ಬೆಂಗಳೂರು :ಆರ್. ಆರ್ ನಗರದಲ್ಲಿ ಶಾಂತಿಯುತವಾಗಿ ಮತದಾನ ಮುಗಿದಿದ್ದು, ನಿನ್ನೆ ರಾತ್ರಿ 678 ಮತ ಯಂತ್ರಗಳನ್ನ ಸ್ಥಳಾಂತರ ಮಾಡಲಾಯಿತು. ಇಂದು ಬೆಳಗ್ಗೆ ಪಕ್ಷಗಳ ಏಜೆಂಟರ ಸಮ್ಮುಖದಲ್ಲಿ ಸೀಲ್ ಹಾಕಲಾಗಿದೆ ಎಂದು ಜಿಲ್ಲಾ ಚುನಾವಣಾ ಆಯುಕ್ತ ಮಂಜುನಾಥ್ ಪ್ರಸಾದ್ ತಿಳಿಸಿದರು.
ಮತಯಂತ್ರಗಳು ಇಟ್ಟಿರುವ ಸ್ಟ್ರಾಂಗ್ ರೂಂಗಳಿಗೆ ಕೇಂದ್ರ ಅರೆಸೇನಾ ಪಡೆ ಮೂಲಕ ಮೂರು ಹಂತದ ಭದ್ರತೆ ನೀಡಲಾಗಿದೆ. ನವೆಂಬರ್ ಹತ್ತರಂದು ಬೆಳಗ್ಗೆ 8 ಗಂಟೆಗೆ ಮತ ಎಣಿಕೆ ನಡೆಯಲಿದೆ ಎಂದು ಮಾಹಿತಿ ನೀಡಿದರು.
ಕಳೆದ ಒಂದು ತಿಂಗಳಿನಿಂದ ನಡೆದ ಚುನಾವಣೆ ಪ್ರಕ್ರಿಯೆ ವೇಳೆ ಕೋವಿಡ್ ನಿಯಮ ಪಾಲನೆಯಾಗಿಲ್ಲ. ಹೀಗಾಗಿ, ತಜ್ಞರ ಸಲಹೆ ಮೇರೆಗೆ ಆರ್.ಆರ್ ನಗರ ವಿಧಾಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಎರಡು ಹಂತಗಳಲ್ಲಿ ವ್ಯಾಪಕ ಕೋವಿಡ್ ಪರೀಕ್ಷೆ ನಡೆಯಲಿದೆ. ನ.6 ರಿಂದ 9 ರವರೆಗೆ ಮೊದಲ ಹಂತದ ಪರೀಕ್ಷೆ ಹಾಗೂ ನ.11 ರಿಂದ 14 ರವರೆಗೆ ಎರಡನೆ ಹಂತದ ಪರೀಕ್ಷೆ ನಡೆಯಲಿದೆ.
ಮೊದಲ ಹಂತದಲ್ಲಿ ಚುನಾವಣಾ ಕಾರ್ಯದಲ್ಲಿ ಭಾಗಿಯಾದ ಸಿಬ್ಬಂದಿಗೆ ಹಾಗೂ ಎರಡನೆ ಹಂತದಲ್ಲಿ ಕೊರೊನಾ ಲಕ್ಷಣಗಳಿರುವವರಿಗೆ ನಡೆಯಲಿದೆ. ವಯೋವೃದ್ಧರು ಮತ್ತು ಮಕ್ಕಳಿಗೆ ಆ್ಯಂಟಿಜೆನ್ ಮತ್ತು ಆರ್ಟಿಪಿಎಸ್ ಪರೀಕ್ಷೆ ಮಾಡಲಾಗುತ್ತದೆ ಎಂದು ಮಂಜುನಾಥ್ ಪ್ರಸಾದ್ ತಿಳಿಸಿದರು.
ಬೆಂಗಳೂರಿನಲ್ಲಿ ಪಾಸಿಟಿವ್ ರೇಟಿಂಗ್ ಇಳಿಕೆಯಾಗಿದ್ದು, ಶೇ. 24 ರಷ್ಟಿದ್ದ ಪಾಸಿಟಿವ್ ರೇಟ್, ಈಗ ಶೇ.3.5 ರಿಂದ 4 ರಷ್ಟು ಬರುತ್ತಿದೆ. ಹೀಗೆ ಮುಂದುವರೆದರೆ ಖಂಡಿತವಾಗಿ ಶೇ. 5 ರೊಳಗೆ ಕೊರೊನಾ ನಿಯಂತ್ರಣ ಸಾಧ್ಯ ಎಂದರು.
ಹೋಂ ಐಸೋಲೇಷನ್ನಲ್ಲಿ ಕಿಟ್ ವಿಚಾರವಾಗಿ ಮಾತನಾಡಿ, ಹೋಂ ಐಸೋಲೇಷನ್ನಲ್ಲಿರುವವರಿಗೆ ನಿರಂತರವಾಗಿ ಹೆಲ್ತ್ ಸರ್ವಿಸ್ ಸೆಂಟರ್ಗಳ ಸೌಲಭ್ಯ ನೀಡಲಾಗಿದೆ. ವಲಯವಾರು ಕಿಟ್ ಕೊಡಲಾಗುತ್ತಿದೆ ಎಂದು ಹೇಳಿದರು. ಕಿಟ್ ವಿರಣೆಯಲ್ಲಿ ಅವ್ಯವಹಾರ ನಡೆದಿದೆ ಎಂಬ ಆರೋಪದ ಬಗ್ಗೆ ಮಾತನಾಡಿ, ಆ ಬಗ್ಗೆ ಕ್ರಮಕೈಗೊಳ್ಳುತ್ತೇವೆ ಎಂದರು.