ಬೆಂಗಳೂರು : ಕೋವಿಡ್ ಸೋಂಕು ಕಾಲಿಟ್ಟು ವರ್ಷಗಳೇ ಕಳೆದಿವೆ. ಆದರೆ, ಅದರ ಪ್ರಭಾವ ಮಾತ್ರ ಇನ್ನೂ ತಗ್ಗಿಲ್ಲ. ಮೊದಲ ಮತ್ತು 2ನೇ ಅಲೆಗೆ ತತ್ತರಿಸಿದ ಜನತೆ ಈಗ 3ನೇ ಅಲೆಯ ಪ್ರವೇಶದಿಂದ ಆತಂಕದಲ್ಲಿದ್ದಾರೆ. ಅತಿ ವೇಗವಾಗಿ ಹರಡುವ ರೂಪಾಂತರಿ ಒಮಿಕ್ರಾನ್ ಸೋಂಕಿನಿಂದ ಹೆಚ್ಚು ಜನರು ಆಸ್ಪತ್ರೆಗೆ ದಾಖಲಾಗದಿದ್ದರೂ, ಸಾವಿನ ಸಂಖ್ಯೆ ಹೆಚ್ಚಾಗಿದೆ.
ನಿರ್ಲಕ್ಷ್ಯವೇ ಕಾರಣ : ಬಹುತೇಕ ಮಂದಿ 3ನೇ ಅಲೆಯ ರೂಪಾಂತರಿ ಸೋಂಕನ್ನು ಕಡೆಗಣಿಸುತ್ತಿದ್ದು, ರೋಗ ಲಕ್ಷಣಗಳಿದ್ದರೂ ಪರೀಕ್ಷೆ ಮಾಡಿಸಿಕೊಳ್ಳಲು ಹಿಂದೇೆಟು ಹಾಕುತ್ತಿದ್ದಾರೆ. ಹೀಗಾಗಿ, ಕಳೆದ 10 ದಿನದಲ್ಲಿ ಕೋವಿಡ್ ಸೋಂಕಿತರ ಸಾವಿನ ಸಂಖ್ಯೆ ಹೆಚ್ಚಳವಾಗ್ತಿದೆ.
ಇದೇ ರೀತಿ ಮೊದಲ ಹಾಗೂ ಎರಡನೇ ಅಲೆಯ ಸಂದರ್ಭದಲ್ಲೂ ಜನರು ಪರೀಕ್ಷೆ ಮಾಡಿಸಿಕೊಳ್ಳದೇ ರೋಗದ ತೀವ್ರತೆ ಹೆಚ್ಚಾದಾಗ ಆಸ್ಪತ್ರೆಯ ಬಾಗಿಲು ತಟ್ಟುತ್ತಿದ್ದರು. ಇದರಿಂದ ಅಂತಿಮ ಹಂತದಲ್ಲಿ ಬಂದು ಸಾವನ್ನಪ್ಪುತ್ತಿದ್ದರು. ಇದೇ ವರ್ತನೆ ಇದೀಗ 3ನೇ ಅಲೆಯಲ್ಲಿ ಕಾಣಸಿಗುತ್ತಿದೆ. ಇದಕ್ಕೆ ಪುಷ್ಠಿ ನೀಡುವಂತೆ, ಕಳೆದ 10 ದಿನಗಳಲ್ಲಿ 461 ಮಂದಿ ಕೊರೊನಾಗೆ ಬಲಿಯಾಗಿದ್ದಾರೆ.
ನಿಮ್ಮ ಸೂಕ್ತ ಸಂಗಾತಿ ಹುಡುಕುತ್ತಿರುವಿರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ ನೋಂದಣಿ ಉಚಿತ
ಜನವರಿ 22 ರಿಂದ 31ನೇ ತಾರೀಕಿನವರೆಗೆ 461 ಮಂದಿ ಮೃತಪಟ್ಟಿದ್ದಾರೆ. ಇದರಲ್ಲಿ 39 ಮಂದಿ ಚಿಕಿತ್ಸೆಗೆ ಮುನ್ನವೇ ಮೃತಪಟ್ಟಿರುವುದು ಆತಂಕಕ್ಕೆ ಕಾರಣವಾಗಿದೆ. 39 ಜನರ ಪೈಕಿ, 32 ಮಂದಿ ಮನೆಯಲ್ಲೇ ಸಾವಿಗೀಡಾಗಿದ್ದು, ಇನ್ನು 7 ಮಂದಿ ಆಸ್ಪತ್ರೆಗೆ ಕರೆತರುವ ಮಾರ್ಗ ಮಧ್ಯೆ ಮೃತಪಟ್ಟಿದ್ದಾರೆ ಎಂಬ ವಿಚಾರ ಆರೋಗ್ಯ ಇಲಾಖೆ ನೀಡಿದ ಅಂಕಿ-ಅಂಶದಿಂದ ಬಹಿರಂಗವಾಗಿದೆ.
ಮೃತಪಟ್ಟವರಲ್ಲಿ ಬಹುತೇಕ ಮಂದಿ ವಯಸ್ಕರಾಗಿದ್ದಾರೆ. ಸೋಂಕಿತರ ಸಾವಿಗೆ ಕಾರಣ ನೋಡುವುದಾದರೆ..
- ಸೋಂಕಿತರು ನಿರ್ಲಕ್ಷ್ಯ ವಹಿಸಿರುವುದು.
- ಆರೋಗ್ಯ ಸಮಸ್ಯೆ ಇದ್ದರೂ ಎಚ್ಚರ ವಹಿಸದೇ ಇರುವುದು.
- ರೋಗ ಲಕ್ಷಣಗಳು ಇದ್ದರೂ ಕೋವಿಡ್ ಟೆಸ್ಟ್ ಮಾಡಿಸದೇ ಇರುವುದು.
- ಬಹುತೇಕ ವಯಸ್ಸಾದವರಿಗೆ ಇತರೆ ಆರೋಗ್ಯ ಸಮಸ್ಯೆ ಇರುವುದು ಸಾವಿಗೆ ಕಾರಣ ಎನ್ನಲಾಗ್ತಿದೆ.
ಇದನ್ನೂ ಓದಿ: ಕೋವಿಡ್ ಸೋಂಕಿತರ ಸಂಖ್ಯೆಯಲ್ಲಿ ಇಂದೂ ಇಳಿಕೆ... ಸಾವಿನ ಸಂಖ್ಯೆಯಲ್ಲಿ ಭಾರಿ ಏರಿಕೆ,1733 ಮಂದಿ ಬಲಿ