ಬೆಂಗಳೂರು: ನಾನು ಸಚಿವ ಸ್ಥಾನದ ಆಕಾಂಕ್ಷಿ ಅಲ್ಲ. ಸಿಎಂ, ಹೈಕಮಾಂಡ್ ನಿರ್ಧಾರಕ್ಕೆ ನಾನು ಬದ್ಧ ಎಂದು ಪರಿಷತ್ ಸದಸ್ಯ ಸಿ.ಪಿ.ಯೋಗೇಶ್ವರ್ ತಿಳಿಸಿದ್ದಾರೆ.
ಸಚಿವ ರಮೇಶ್ ಜಾರಕಿಹೊಳಿ ಭೇಟಿ ಬಳಿಕ ಮಾತನಾಡಿದ ಅವರು, ರಮೇಶ್ ಜಾರಕಿಹೊಳಿ ನನ್ನ ಸ್ನೇಹಿತರು. ಅವರ ಭೇಟಿಗೆ ವಿಶೇಷ ಅರ್ಥ ಇಲ್ಲ. ನಾನು ಸಚಿವ ಸ್ಥಾನ ಬೇಕು ಅಂತ ಮಾಧ್ಯಮಗಳಲ್ಲಿ ಹೇಳಿಕೆ ಕೊಟ್ಟಿಲ್ಲ. ಬೇರೆ ಎಲ್ಲೂ ಹೇಳಿಲ್ಲ. ಸಿಎಂ, ವರಿಷ್ಠರು ಮನಸ್ಸು ಮಾಡಿ ಕೊಟ್ರೆ ನಿಭಾಯಿಸ್ತೇನೆ ಎಂದು ತಿಳಿಸಿದರು.
ಶಾಸಕರಿಂದ ವಿರೋಧ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ನಾನು ಸೋತವನು ಅಂತ ಹೇಳ್ತಿದ್ದಾರೆ. ನಮ್ಮ ಶಾಸಕರೂ ಹೇಳ್ತಿದ್ದಾರೆ. ಯಾಕೋ ಗೊತ್ತಿಲ್ಲ, ವಿವಾದ ನನ್ನ ಹಿಂದೆ ಬಿದ್ದಿದೆ. ಶಾಸಕರು ತಮ್ಮ ಅಭಿಪ್ರಾಯ ಹೇಳಿರಬಹುದು. ನಾನು ಯಾರ ವಿರುದ್ಧವೂ ಮಾತಾಡಲ್ಲ. ಬಿಜೆಪಿ ಅಧಿಕಾರಕ್ಕೆ ಬರಬೇಕೆಂದು ಬಯಸಿದ್ದೆ. ಪಕ್ಷ ಅಧಿಕಾರದಲ್ಲಿದೆ. ನನಗೂ ಪರಿಷತ್ ಸದಸ್ಯರಾಗಿ ಮಾಡಿದ್ದಾರೆ. ಇನ್ನೇನು ಬೇಕು ನನಗೆ? ನನಗೆ ವಿವಾದ ಮಾಡಿಕೊಳ್ಳುವುದಕ್ಕೆ ಇಷ್ಟ ಇಲ್ಲ. ನಾನು ಯಾರ ವಿರುದ್ಧವೂ ಮಾತನಾಡಲ್ಲ. ದೆಹಲಿಗೆ ಹೋಗ್ತೇನೆ, ಬರ್ತೇನೆ. ವೈಯಕ್ತಿಕ ಅಭಿಪ್ರಾಯಕ್ಕಿಂತ ಪಕ್ಷದ ನಿರ್ಧಾರ ಮುಖ್ಯ ಎಂದರು.
ಇದನ್ನೂ ಓದಿ: ಸಿಪಿ ಯೋಗೇಶ್ವರ್ಗೆ ಮಂತ್ರಿಗಿರಿ ನೀಡುವಂತೆ ವರಿಷ್ಠರಲ್ಲಿ ಚರ್ಚಿಸಿದ್ದೇನೆ: ರಮೇಶ್ ಜಾರಕಿಹೊಳಿ
ನನ್ನ ವಿರುದ್ಧ ಕುಮಾರಸ್ವಾಮಿ ಮತ್ತು ಡಿ.ಕೆ.ಶಿವಕುಮಾರ್ ಪಿತೂರಿ ಮಾಡಿದರು. ಅವರಿಬ್ಬರೂ ಇವತ್ತು ಯಾವ ಪರಿಸ್ಥಿತಿಯಲ್ಲಿದ್ದಾರೆ ಅಂತ ಎಲ್ಲರಿಗೂ ಗೊತ್ತಿದೆ. ಮುಖ್ಯಂಮಂತ್ರಿ ಸ್ಥಾನ ಹೋದ ಮೇಲೆ ಕುಮಾರಸ್ವಾಮಿಗೆ ತಳಮಳ ಆಗಿದೆ. ಅವರು ಬಹಳ ಹತಾಶರಾಗಿ ಮಾತನಾಡುತ್ತಾರೆ. ಕುಮಾರಸ್ವಾಮಿಗೆ ಈಗ ರಾಜಕೀಯವಾಗಿ ಕಷ್ಟ ಇದೆ. ಅವರು ಬಹಳ ವರ್ಷಗಳಿಂದ ನನ್ನ ವಿರುದ್ಧ ಪಿತೂರಿ ಮಾಡ್ತಲೇ ಇದ್ದಾರೆ ಎಂದು ಕಿಡಿಕಾರಿದರು.
ನಾನೇ ಚನ್ನಪಟ್ಟದಲ್ಲಿ ಸರ್ಕಾರ ಎಂಬ ಹೆಚ್ಡಿಕೆ ಹೇಳಿಕೆ ವಿಚಾರವಾಗಿ ಮಾತನಾಡಿ, ಕುಮಾರಸ್ವಾಮಿ ಚನ್ನಪಟ್ಟಣಕ್ಕೆ ಮಾತ್ರ ಸೀಮಿತರಾಗಿದ್ದಾರೆ. ಅವರು ಸಿಎಂ ಹುದ್ದೆ ಉಳಿಸಿಕೊಳ್ಳಲು ಆಗಲಿಲ್ಲ. ಅವರಿಗೆ ತಳಮಳ ಆಗಿದೆ. ಕುಮಾರಸ್ವಾಮಿಗೆ ಈಗ ರಾಜಕೀಯ ಸಂಕಷ್ಟ ಇದೆ. ಅವರು ನೊಂದಿದ್ದಾರೆ, ಅಧಿಕಾರ ಕಳ್ಕೊಂಡಿದ್ದಾರೆ. ಅವರನ್ನು ನಾನು ಇನ್ನೂ ನೋಯಿಸಲ್ಲ. ಸಿಎಂ ಭೇಟಿ ಮಾಡ್ತಾರೆ, ಕೆಲಸಗಳನ್ನು ಮಾಡಿಸ್ಕೊಂಡು ಹೋಗಲಿ. ನಾನು ರಾಜಕೀಯವಾಗಿ ಬೆಳೆಯಲು ವಿರೋಧ ಇದೆ. ಪಕ್ಷದೊಳಗೂ ವಿರೋಧ ಇದೆ. ಪಕ್ಷದ ಹೊರಗೂ ವಿರೋಧ ಇದೆ ಎಂದರು.
ಸಂತೋಷ್ ಆತ್ಮಹತ್ಯೆ ಯತ್ನ ವಿಚಾರದಲ್ಲಿ ಡಿಕೆಶಿ ಹೇಳಿಕೆ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ಡಿಕೆಶಿ ಗಾಳಿಯಲ್ಲಿ ಪಟಾಕಿ ಹೊಡೆಯುವ ಹೇಳಿಕೆ ಕೊಡುತ್ತಾರೆ. ಕಾಂಗ್ರೆಸ್ ಅಧ್ಯಕ್ಷರು, ಅನುಭವಿ. ಅವರು ನಗೆಪಾಟಲಿನಂತಹ ಹೇಳಿಕೆ ಕೊಡೋದು ಯಾಕೆ ಎಂದು ಪ್ರಶ್ನಿಸಿದರು.