ಬೆಂಗಳೂರು: ಕೋವಿಡ್-19 ಹಲವರ ಬದುಕು ಕಿತ್ತುಕೊಂಡಿದೆ. ದುಡಿಯುವ ಅನೇಕ ಜೀವ ಡೆಡ್ಲಿ ವೈರಸ್ಗೆ ಬಲಿಯಾಗುತ್ತಿರುವ ಕಾರಣ ಅವರನ್ನೇ ಅವಲಂಬಿತರಾಗಿ ಜೀವನ ನಡೆಸ್ತಿದ್ದವರ ಬಾಳು ಅನಾಥವಾಗಿದೆ. ಕೋವಿಡ್ನಿಂದ ಸಾವನ್ನಪ್ಪಿರುವ ಕುಟುಂಬಕ್ಕೆ ಇದೀಗ ರಾಜ್ಯ ಸರ್ಕಾರ ನೆರವಿನ ಹಸ್ತ ಚಾಚಲು ಚಿಂತನೆ ನಡೆಸುತ್ತಿದೆ.
ಮಹಾಮಾರಿಯಿಂದ ರಾಜ್ಯದಲ್ಲಿ ಇಲ್ಲಿಯವರೆಗೆ 28 ಸಾವಿರಕ್ಕೂ ಅಧಿಕ ಜನರು ಸಾವನ್ನಪ್ಪಿದ್ದಾರೆ. ಹೀಗಾಗಿ ಅನೇಕ ಕುಟುಂಬಗಳು ತೊಂದರೆಗೊಳಗಾಗಿವೆ.ಈಗಾಗಲೇ ಅನಾಥ ಮಕ್ಕಳ ನೆರವಿಗೆ ರಾಜ್ಯ ಸರ್ಕಾರ ಮುಂದಾಗಿದ್ದು, ಬಾಲ ಸೇವಾ ಯೋಜನೆ ಜಾರಿಗೆ ತಂದಿದೆ. ಅನಾಥ ಮಕ್ಕಳಿಗೆ ಮಾಸಿಕ 3,500 ರೂ, ಉಚಿತ ಶಿಕ್ಷಣ ನೀಡಲು ನಿರ್ಧರಿಸಿದೆ. ಅದೇ ರೀತಿ ಕೋವಿಡ್ನಿಂದ ಕುಟುಂಬದ ಏಕೈಕ ದುಡಿಯುವ ವ್ಯಕ್ತಿಯನ್ನು ಕಳೆದುಕೊಂಡಿರುವ ಅವಲಂಬಿತರಿಗೂ ಆರ್ಥಿಕ ನೆರವು ನೀಡಲು ಸರ್ಕಾರ ಚಿಂತನೆ ನಡೆಸುತ್ತಿದೆ.
ಮೃತರ ಅವಲಂಬಿತರಿಗೆ ಸಹಾಯ ಹಸ್ತದ ಚಿಂತನೆ: ಕೊರೊನಾ ಮಹಾಮಾರಿಯನ್ನು ರಾಷ್ಟ್ರೀಯ ವಿಪತ್ತು ಎಂದು ಘೋಷಿಸಲಾಗಿದೆ. ವಿಪತ್ತು ನಿರ್ವಹಣಾ ಕಾಯ್ದೆಯಡಿ ಕೋವಿಡ್ ಸಾವಿಗೆ ಪರಿಹಾರ ನೀಡಬೇಕಾಗುತ್ತದೆ. ಕೊರೊನಾಗೆ ಬಲಿಯಾದವರ ಅವಲಂಬಿತರಿಗೆ ಪರಿಹಾರ ಘೋಷಣೆ ಮಾಡುವ ಸಂಬಂಧ ಈಗಾಗಲೇ ಸುಪ್ರೀಂಕೋರ್ಟ್ನಲ್ಲಿ ಪಿಐಎಲ್ ವಿಚಾರಣೆಯಲ್ಲಿದ್ದು, ಕೇಂದ್ರ ಸರ್ಕಾರದಿಂದ ವಿವರಣೆ ಕೋರಿದೆ. ಇತ್ತ ಈಗಾಗಲೇ ದೆಹಲಿ ಹಾಗೂ ಮಧ್ಯ ಪ್ರದೇಶ ಸರ್ಕಾರ ಕೋವಿಡ್ ಮೃತರ ಕುಟುಂಬಕ್ಕೆ ಎಕ್ಸ್ ಗ್ರೇಷಿಯಾ ಪರಿಹಾರ ಘೋಷಣೆ ಮಾಡಿದೆ. ಅದೇ ಮಾದರಿಯಲ್ಲಿ ಕರ್ನಾಟಕದಲ್ಲೂ ಪರಿಹಾರ ಧನ ನೀಡುವ ಬಗ್ಗೆ ಸಾಧಕ ಬಾಧಕ ಸಂಬಂಧ ಪರಿಶೀಲನೆ ನಡೆಸುವಂತೆ ಆರ್ಥಿಕ ಇಲಾಖೆ ಅಧಿಕಾರಿಗಳಿಗೆ ಸಿಎಂ ಸೂಚನೆ ನೀಡಿದ್ದಾರೆ.
ಆರ್ಥಿಕ ಪರಿಹಾರ ನೀಡುವ ಸಾಧ್ಯತೆ
ದೆಹಲಿಯಲ್ಲಿ ಕೋವಿಡ್ ಮೃತರ ಕುಟುಂಬಕ್ಕೆ 50,000 ರೂ, ಮಧ್ಯಪ್ರದೇಶದಲ್ಲಿ 1 ಲಕ್ಷ ರೂ. ಪರಿಹಾರ ಹಣ ಘೋಷಿಸಲಾಗಿದೆ. ಇತ್ತ ರಾಜ್ಯವೂ ಮೃತರ ಕುಟುಂಬಸ್ಥರಿಗೆ ಇರುವ ಸೀಮಿತ ಆರ್ಥಿಕ ಇತಿಮಿತಿಯೊಳಗೆ ಪರಿಹಾರ ಧನ ನೀಡುವ ಸಂಬಂಧ ಚರ್ಚೆ ನಡೆಸುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಈ ಬಗ್ಗೆ ಸುಳಿವು ನೀಡಿರುವ ಗೃಹ ಸಚಿವ ಬಸವರಾಜ್ ಬೊಮ್ಮಾಯಿ, ಕೋವಿಡ್ನಿಂದ ಮೃತ ಪಟ್ಟವರ ಕುಟುಂಬಸ್ಥರಿಗೆ ಪರಿಹಾರ ನೀಡಲು ಕೇಂದ್ರ ಸರ್ಕಾರದಲ್ಲಿ ನೀತಿಯೊಂದು ರೂಪಿಸಲಾಗುತ್ತಿದೆ.
ಇದನ್ನೂ ಓದಿ: ಕನ್ನಡದಲ್ಲಿ ಪ್ರಥಮ ಬಾರಿಗೆ ತೀರ್ಪು ಬರೆದಿದ್ದ ನ್ಯಾಯಾಧೀಶ ವಾಸುದೇವಮೂರ್ತಿ ವಿಧಿವಶ
ಶೀಘ್ರದಲ್ಲೇ ಈ ಸಂಬಂಧ ನೀತಿ ಹೊರಬೀಳುವ ಸಾಧ್ಯತೆ ಇದೆ. ಅದನ್ನು ನೋಡಿಕೊಂಡು ಇತಿಮಿತಿಯೊಳಗೆ ಕರ್ನಾಟಕದಲ್ಲೂ ಕೋವಿಡ್ಗೆ ಸಾವಿಗೀಡಾದವರ ಕುಟುಂಬಸ್ಥರಿಗೆ ಪರಿಹಾರ ಧನ ನೀಡಲು ಕ್ರಮ ವಹಿಸಲಾಗುತ್ತದೆ ಎಂದು ತಿಳಿಸಿದ್ದಾರೆ. ಕೇಂದ್ರ ಹಾಗೂ ರಾಜ್ಯ ಸರ್ಕಾರಗಳಿಗೆ ಮೃತರ ಕುಟುಂಬಸ್ಥರಿಗೆ ತಲಾ 4 ಲಕ್ಷ ಪರಿಹಾರ ನೀಡಲು ನಿರ್ದೇಶಿಸುವಂತೆ ಕೋರಿ ಸುಪ್ರೀಂಕೋರ್ಟ್ನಲ್ಲಿ ಅರ್ಜಿ ಸಲ್ಲಿಸಲಾಗಿದೆ. ಈ ಅರ್ಜಿ ವಿಚಾರಣೆ ಹಂತದಲ್ಲಿ ಇದೆ. ಈ ಸಂಬಂಧ ಕೇಂದ್ರ ಸರ್ಕಾರಕ್ಕೆ ನೋಟಿಸ್ ಕೂಡ ಜಾರಿಯಾಗಿದೆ. ಜೂನ್ 11ಕ್ಕೆ ಈ ವಿಷಯ ವಿಚಾರಣೆಗೆ ಬರಲಿದ್ದು, ಅಷ್ಟರೊಳಗೆ ಕೇಂದ್ರ ಸರ್ಕಾರ ಒಂದು ನಿರ್ಣಯಕ್ಕೆ ಬರುವ ಸಾಧ್ಯತೆ ಇದೆ. ಅದರನ್ವಯ ರಾಜ್ಯ ಸರ್ಕಾರವೂ ಪರಿಹಾರ ನೀಡುವ ಬಗ್ಗೆ ಕ್ರಮ ಕೈಗೊಳ್ಳಲು ತೀರ್ಮಾನಿಸಿದೆ.