ಬೆಂಗಳೂರು: ಕೋವಿಡ್ ಸೋಂಕು ನಿಯಂತ್ರಣದಲ್ಲಿ ಮುಂಚೂಣಿಯಲ್ಲಿರುವ ಆರೋಗ್ಯ ಕಾರ್ಯಕರ್ತರು ಮತ್ತು ಇತರೆ ಸಿಬ್ಬಂದಿಗೆ ಆದ್ಯತೆ ಮೇರೆಗೆ ಲಸಿಕೆ ನೀಡಿದಂತೆ, ಅವರ ಕುಟುಂಬಗಳಿಗೂ ಆದ್ಯತೆ ಮೇರೆಗೆ ಲಸಿಕೆ ನೀಡಬೇಕು ಎಂದು ಹೈಕೋರ್ಟ್ ಸರ್ಕಾರಕ್ಕೆ ನಿರ್ದೇಶಿಸಿದೆ.
ಕೋವಿಡ್ ನಿರ್ವಹಣೆ ಹಾಗೂ ಚಿಕಿತ್ಸೆಗೆ ಸಂಬಂಧಿಸಿದಂತೆ ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳನ್ನು ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಎ.ಎಸ್. ಓಕ ನೇತೃತ್ವದ ವಿಭಾಗೀಯಪೀಠ ಈ ನಿರ್ದೇಶನ ನೀಡಿದೆ. ಸರ್ಕಾರ ಲಸಿಕೆ ನೀಡುವ ವೇಳೆ ಆರೋಗ್ಯ ಕಾರ್ಯಕರ್ತರು ಹಾಗೂ ಇತರೆ ಕೋವಿಡ್ ವಾರಿಯರ್ಸ್ ಅಷ್ಟೇ ಅಲ್ಲದೆ, ಅವರ ಕುಟುಂಬಗಳಿಗೂ ಆದ್ಯತೆ ನೀಡುವಂತೆ ಸೂಚಿಸಿದೆ.
ಅಲ್ಲದೇ, ಕೊಳೆಗೇರಿ ಜನರಿಗೆ ಲಸಿಕೆ ನೀಡಲು ವಿಶೇಷ ಅಭಿಯಾನಗಳನ್ನು ಹಮ್ಮಿಕೊಳ್ಳಬೇಕು. ಈ ಕಾರ್ಯಕ್ಕೆ ಸರ್ಕಾರೇತರ ಸಂಸ್ಥೆಗಳ ನೆರವು ಬಳಸಿಕೊಳ್ಳಬೇಕು ಎಂದು ನಿರ್ದೇಶಿಸಿದ್ದು, ಈ ಸಂಬಂಧ ಕೈಗೊಂಡ ಕ್ರಮಗಳ ಮಾಹಿತಿಯನ್ನು ಮುಂದಿನ ವಿಚಾರಣೆ ವೇಳೆ ಸಲ್ಲಿಸುವಂತೆ ಸರ್ಕಾರ ಹಾಗೂ ಪಾಲಿಕೆಗೆ ಸೂಚಿಸಿದೆ. ಇದೇ ವೇಳೆ ಕೋವಿಡ್ ಲಸಿಕೆ ಪಡೆಯಲು ಕೋವಿನ್ ಆಪ್ ನಲ್ಲಿ 7 ದಾಖಲೆಗಳನ್ನು ನೀಡಲು ಪ್ರಸ್ತಾಪಿಸಲಾಗಿದೆ. ಅದರಲ್ಲಿ ದಿವ್ಯಾಂಗರ ಗುರುತಿನ ಚೀಟಿಯನ್ನೂ ಸಹ ಸೇರ್ಪಡೆ ಮಾಡಲು ಕ್ರಮ ಕೈಗೊಳ್ಳುವಂತೆ ಸೂಚಿಸಿದೆ.
ರಾಜಕಾರಣಿಗಳ ಬೆಂಬಲಕ್ಕೆ ಆಕ್ಷೇಪ : ವಿಚಾರಣೆ ವೇಳೆ ಅರ್ಜಿದಾರರ ಪರ ವಕೀಲರೊಬ್ಬರು ವಾದಿಸಿ, ಖಾಸಗಿ ಆಸ್ಪತ್ರೆಗಳ ಲಸಿಕಾ ಅಭಿಯಾನ ಕಾರ್ಯಕ್ರಮಗಳಲ್ಲಿ ಜನಪ್ರತಿನಿಧಿಗಳು ಭಾಗವಹಿಸಿ ಅವುಗಳಿಗೆ ಉತ್ತೇಜನ ನೀಡುತ್ತಿದ್ದಾರೆ. ಪಾಲಿಕೆ ಆಯುಕ್ತರೂ ಭಾಗವಹಿಸುತ್ತಿದ್ದಾರೆ ಎಂದು ಆಕ್ಷೇಪಿಸಿದರು. ಜತೆಗೆ, ಜನಪ್ರತಿನಿಧಿಗಳು ಖಾಸಗಿ ಆಸ್ಪತ್ರೆಗಳನ್ನು ಬೆಂಬಲಿಸದಂತೆ ನ್ಯಾಯಾಲಯ ಸೂಚಿಸಬೇಕು ಎಂದರು. ವಾದ ಆಲಿಸಿದ ಪೀಠ ಯಾವುದೇ ಆದೇಶ ನೀಡಲು ನಿರಾಕರಿಸಿತು.