ಬೆಂಗಳೂರು: ನಗರದ ದಕ್ಷಿಣ ಭಾಗದಲ್ಲಿ ಕೋವಿಡ್ ನಿಯಂತ್ರಣ ಕೊಠಡಿಗಳು ಸ್ಪಂದಿಸುತ್ತಿಲ್ಲ ಮತ್ತು ಆಸ್ಪತ್ರೆಗಳಲ್ಲಿ ಕೋವಿಡ್ ಸೋಂಕಿತರಿಗೆ ವೆಂಟಿಲೇಟರ್, ಹಾಸಿಗೆ ಹಾಗೂ ಇತರೆ ಸೌಲಭ್ಯಗಳು ಸಿಗುತ್ತಿಲ್ಲ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಹಾಗೂ ಮಾಜಿ ಗೃಹ ಸಚಿವ ರಾಮಲಿಂಗಾರೆಡ್ಡಿ ಆರೋಪಿಸಿದ್ದಾರೆ.
ಬಿಬಿಎಂಪಿ ಆಯುಕ್ತ ಗೌರವ್ ಗುಪ್ತಾ ಅವರಿಗೆ ಪತ್ರ ಬರೆದಿರುವ ಅವರು, ಮೇ4 ರಂದು, ಬೆಂಗಳೂರು ದಕ್ಷಿಣ ಲೋಕಸಭಾ ಸಂಸದ ತೇಜಸ್ವಿ ಸೂರ್ಯ, ಬೊಮ್ಮನಹಳ್ಳಿ, ಶಾಸಕರಾದ ಸತೀಶ್ ರೆಡ್ಡಿ, ಬಸವನಗುಡಿ ಶಾಸಕ ರವಿ ಸುಬ್ರಮಣ್ಯ, ಚಿಕ್ಕಪೇಟೆ ಶಾಸಕ ಉದಯ್ ಗರುಡಾಚಾರ್ ಅವರು ಬೆಂಗಳೂರು ದಕ್ಷಿಣ ಕೋವಿಡ್ ನಿಯಂತ್ರಣ ಕೊಠಡಿಯಲ್ಲಿ ಅಕ್ರಮ ಬೆಡ್ ಬುಕಿಂಗ್ ದಂಧೆ ನಡೆದಿದೆ ಎಂದು ಆಪಾದನೆ ಮಾಡಿದ್ದಾರೆ. ಅಕ್ರಮಗಳನ್ನು ನಿಲ್ಲಿಸಲು ಅವರು ಮಾಡಿದ ಪ್ರಯತ್ನಕ್ಕೆ ಅಭಿನಂದನೆಗಳು ಎಂದಿದ್ದಾರೆ.
ಮಾ.15 ರಿಂದ ತಾತ್ಕಾಲಿಕವಾಗಿ ಕ್ರಿಸ್ಟಲ್ ಇನ್ಫೋ ಸರ್ವೀಸಸ್ ಸಂಸ್ಥೆಯಿಂದ 205 ಸಿಬ್ಬಂದಿಯನ್ನು ನೇಮಕ ಮಾಡಿಕೊಂಡಿದ್ದರು. ಸಂಸದರು ಮತ್ತು ಶಾಸಕರು ಅಲ್ಲಿ ಕಾರ್ಯನಿರ್ವಹಿಸುತ್ತಿದ್ದ 205 ಸಿಬ್ಬಂದಿಯಲ್ಲಿ 17 ಮಂದಿ ಅಲ್ಪಸಂಖ್ಯಾತ ಸಮುದಾಯದವರೇ ಈ ಅಕ್ರಮಕ್ಕೆ ಕಾರಣ ಎನ್ನುವುದರ ಜೊತೆಗೆ ಅವರನ್ನು ತಕ್ಷಣವೇ ಕೆಲಸದಿಂದ ತೆಗೆದು ಹಾಕಬೇಕೆಂದು ಸೂಚಿಸಿದ ಕೂಡಲೇ 17 ಮಂದಿಯನ್ನು ಕೆಲಸದಿಂದ ತೆಗೆದುಹಾಕಿದ್ದಾರೆ. ನನ್ನ ಪ್ರಶ್ನೆ, ಒಂದು ವೇಳೆ ಈ 17 ಮಂದಿ ತಪ್ಪು ಮಾಡಿದ್ದರೆ, ಅವರ ವಿರುದ್ಧ ಕ್ರಮ ಜರುಗಿಸಿ, ಯಾವುದೇ ತನಿಖೆ ಮಾಡದೇ ಏಕಾಏಕಿ ಅವರನ್ನು ಕೆಲಸದಿಂದ ತೆಗೆದು ಹಾಕಿರುವುದು ಎಷ್ಟು ಸಮಂಜಸ ಎಂದು ರಾಮಲಿಂಗಾರೆಡ್ಡಿ ಪತ್ರದಲ್ಲಿ ಪ್ರಶ್ನಿಸಿದ್ದಾರೆ.
ಸಂಸದರು, ಶಾಸಕರು ಆರೋಪ ಮಾಡಿದ ತಕ್ಷಣ ಅವರನ್ನು ಯಾವುದೇ ತನಿಖೆ ಇಲ್ಲದೆ ಆರೋಪಿಗಳ ರೀತಿ ಪರಿಗಣಿಸುವುದು ಎಷ್ಟು ಸರಿ? ಇವರ ಜೊತೆ ಇನ್ನು 148 ಮಂದಿ ಅಲ್ಲಿ ಕಾರ್ಯನಿರ್ವಹಿಸುತ್ತಿದ್ದು, ಅವರು ಯಾರೂ ತಪ್ಪು ಮಾಡಿಲ್ಲವೇ? ಆಕ್ರಮದಲ್ಲಿ ಭಾಗಿಯಾಗಿಲ್ಲವೇ? ಈ ವಿಚಾರದಲ್ಲಿ, ನೀವು ಮತ್ತು ನಿಮ್ಮ ಅಧಿಕಾರಿಗಳು ಕೈಗೊಂಡ ನಿರ್ಧಾರ ತಪ್ಪು. ಇದು ಏಕಪಕ್ಷೀಯ. ಬಿಬಿಎಂಪಿ ಸಿಬ್ಬಂದಿಯನ್ನೇ ಈ ಕಾರ್ಯಕ್ಕೆ ನಿಯೋಜನೆ ಮಾಡುವುದು ಸೂಕ್ತ ಎಂಬುದು ನನ್ನ ಅಭಿಪ್ರಾಯ. ಬಿಜೆಪಿಯವರ ಕೈಗೊಂಬೆಗಳಾಗಿ ನೀವು ತೆಗೆದುಕೊಳ್ಳುತ್ತಿರುವ ನಿರ್ಧಾರಗಳು ತಾರತಮ್ಯವಲ್ಲವೇ? ಜೊತೆಗೆ, ದಕ್ಷಿಣ ವಲಯ ಮಾತ್ರವಲ್ಲದೆ ಬೆಂಗಳೂರಿನಲ್ಲಿರುವ ಎಲ್ಲಾ 9 ವಲಯಗಳಲ್ಲಿ ಕೂಡ ಬಿಜೆಪಿ ಸಂಸದರು, ಶಾಸಕರು, ಪ್ರಭಾವಿ ವ್ಯಕ್ತಿಗಳ ಒತ್ತಡಕ್ಕೆ ಮಣಿದು ಕೋವಿಡ್ ನಿಯಂತ್ರಣ ಕೊಠಡಿಗಳ ಮುಖಾಂತರ ಆಸ್ಪತ್ರೆಗಳು, ಬೆಡ್ ಬುಕ್ ಮಾಡಲಾಗುತ್ತಿದೆ ಎಂಬ ಆಪಾದನೆ ಸಂಬಂಧ ಮಾಧ್ಯಮಗಳಲ್ಲಿ ಸುದ್ದಿಗಳು ಪ್ರಕಟವಾಗಿರುತ್ತವೆ ಎಂದು ಅವರು ವಿವರಿಸಿದ್ದಾರೆ.
ಇದನ್ನು ಕೂಡ ತನಿಖೆ ಮಾಡಿ ಬೆಡ್ ಬುಕಿಂಗ್ ಮಾಡಲು ಈಗಿರುವ ವ್ಯವಸ್ಥೆಯನ್ನು ಸಂಪೂರ್ಣವಾಗಿ ಬದಲಾಯಿಸಿ, ಆಧುನಿಕ ತಂತ್ರಜ್ಞಾನ ಬಳಸಿ ದುರುಪಯೋಗ ಆಗದಂತೆ ವ್ಯವಸ್ಥೆ ರೂಪಿಸಿ, ನಗರದಲ್ಲಿ ಪ್ರತಿನಿತ್ಯ ನರಳಾಡುತ್ತಿರುವ ಕೋವಿಡ್ ಸೋಂಕಿತರಿಗೆ ಸೂಕ್ತ ರೀತಿಯಲ್ಲಿ ಎಚ್ಡಿಯು, ಐಸಿಯು, ವೆಂಟಿಲೇಟರ್, ಆಮ್ಲಜನಕ, ಸಾಮಾನ್ಯ ಬೆಡ್ ವ್ಯವಸ್ಥೆ ಮಾಡಬೇಕಾಗಿರುವ ಜವಾಬ್ದಾರಿ ನಿಮ್ಮ ಮೇಲಿರುತ್ತದೆ. ರೆಮ್ಡಿಸಿವರ್ ಇಂಜೆಕ್ಷನ್, ಆಕ್ಸಿಜನ್, ಲಸಿಕೆ ಅಭಾವ ನಮ್ಮ ನಗರದಲ್ಲಿ ಉಂಟಾಗಿದ್ದು ಜನತೆಗೆ ಇದಾವುದು ಇಲ್ಲವಾಗಿದೆ.
ನಮ್ಮ ಬಿಟಿಎಂ ವಿಧಾನಸಭಾ ಕ್ಷೇತ್ರದಲ್ಲಿ 10ಕ್ಕೂ ಹೆಚ್ಚು ಖಾಸಗಿ ಆಸ್ಪತೆಗಳಲ್ಲಿ, ಆಕ್ಸಿಜನ್ ಕೊರತೆ ಉಂಟಾಗಿರುವುದು ವಿಪರ್ಯಾಸ. ಪ್ರತಿಯೊಂದು ಜೀವ ಅಮೂಲ್ಯವಾಗಿದ್ದು, ಬಿಬಿಎಂಪಿ ವತಿಯಿಂದ ನೀಡಲಾಗಿರುವ 108, 1912, 14410 ನಂಬರ್‌ಗೆ ಕರೆ ಮಾಡಿದರೆ ಆಶ್ವಾಸನೆ ದೊರಕುತ್ತದೆಯೇ ಹೊರತು ಯಾವುದೇ ಉಪಯೋಗವಾಗುತ್ತಿಲ್ಲ. ಕೋವಿಡ್ ರೋಗಿಗಳಿಗೆ ಈ ಕೇಂದ್ರಗಳಿಂದ ನೆರವು ಸಿಕ್ಕಿತೆಂಬ ನಿರೀಕ್ಷೆಯಲ್ಲಿ ದಿನ ಕಳೆದು ಅವರ ಪರಿಸ್ಥಿತಿ ಇನ್ನಷ್ಟು ಬಿಗಡಾಯಿಸುತ್ತಿದ್ದು ಇದಕ್ಕೆ ಸರ್ಕಾರವೇ ಹೊಣೆ ಎಂದಿದ್ದಾರೆ.
ಕೋವಿಡ್ ಸೋಂಕಿತರಿಗೆ ಆಸ್ಪತ್ರೆಗಳಲ್ಲಿ ಬೆಡ್ ಸಿಗದ ಕಾರಣ ಪ್ರತಿದಿನ ನೇರವಾಗಿ ಜಂಟಿ ಆಯುಕ್ತರೇ ಸೋಂಕಿತರ ಪರವಾಗಿ ಬರುವವರನ್ನು ಅವರ ಕಚೇರಿಯಲ್ಲಿ ಭೇಟಿ ಮಾಡಿ ಮೇಲ್ವಿಚಾರಣೆ ನಡೆಸುವ ಮೂಲಕ ಸಮಸ್ಯೆ ಪರಿಹರಿಸಬೇಕು. ಈ ವಿಷಯಕ್ಕೆ ಸಂಬಂಧಿಸಿದಂತೆ ತಾವುಗಳು ತುರ್ತು ಕ್ರಮ ಕೈಗೊಂಡು ಜನತೆಯ ನೆರವಿಗೆ ಧಾವಿಸಬೇಕಾಗಿ ಕೋರುತ್ತೇನೆ ಎಂದಿದ್ದಾರೆ.