ಬೆಂಗಳೂರು : ಕೊರೊನಾ ನಿರ್ವಹಣೆ ಸೇರಿದಂತೆ ಬಜೆಟ್‌ನಲ್ಲಿ ಉಲ್ಲೇಖಿಸದ 4,008 ಕೋಟಿ ರೂ.ಗಳ ಹೆಚ್ಚುವರಿ ವೆಚ್ಚಕ್ಕೆ ಅನುಮತಿ ಕೋರುವ ವಿಧಾನಸಭೆಯಿಂದ ಅಂಗೀಕೃತ ರೂಪದಲ್ಲಿದ್ದ ಕರ್ನಾಟಕ ಧನವಿನಿಯೋಗ ವಿಧೇಯಕಕ್ಕೆ ವಿಧಾನ ಪರಿಷತ್ ಅಂಗೀಕಾರ ನೀಡಿತು.
ಕರ್ನಾಟಕ ಧನ ವಿನಿಯೋಗ ವಿಧೇಯಕ ಮಂಡನೆ, ಬಜೆಟ್ ಮೀಸಲಿರಿಸದೆ ಇದ್ದು ಅನಿವಾರ್ಯವಾಗಿ ಖರ್ಚು ಮಾಡಲು ಬಂದಾಗ ಸದನದ ಒಪ್ಪಿಗೆ ಪಡೆಯಬೇಕು. ಆ ರೀತಿ 4,008 ಕೋಟಿ ಖರ್ಚಿಗೆ ಒಪ್ಪಿಗೆ ನೀಡಲು ಮನವಿ ಮಾಡುತ್ತೇನೆ. 1,090 ಕೋಟಿ ಹಣ ಕೋವಿಡ್ ಚಿಕಿತ್ಸಾ ಸೌಲಭ್ಯಕ್ಕೆ ಗ್ರಾಮ ಸಡಕ್ ಗೆ 579 ಕೋಟಿ ಖರ್ಚಾಗಿದೆ. ಸಾರಿಗೆ ನಿಗಮ ವೇತನ 543.91 ಕೊಟ್ಟಿದೆ.
ಕೊರೊನಾ ವೈದ್ಯಕೀಯ ಕಾಲೇಜು ಸಲಕರಣೆ ಖರೀದಿಗೆ 150 ಕೋಟಿ, ಕರಾವಳಿ ಸಂರಕ್ಷಣೆಗೆ 108 ಕೋಟಿ, ಬೀಜ ಖರೀದಿಗೆ 100 ಕೋಟಿ, ಆಟೋ ಚಾಲಕರಿಗೆ 97.5 ಕೋಟಿ ಹೀಗೆ ಖರ್ಚು ಬಜೆಟ್ ಗಾತ್ರದ 1.63 ರಷ್ಟು ಹೆಚ್ಚಾಗಿದೆ. ಇದು ಬಜೆಟ್‌ನಲ್ಲಿ ಪ್ರಸ್ತಾಪ ಮಾಡದ ವೆಚ್ಚವಾಗಿದೆ. ಇದಕ್ಕೆ ಸದನ ಅನುಮತಿ ನೀಡಬೇಕು ಎಂದು ಮನವಿ ಮಾಡಿದರು.
ಈ ವೇಳೆ ಮಾತನಾಡಿದ ಜೆಡಿಎಸ್ ಸದಸ್ಯ ಬಸವರಾಜ ಹೊರಟ್ಟಿ, ಅತಿಥಿ ಉಪನ್ಯಾಸಕರು ವೇತನ ಇಲ್ಲದೆ ಕಾಯಿಪಲ್ಯ ಮಾರುತ್ತಿದ್ದಾರೆ. ಮರ್ಯಾದೆ ಕಳೆದುಕೊಳ್ಳುತ್ತಿದ್ದಾರೆ. ಅವರಿಗೂ ಪರಿಹಾರ ನೀಡಿ ಎಂದು ಹೊರಟ್ಟಿ ಮನವಿ ಮಾಡಿದರು. ಸಿಎಂ ಜೊತೆ ಚರ್ಚಿಸುವುದಾಗಿ ಕಾನೂನು ಸಚಿವ ಮಾಧುಸ್ವಾಮಿ ಭರವಸೆ ನೀಡಿದರು.
ನಿಮ್ಮನ್ನು ನಂಬಬಹುದಾ ಎನ್ನುವ ಪ್ರಶ್ನೆಗೆ ನಂಬಿಕೆ ಇಲ್ಲವಾ ಎಂದು ಸಚಿವರು ಮರುಪ್ರಶ್ನೆ ಹಾಕಿದರು. ನಂಬಿಕೆ ಇದೆ. ಆದರೆ, ಜಾರಿ ಆಗಬೇಕಲ್ಲ. ಹಾಗಾಗಿ, ಇದನ್ನು ನಂಬಬಹುದಾ ಎಂದು ಹೊರಟ್ಟಿ ಮತ್ತೊಮ್ಮೆ ಕೇಳಿದರು. ಇದಕ್ಕೆ ಕೆರಳಿದ ಸಚಿವ ಮಾಧುಸ್ವಾಮಿ, ನಂಬಬೇಡಿ ಬಿಡಿ ಎಂದರು.
ಈ ವೇಳೆ ಪ್ರತಿಪಕ್ಷ ನಾಯಕ ಎಸ್ ಆರ್ ಪಾಟೀಲ್ ಮಧ್ಯ ಪ್ರವೇಶ ಮಾಡಿ ಹೊರಟ್ಟಿ ಬೇಡಿಕೆ ಸರಿಯಾಗಿದೆ. ಅದನ್ನೂ ಸೇರಿಸಲು ಮನವಿ ಮಾಡಿದರು. ಅಂತಿಮವಾಗಿ ನನಗಿರುವ ಮಿತಿಯಲ್ಲಿ ನಾವು ಭರವಸೆ ಕೊಡುತ್ತೇವೆ. ಸಿಎಂ ಜೊತೆ ಮಾತುಕತೆ ನಡೆಸುತ್ತೇನೆ ಎಂದು ಭರವಸೆ ನೀಡಿದರು. ಬಿಜೆಪಿಯ ನಾರಾಯಣಸ್ವಾಮಿ ಮಾತನಾಡಿ, 1.10 ಕೋಟಿ ಮಕ್ಕಳ ಭವಿಷ್ಯ ರೂಪಿಸುವ ಶಿಕ್ಷಕರು 2 ಲಕ್ಷ ಇದ್ದಾರೆ, ಅವರಿಗೂ ನೆರವು ನೀಡಿ, ಪ್ರತಿ ಶಿಕ್ಷಕರಿಗೆ ಒಮ್ಮೆ 10 ಸಾವಿರ ಪರಿಹಾರ ನೀಡಿ ಇದಕ್ಕೆ ಬರೀ 200 ಕೋಟಿ ಆಗಲಿದೆ ನೀಡಿ ಎಂದು ಮನವಿ ಮಾಡಿದರು.
ಚರ್ಚೆಗೆ ಉತ್ತರ ನೀಡಿದ ಕಾನೂನು ಸಚಿವ ಜೆ ಸಿ ಮಾಧುಸ್ವಾಮಿ, ಮೆಕ್ಕೆಜೋಳ, ಹೂವು ಬೆಳೆಗಾರರಿಗೆ, ಹಣ್ಣು ತರಕಾರಿ ಬೆಳೆಗಾರರಿಗೆ, ರೇಷ್ಮೆ ಬೆಳೆಗಾರರು, ಕ್ಷೌರಿಕರು, ಅಗಸರು, ಅತಿ ಸಣ್ಣ ಉದ್ದಿಮೆದಾರರು, ನೇಕಾರರು, ಚಾಲಕರಿಗೆ ಮಾಡಿರುವ ವೆಚ್ಚ ಮಾಡಿದ ವಿವರ ನೀಡಿದರು. ಸದಸ್ಯರ ಮನವಿಯಂತೆ ಆಟೋಚಾಲಕರಿಗೆ ಪರಿಹಾರ ಕೈ ತಪ್ಪಿದ್ದರೆ ಅವರಿಗೆ ಮತ್ತೊಂದು ಅವಕಾಶ ನೀಡುವ ಭರವಸೆ ನೀಡಿದರು.
ಕೇಂದ್ರದಿಂದ 2000 ವೆಂಟಿಲೇಟರ್ ಬಂದಿವೆ. 900 ಕೋಟಿ ಹಣ ವಿಪತ್ತು ನಿಧಿಯಲ್ಲಿ ಶೇ.30ರ ಬಳಕೆಗೆ ಅನುಮತಿ ಕೊಟ್ಟಿದ್ದಾರೆ. ಉಪಕರಣಗಳು ದೊಡ್ಡ ಪ್ರಮಾಣದಲ್ಲಿ ಬಂದಿದೆ. ಆದರೆ, ನಗದು ಕಡಿಮೆ ಪ್ರಮಾಣದಲ್ಲಿ ಬಂದಿದೆ ಎಂದು ಮಾಹಿತಿ ನೀಡಿ ವಿಧೇಯಕಕ್ಕೆ ಅನುಮತಿ ನೀಡುವಂತೆ ಸದನಕ್ಕೆ ಮನವಿ ಮಾಡಿದರು. ನಂತರ ಧ್ವನಿ ಮತದ ಮೂಲಕ ವಿಧೇಯಕವನ್ನು ಅಂಗೀಕರಿಸಲಾಯಿತು.
ಸಾದಿಲ್ವಾರು ನಿಧಿ ತಿದ್ದುಪಡಿ ವಿಧೇಯಕ ಪಾಸ್ : ವಿಧಾನಸಭೆಯಿಂದ ಅಗೀಕೃತ ರೂಪದಲ್ಲಿದ್ದ ತುರ್ತು ಪರಿಸ್ಥಿತಿಯಲ್ಲಿ ವೆಚ್ಚ ಮಾಡಲು ಮೀಸಲಿರಿಸುವ ನಿಧಯನ್ನು ಹೆಚ್ಚಿಸುವ ಸಾದಿಲ್ವಾರ ನಿಧಿ ತಿದ್ದುಪಡಿ ವಿಧೇಯಕವನ್ನು ವಿಧಾಪರಿಷತ್ ಅಂಗೀಕರಿಸಿತು. ವಿಧೇಯಕ ಮಂಡಿಸಿ ಮಾತನಾಡಿದ ಸಚಿವ ಮಾಧುಸ್ವಾಮಿ, ತುರ್ತು ಸ್ಥಿತಿಯಲ್ಲಿ ತಕ್ಷಣ ಖರ್ಚು ಮಾಡಲು ನಿಧಿ ಇರಿಸಲಾಗುತ್ತದೆ.
1985ರಲ್ಲಿ 80 ಕೋಟಿ ಮೀಸಲಿರಿಸುವ ಕಾಯ್ದೆ ತರಲಾಗಿತ್ತು. ಆದರೆ, ಅಂದು ಬಜೆಡ್ ಗಾತ್ರ 2,385 ಕೋಟಿ ಇತ್ತು. ಈಗ 2 ಲಕ್ಷ ಕೋಟಿ ಬಜೆಟ್ ಗಾತ್ರ ಇದೆ. ಇಂದು 80 ಕೋಟಿ ಇರಿಸಿಕೊಂಡು ಏನೂ ಮಾಡಲು ಸಾಧ್ಯವಿಲ್ಲ. ಹಾಗಾಗಿ, 500 ಕೋಟಿಗೆ ಹೆಚ್ಚಿಸಲು ತಿದ್ದುಪಡಿ ತರಲಾಗಿದೆ. ಇದಕ್ಕೆ ಅನುಮತಿ ನೀಡಬೇಕು ಎಂದು ಸದನಕ್ಕೆ ಮನವಿ ಮಾಡಿದರು.
1985ರಲ್ಲಿ ಇಷ್ಟು ಕಡಿಮೆ ಬಜೆಟ್ ಗಾತ್ರ ಇತ್ತಾ ಎಂದು ಪ್ರತಿಪಕ್ಷ ನಾಯಕ ಎಸ್ ಆರ್ ಪಾಟೀಲ್ ಅಚ್ಚರಿ ವ್ಯಕ್ತಪಡಿಸಿದರು. ಇದಕ್ಕೆ ಕಾನೂನು ಸಚಿವರು ಅಂದು ರಾಮಕೃಷ್ಣ ಹೆಗ್ಡೆ ಇಷ್ಟು ಹಣದಲ್ಲೇ ಕಷ್ಟಪಟ್ಟಿದ್ದರು ನೋಡಿ ಎಂದು ಹಾಸ್ಯ ಚಟಾಕಿ ಹಾರಿಸಿದರು. ನಂತರ ಧ್ವನಿಮತದ ಮೂಲಕ ವಿಧಾನ ಪರಿಷತ್ ಸಾದಿಲ್ವಾರು ನಿಧಿ ತಿದ್ದುಪಡಿ ವಿಧೇಯಕವನ್ನು ಅಂಗೀಕರಿಸಿತು.
ಸರಕು ಮತ್ತು ಸೇವೆಗಳ ತಿದ್ದುಪಡಿ ವಿಧೇಯಕ 2020 ಅಂಗೀಕಾರ : ವಿಧಾನಸಭೆಯಿಂದ ಅಂಗೀಕೃತ ರೂಪದಲ್ಲಿದ್ದ ಸರಕು ಮತ್ತು ಸೇವೆಗಳ ತಿದ್ದುಪಡಿ ವಿಧೇಯಕ 2020 ವಿಧಾನ ಪರಿಷತ್‌ನಲ್ಲಿ ಕಾನೂನು ಸಚಿವ ಮಾಧುಸ್ವಾಮಿ ಮಂಡಿಸಿದರು. ಜಿಎಸ್ಟಿ ಕೌನ್ಸಿಲ್‌ನಲ್ಲಿ ಮಾಡುವ ತಿದ್ದುಪಡಿಯನ್ನು ನಾವು ಅಳವಡಿಸಿಕೊಳ್ಳಬೇಕು. ಸಣ್ಣ ಪುಟ್ಟ ತಿದ್ದುಪಡಿ ಇವೆ. ಕೋವಿಡ್ ಕಾರಣಕ್ಕೆ ತೆರಿಗೆ ಪಾವತಿಗೆ ಸಮಯಾವಕಾಶ ಕಲ್ಪಿಸುವ ಅಂಶ ಇದೆ ಅಷ್ಟೇ.. ಹಾಗಾಗಿ, ಬಿಲ್ ಪಾಸ್ ಮಾಡಿಕೊಡಿ ಎಂದು ಸದನಕ್ಕೆ ಕೋರಿದರು. ಯಾವುದೇ ಚರ್ಚೆ ಇಲ್ಲದೆ ಎಲ್ಲಾ ಸದಸ್ಯರ ಸಮ್ಮತಿ ಮೇರೆಗೆ ತಿದ್ದುಪಡಿ ವಿಧೇಯಕಕ್ಕೆ ಅನುಮತಿ ನೀಡಲಾಯಿತು.