದ ತಿಂಗಳು ಇಂದಿರಾನಗರದ ಖಾಸಗಿ ಕಂಪನಿ ಸಂದರ್ಶನಕ್ಕೆ ಅಫ್ಲೆ ಮಾಡಿದ್ದ. ಕಂಪನಿಯವರು ಸಂದರ್ಶನಕ್ಕೆ ಕರೆ ಮಾಡಿ ಸಂದರ್ಶನಕ್ಕೆ ಹೋದ ಸಮಯದಲ್ಲಿ ಕಂಪನಿಯ ಉದ್ಯೋಗಿಗಳ ಅನೇಕ ವಿವರಗಳನ್ನ ಕದ್ದಿದ್ದ ಎನ್ನಲಾಗಿದೆ.
ನಂತ್ರ ಗೂಗಲ್ ಮೂಲಕ ಇನ್ನಷ್ಟು ಮಾಹಿತಿ ಕಲೆಹಾಕಿದ್ದ. ಸುಲಭವಾಗಿ ಜೀವನ ನಡೆಸಲು ಹೊಸದಾಗಿ ಸಿಮ್ಗಳನ್ನು ಖರೀದಿಸಿ ಮಂಜುಳಾ ಅವರ ಹೆಸರಿನಲ್ಲಿ ಫೇಕ್ ಅಕೌಂಟ್ ಕ್ರಿಯೇಟ್ ಮಾಡಿ ಸ್ನೇಹಿತರಿಂದ ಹಣ ವಸೂಲಿ ಮಾಡಿರುವುದಾಗಿ ತಪ್ಪೊಪ್ಪಿಕೊಂಡಿದ್ದಾನೆ. ಸದ್ಯ ಆರೋಪಿ ಬಹಳ ಮಂದಿಗೆ ಹೀಗೆ ಮೋಸ ಮಾಡಿರುವ ಸಾಧ್ಯತೆಯಿದ್ದು, ತನಿಖೆ ಮುಂದುವರೆದಿದೆ.