ಬೆಂಗಳೂರು : ಕೊರೊನಾ ವಾರಿಯರ್ ಆಗಿ ಇಡೀ ಸಿಲಿಕಾನ್ ಸಿಟಿಯ ಭದ್ರತೆಯ ಹೊಣೆ ಹೊತ್ತಿರುವ ನಗರ ಪೊಲೀಸ್ ಆಯುಕ್ತ ಭಾಸ್ಕರ್ ರಾವ್ ಅವರು ಕಳೆದ ಐದು ದಿನದಿಂದ ಹೋಂ ಕ್ವಾರಂಟೈನ್‌ನಲ್ಲಿದ್ರು.
ಅವರಿಗೆ ಕ್ವಾರಂಟೈನ್ ಸಂದರ್ಭದಲ್ಲಿ ಕೊರೊನಾ ಸೋಂಕಿನ ಸ್ವಾಬ್ ಟೆಸ್ಟ್ ನಡೆಸಲಾಗಿತ್ತು. ಸದ್ಯ ಗಂಟಲ ಪರೀಕ್ಷೆಯ ವರದಿ ನೆಗೆಟಿವ್ ಎಂದು ಬಂದಿದೆ. ಅದನ್ನು ಸ್ವತಃ ನಗರ ಪೊಲೀಸ್ ಆಯುಕ್ತರೇ ಟ್ವೀಟ್ ಮೂಲಕ ತಿಳಿಸಿದ್ದಾರೆ. ಸಿಲಿಕಾನ್ ಸಿಟಿಯ ಎಲ್ಲಾ ಜನತೆಗೆ ಧನ್ಯವಾದ, ನಾನು ನಿಮ್ಮ ಆಶೀರ್ವಾದದಿಂದ ಗುಣಮುಖನಾಗಿ ಕೆಲಸಕ್ಕೆ ಹಾಜರಾಗಿದ್ದೇನೆ ಎಂದು ತಿಳಿಸಿದ್ದಾರೆ.
ನಗರ ಆಯುಕ್ತರ ಕಾರು ಡ್ರೈವರ್ಗೆ ಕೊರೊನಾ ಸೋಂಕು ದೃಢಪಟ್ಟಿತ್ತು. ಹೀಗಾಗಿ ಆಯುಕ್ತರು ಮುಂಜಾಗೃತಾ ಕ್ರಮವಾಗಿ ಹೋಂ ಕ್ವಾರಂಟೈನ್‌ಗೊಳಗಾಗಿದ್ದರು. ಕ್ವಾರಂಟೈನ್ ಮುಗಿಸಿ ಹೊರ ಬಂದವರೇ ಇಂದು ನಗರದಲ್ಲಿ ಲಾಕ್‌ಡೌನ್ ಕೊನೆಯ ದಿನ ಹಿನ್ನೆಲೆ ಸಿಟಿ ರೌಂಡ್ಸ್ ಹೊಡೆದಿದ್ದಾರೆ. ನಾಳೆಯಿಂದ ನಗರದಲ್ಲಿ ಲಾಕ್‌ಡೌನ್ ತೆರವಾಗ್ತಿರುವುದರಿಂದ ಸಂಚಾರ ಮಾರ್ಗಗಳು ಮತ್ತು ಯಾವ ಯಾವ ರಸ್ತೆಗಳಲ್ಲಿ ವಾಹನ ಸಂಚಾರಕ್ಕೆ ಅವಕಾಶ ನೀಡಬೇಕು(ಕಂಟೇನ್ಮೆಂಟ್ ಝೋನ್ ಬಿಟ್ಟು). ವ್ಯಾಪಾರ-ವಹಿವಾಟು, ಟ್ರಾಫಿಕ್ ಮತ್ತು ಅಂಗಡಿ ಓಪನ್ ಮಾಡುವ ಕುರಿತಂತೆ ಮಾರ್ಕೇಟ್, ಜಯನಗರ ಹಾಗೂ ಇತೆರೆಡೆ ಪರಿಶೀಲಿಸಿದರು.
ಬಳಿಕ ಮಾಧ್ಯಮದ ಜೊತೆ ಮಾತನಾಡಿದ ಅವರು, ಲಾಕ್‌ಡೌನ್ ತೆರವು ಬಗ್ಗೆ ಸರ್ಕಾರದ ಆದೇಶ ಪಾಲನೆ ಮಾಡ್ತೀವಿ. ನಮ್ಮ ಸಿಬ್ಬಂದಿ ಎಂದಿನಂತೆ ಕೆಲಸ ಮಾಡ್ತಿದ್ದಾರೆ. ಹಾಗೆ ಕೆಲವು ರಸ್ತೆಗಳನ್ನು ಬಂದ್ ಮಾಡ್ತೀವಿ. ಕೊರೊನಾ ಸೋಂಕು ಆಧಾರದ ಮೇರೆಗೆ ಜನರು ಪರಿಸ್ಥಿತಿ ಅರ್ಥ ಮಾಡ್ಕೋಬೇಕು, ಸುಖಾಸುಮ್ಮನೆ ಓಡಾಟ ಮಾಡಬಾರದು. ಸಾಮಾಜಿಕ ಅಂತರ, ಮಾಸ್ಕ್ ಹಾಕಿಕೊಂಡು ಸರ್ಕಾರದ ನಿಯಮ ಪಾಲನೆ ಮಾಡಿ ಎಂದು ತಿಳಿಸಿದ್ದಾರೆ.