ಬೆಂಗಳೂರು: ದೇಶ - ವಿದೇಶಗಳಿಂದ ರಾಜ್ಯಕ್ಕೆ ಬರುವ ಪ್ರವಾಸಿಗರಿಗೆ ವಿಶ್ವದರ್ಜೆಯ ಸೌಲಭ್ಯಗಳನ್ನು ಕಲ್ಪಿಸಲು ರಾಜ್ಯದ ಪ್ರಮುಖ ಪ್ರವಾಸಿ ತಾಣಗಳಾದ ಬೇಲೂರು, ಹಂಪಿ, ಬಾದಾಮಿ ಹಾಗೂ ವಿಜಯಪುರಗಳಲ್ಲಿ ತ್ರಿಸ್ಟಾರ್ ಹೋಟೆಲ್ ನಿರ್ಮಾಣ ಮಾಡಲಾಗುವುದು ಎಂದು ಪ್ರವಾಸೋದ್ಯಮ ಸಚಿವ ಸಿ.ಪಿ ಯೋಗೇಶ್ವರ್ ಹೇಳಿದ್ದಾರೆ.
ನಗರದ ಕುಮಾರಕೃಪಾ ಅತಿಥಿಗೃಹದಲ್ಲಿ ಪ್ರವಾಸೋದ್ಯಮ, ಪರಿಸರ ಹಾಗೂ ಜೀವಿಶಾಸ್ತ್ರ ಸಚಿವ ಸಿ.ಪಿ.ಯೋಗೇಶ್ವರ್ ಮೈ ರೈಟ್ಸ್ ಸಂಸ್ಥೆ ಅಧಿಕಾರಿಗಳು ಹಾಗೂ ಕೆಎಸ್ಟಿಡಿಸಿ ಅಧಿಕಾರಿಗಳ ಜೊತೆ ಸಭೆ ನಡೆಸಿದರು. ಈ ವೇಳೆ, ರಾಜ್ಯದಲ್ಲಿ ನಾಲ್ಕು ತ್ರಿಸ್ಟಾರ್ ಹೋಟೆಲ್ ನಿರ್ಮಾಣ ಸಂಬಂಧ ಒಡಂಬಡಿಕೆ ಮಾಡಿಕೊಳ್ಳಲಾಯಿತು.
ಸಭೆ ನಂತರ ಮಾತನಾಡಿದ ಸಚಿವ ಯೋಗೇಶ್ವರ್, ರಾಜ್ಯ ಪ್ರವಾಸೋದ್ಯಮ ಅಭಿವೃದ್ಧಿ ನಿಗಮವು ಮೈ ರೈಟ್ಸ್ ಸಂಸ್ಥೆಯ ಜೊತೆಗೆ ಒಪ್ಪಂದ ಮಾಡಿಕೊಂಡಿದೆ. ಮುಂದಿನ ತಿಂಗಳು ನಾಲ್ಕು ಹೋಟೆಲ್ಗಳಿಗೆ ಗುದ್ದಲಿ ಪೂಜೆ ಮಾಡಿ ಕಾಮಗಾರಿ ಆರಂಭಿಸುವುದಾಗಿ ತಿಳಿಸಿದರು.
ವಿಜಯಪುರದಲ್ಲಿ 16.74 ಕೋಟಿ ವೆಚ್ಚದಲ್ಲಿ 57 ಕೊಠಡಿಗಳ ಹೋಟೆಲ್, ಬಾದಾಮಿಯಲ್ಲಿ 18.32 ಕೋಟಿ ವೆಚ್ಚದಲ್ಲಿ 72 ಕೊಠಡಿಗಳುಳ್ಳ ಹೋಟೆಲ್, ಹಂಪಿಯಲ್ಲಿ 28.20 ಕೋಟಿ ವೆಚ್ಚದಲ್ಲಿ 75-100 ಕೊಠಡಿವುಳ್ಳ ಹೋಟೆಲ್ ಹಾಗೂ ಬೇಲೂರಿನಲ್ಲಿ 20.71 75 ಕೊಠಡಿಗಳ ತ್ರಿಸ್ಟಾರ್ ಹೋಟೆಲ್ ನಿರ್ಮಾಣ ಮಾಡಲಾಗುತ್ತದೆ ಎಂದರು.
ಹಂಪಿ, ಬೇಲೂರು, ಬಾದಾಮಿ ಹಾಗೂ ವಿಜಯಪುರಗಳಲ್ಲಿ ಪ್ರವಾಸಿಗರಿಗೆ ತಂಗಲು ಉತ್ತಮ ಹೋಟೆಲ್ ಗಳು ಇರಲಿಲ್ಲ ಹೀಗಾಗಿ ವಿಶ್ವವಿಖ್ಯಾತ ಪ್ರವಾಸಿ ತಾಣಗಳಲ್ಲಿ ಹೋಟೆಲ್ ಗಳನ್ನು ನಿರ್ಮಿಸುತ್ತಿದ್ದೇವೆ. ಹಂಪಿಯಲ್ಲಿ 9.5 ಎಕರೆ ಪ್ರದೇಶದಲ್ಲಿ, ಬೇಲೂರಿನಲ್ಲಿ ಯಗಚಿ ಅಣೆಕಟ್ಟಿನ ಸಮೀಪ 6 ಎಕರೆ ಪ್ರದೇಶದಲ್ಲಿ, ಬಾದಾಮಿಯಲ್ಲಿ ಬನಶಂಕರಿ ದೇವಾಲಯದ ಸಮೀಪ ಹಾಗೂ ವಿಜಯಪುರದಲ್ಲಿ ತಲಾ ಹತ್ತು ಎಕರೆ ಪ್ರದೇಶದಲ್ಲಿ ಅತ್ಯಾಧುನಿಕ ಹಾಗೂ ಸುಸಜ್ಜಿತವಾದ ಹೋಟೆಲ್ ಗಳನ್ನು ನಿರ್ಮಾಣ ಮಾಡುವುದಾಗಿ ತಿಳಿಸಿದರು.
ಕಾಮಗಾರಿಯ ಗುಣಮಟ್ಟದಲ್ಲಿ ಯಾವುದೇ ರೀತಿ ರಾಜಿ ಆಗಬಾರದು ಸುಂದರವಾದ ವಿನ್ಯಾಸದೊಂದಿಗೆ ನಿಗದಿಪಡಿಸಿದ ಸಮಯದಲ್ಲಿ ಹೋಟೆಲ್ಗಳನ್ನುನಿರ್ಮಾಣ ಮಾಡುವಂತೆ ಮೈ ರೈಟ್ಸ್ ಕಂಪನಿಗೆ ಸಚಿವರು ಸೂಚಿಸಿದರು.