ಬೆಂಗಳೂರು: ವ್ಯಾಕ್ಸಿನ್ ಅಡ್ಡಪರಿಣಾಮಗಳ ಭಯದ ನಡುವೆ ತಾಂತ್ರಿಕ ಸಮಸ್ಯೆಯೂ ಸಹ ಕಾಡಲಾರಂಭಿಸಿದೆ. ಆರೋಗ್ಯ ಕಾರ್ಯಕರ್ತರು, ಸಿಬ್ಬಂದಿ, ವೈದ್ಯರು ವ್ಯಾಕ್ಸಿನ್ ಪಡೆಯಲು ಸಜ್ಜಾಗಿದ್ದು ತಾಂತ್ರಿಕ ಸಮಸ್ಯೆಯಿಂದ ಆರೋಗ್ಯ ಸಿಬ್ಬಂದಿ ಈಗ ಗೊಂದಲಕ್ಕೆ ಸಿಲುಕಿದ್ದಾರೆ ಎನ್ನಲಾಗುತ್ತಿದೆ.
ಕಾಮಾಕ್ಷಿಪಾಳ್ಯದಲ್ಲಿ ತಾಂತ್ರಿಕ ಸಮಸ್ಯೆ:
ಕೋವಿಡ್ ಲಸಿಕೆಗೆ ನೋಂದಣಿಯಾದ ಆರೋಗ್ಯ ಸಿಬ್ಬಂದಿಗೆ ಮೊದಲು ಅವರವರ ಮೊಬೈಲ್ಗೆ ಸಂದೇಶ ಬರಬೇಕು. ಈ ಸಂದೇಶ ಬಂದ ಬಳಿಕ ಅವರು ಆರೋಗ್ಯ ಕೇಂದ್ರಕ್ಕೆ ಬರಬೇಕು. ಕೋವಿಡ್ ಲಸಿಕೆ ಹಾಕಿಕೊಂಡ ಮೇಲೂ ನೋಂದಣಿ ಮಾಡಬೇಕು. ಆದರೆ, ಈ ವೇಳೆ ತಾಂತ್ರಿಕ ಸಮಸ್ಯೆಯಿಂದ ಮೊಬೈಲ್ಗೆ ಬರಬೇಕಾದ ಒಟಿಪಿ ಬರುತ್ತಿಲ್ಲ ಎನ್ನಲಾಗುತ್ತಿದೆ. ಇದು ಆರೋಗ್ಯ ಸಿಬ್ಬಂದಿಯ ತಲೆಬಿಸಿ ಮಾಡಿದೆ. ಈ ತಾಂತ್ರಿಕ ಸಮಸ್ಯೆಯೂ ಡ್ರೈ ರನ್ ವೇಳೆ ಬೆಳಕಿಗೆ ಬಂದಿದೆ.
ಓದಿ: ಆರೋಗ್ಯ ಸಿಬ್ಬಂದಿಯಲ್ಲಿ ಭಯಮಿಶ್ರಿತ ನೆಮ್ಮದಿ; ಕೋವಿಡ್ ವ್ಯಾಕ್ಸಿನ್ ಪಡೆಯಲು ಬೆಂಗಳೂರು ಸಜ್ಜು
ಡ್ರೈ ರನ್ ವೇಳೆ ಕಂಡು ತಾಂತ್ರಿಕ ಸಮಸ್ಯೆ ಬಗ್ಗೆ ಮಾಹಿತಿ ನೀಡಿದ ಆರೋಗ್ಯ ವಿಭಾಗದ ಉಪನಿರ್ದೇಶಕಿ ಡಾ.ಮಮತ ಎಂ.ಎಸ್, ಕೋವಿಡ್ ಲಸಿಕೆ ನೀಡಲು ಆರೋಗ್ಯ ಇಲಾಖೆಯಿಂದ ಸಿದ್ಧತೆ ನಡೆದಿದೆ. 5 ಜಿಲ್ಲೆಗಳಲ್ಲಿ ಕೆಲವು ಕೇಂದ್ರಗಳಲ್ಲಿ ಅಣಕು ಲಸಿಕೆ ಡ್ರೈ ರನ್ ಮಾಡಲಾಗಿದೆ. ಇವತ್ತು ನಗರದ ನಾಲ್ಕು ಕೇಂದ್ರಗಳಿಗೆ ಭೇಟಿ ನೀಡಿ ಪರಿಶೀಲಿಸಿದ್ದೇವೆ. ಸಣ್ಣಪುಟ್ಟ ಸಾಫ್ಟ್ವೇರ್ ಸಮಸ್ಯೆ ಇದೆ. ಆ್ಯಪ್ ರಿಜಿಸ್ಟ್ರೇಷನ್ ಮಾಡುವ ವೇಳೆ ಒಟಿಪಿ ಜನರೇಟ್ ಆಗುತ್ತಿಲ್ಲ. ಅದನ್ನು ಹೊರತುಪಡಿಸಿದರೆ ಶೇ.95 ಆರೋಗ್ಯ ಇಲಾಖೆ ಲಸಿಕೆ ನೀಡಲು ಸಿದ್ಧವಾಗಿದೆ. ಈಗ ಆರೋಗ್ಯ ಸಿಬ್ಬಂದಿಗೆ ಕೋವಿಡ್ ಲಸಿಕೆ ನೀಡಲು ಸಿದ್ಧತೆ ಮಾಡಲಾಗಿದೆ. ಮುಂದಿನ ದಿನಗಳಲ್ಲಿ ಸಾರ್ವಜನಿಕರಿಗೆ ಲಸಿಕೆ ನೀಡಲಾಗುವುದು ಎಂದಿದ್ದಾರೆ.