ಬೆಂಗಳೂರು: ದೀಪಾವಳಿ ಹಬ್ಬ ಅಂದರೆ ಭಾಗಶಃ ಜನರು ರಸ್ತೆಗಳಲ್ಲಿ ಪಟಾಕಿ ಹೊಡೆದು ಸಂಭ್ರಮಿಸ್ತಾರೆ. ಕೆಲವರು ಮನೆಯನ್ನೇ ದೀಪಾಲಂಕಾರಗಳಿಂದ ಕಂಗೊಳಿಸುವಂತೆ ಮಾಡ್ತಾರೆ. ಆದರೆ ಈ ಬಾರಿ ಈ ಬಗೆಯ ಸಂಭ್ರಮಕ್ಕೆ ಕೊರೊನಾ ಬ್ರೇಕ್ ಹಾಕಿದೆ.
ಮುಖ್ಯವಾಗಿ ಪಟಾಕಿ ಮಾರಾಟ ನಿಷೇಧಕ್ಕೆ ಮುಂದಾಗಿದ್ದ ಸರ್ಕಾರವು ಬಳಿಕ ಹಸಿರು ಪಟಾಕಿ ಮಾರಾಟಕ್ಕೆ ಮಾತ್ರ ಅವಕಾಶ ಕಲ್ಪಿಸಿದೆ. ನವೆಂಬರ್ 7 ರಿಂದ 16 ರವರೆಗೆ ಮಾತ್ರ ಮಾರಾಟಕ್ಕೆ ಅವಕಾಶ, ಅದು ಕೂಡ ಪರವಾನಗಿ ಇದ್ದವರಿಗಷ್ಟೇ ಹಸಿರು ಪಟಾಕಿ ಮಾರಾಟಕ್ಕೆ ಅನುಮತಿ ನೀಡಲಾಗಿದೆ.
ಇನ್ನು ರಾಜ್ಯ ರಾಜಧಾನಿ ಬೆಂಗಳೂರಿನಲ್ಲೂ ದೀಪಾವಳಿ ಆಚರಣೆಗೆ ಕಟ್ಟುನಿಟ್ಟಿನ ತಯಾರಿ ನಡೆದಿದೆ.. ಈ ಬಗ್ಗೆ ಬಿಬಿಎಂಪಿಯ ಆಯುಕ್ತ ಮಂಜುನಾಥ್ ಪ್ರಸಾದ್ ಮಾತಾನಾಡಿ, ರಾಜ್ಯ ಸರ್ಕಾರದ ಆದೇಶದಂತೆ ಹಸಿರು ಪಟಾಕಿ ಮಾರಾಟಕ್ಕೆ ಹಾಗೂ ಸಿಡಿಸಲು ಅಷ್ಟೇ ಅವಕಾಶವಿದೆ. ಬೇರೆ ರಾಸಾಯನಿಕ ಹೆಚ್ಚು ಮಾಲಿನ್ಯ ಶಬ್ಧ ಬರುವ ಪಟಾಕಿ ನಿಷೇಧ ಮಾಡಲಾಗಿದೆ ಎಂದು ತಿಳಿಸಿದ್ದಾರೆ.
ಇನ್ನು ಪಟಾಕಿ ಸ್ಟಾಲ್ - ಅಂಗಡಿ ಇಡಲು ಕೂಡ ಕೆಲವು ಷರತ್ತುಗಳಿವೆ. ಹಸಿರು ಪಟಾಕಿ ತಯಾರಿಸುವ ಅಧಿಕೃತ ಕೇಂದ್ರ ಸರ್ಕಾರದ ಸಿಎಸ್ಐಆರ್ ಸಂಸ್ಥೆಯಿಂದ ಖರೀದಿಸಬಹುದು. ಸರ್ಟಿಫಿಕೇಟ್ ತೋರಿಸಿದರೆ ಪಟಾಕಿ ಅಂಗಡಿ ಇಡಬಹುದು. ಇನ್ನು ಯಾವ - ಯಾವ ಮೈದಾನದಲ್ಲಿ ಪಟಾಕಿ ಸ್ಟಾಲ್ ಇಡಬಹುದು ಅನ್ನೋದನ್ನು ಗುರುತಿಸಿ ಪೊಲೀಸ್ ಆಯುಕ್ತರಿಗೂ ಮಾಹಿತಿ ನೀಡಲಾಗಿದೆ.
ಹಸಿರು ಪಟಾಕಿ ಹೊರತು ಪಡಿಸಿ ಬೇರೆ ಪಟಾಕಿ ಮಾರಾಟ ಮಾಡಿದರೆ ಕಾನೂನು ಕ್ರಮ ಕೈಗೊಳ್ಳಲಾಗುತ್ತೆ ಅಂತ ಆಯುಕ್ತರು ಎಚ್ಚರಿಕೆ ನೀಡಿದ್ದಾರೆ. ಈವರೆಗೆ ಪಟಾಕಿ ಸ್ಟಾಲ್ಗಾಗಿ ಯಾವ ಅರ್ಜಿಗಳು ಬಂದಿಲ್ಲ ಅಂತ ಮಾಹಿತಿ ನೀಡಿದರು. ಪಟಾಕಿ ಅಂಗಡಿ ಹಾಗೂ ಸ್ಟಾಲ್ಗೆ ಅನುಮತಿ ಕೊಟ್ಟರೂ ಅಲ್ಲಿ ಸಾಮಾಜಿಕ ಅಂತರ, ಮಾಸ್ಕ್ ಧರಿಸುವುದು ಕಡ್ಡಾಯ. ಇನ್ನು ನಗರದಲ್ಲಿ ದೀಪಾವಳಿ ಹಬ್ಬ ಅಂತ ಜನರು ಮರೆತು ಗುಂಪು ಸೇರುವುದನ್ನು ನಿಷೇಧಿಸಲಾಗಿದೆ.. ಮೈದಾನದಲ್ಲಿ ಸಾಮೂಹಿಕ ಆಚರಣೆಗೂ ಅನುಮತಿ ಇಲ್ಲ. ಎಲ್ಲರೂ ತಮ್ಮ ತಮ್ಮ ಮನೆಯಲ್ಲೇ ಹಬ್ಬ ಆಚರಣೆ ಮಾಡಬೇಕು ಅಂತ ಆಯುಕ್ತರು ತಿಳಿಸಿದ್ದಾರೆ.