ಬೆಂಗಳೂರು: ಮಹಾಮಾರಿ ಕೊರೊನಾ ಹೊಡೆತಕ್ಕೆ ಇಡೀ ವಿಶ್ವವೇ ನಲುಗಿ ಹೋಗಿದೆ. ಕೋವಿಡ್ ಹೊಡೆತಕ್ಕೆ ಉದ್ಯೋಗ ಕಳೆದುಕೊಂಡವರೆಷ್ಟೋ ತಿಳಿಯದು. ಇದರ ನೇರ ಪರಿಣಾಮ ಬಿದ್ದಿದ್ದು ಮಾತ್ರ ಶಾಲಾ ಮಕ್ಕಳಿಗೆ. ಎಲ್ಲ ಕ್ಷೇತ್ರಗಳು ತನ್ನ ಕಾರ್ಯ ಚಟುವಟಿಕೆ ಆರಂಭಿಸಿದ ನಂತರ, ಇತ್ತೀಚೆಗೆ ಶಾಲಾ-ಕಾಲೇಜುಗಳು ಆರಂಭಗೊಂಡಿವೆ. ಅದರಲ್ಲೂ ಎಲ್ಲಾ ಶಾಲೆಗಳು, ತರಗತಿಗಳು ಆರಂಭಗೊಂಡಿಲ್ಲ. ಇದರ ನಡುವೆ ಶಾಲೆಗಳಿಗೆ ಶುಲ್ಕ ಭರಿಸುವುದು ಕೂಡ ಪೋಷಕರಿಗೆ ದೊಡ್ಡ ಹೊರಯಾಗಿದೆ. ಹಾಗಾಗಿ, ಮಕ್ಕಳನ್ನು ಸರ್ಕಾರಿ ಶಾಲೆಗೆ ಸೇರಿಸುತ್ತಿದ್ದಾರೆ. ಹಾಗಂತ ಇದೊಂದೆ ಕಾರಣವಲ್ಲ. ಕೊರೊನಾ ಸುಳಿಗೆ ಸಿಕ್ಕಿ ಹಲವು ಶಾಲೆಗಳು ಇನ್ನೂ ಆರಂಭಗೊಳ್ಳದಿರುವುದರಿಂದ ಮಕ್ಕಳು ಟಿಸಿ ಪಡೆದು ಬೇರೆ ಶಾಲೆಗಳಿಗೆ ಸೇರುತ್ತಿದ್ದಾರೆ.
ಅದೆಷ್ಟೋ ಪೋಷಕರು ಶಾಲಾ ಶುಲ್ಕವನ್ನು ಕಟ್ಟಿಲ್ಲ. ಇದರಿಂದಾಗಿ ಶಾಲೆಗಳನ್ನು ನಡೆಸಲು ಸಾಧ್ಯವಾಗದೇ ಆರ್ಥಿಕ ನಷ್ಟಕ್ಕೆ ಸಿಲುಕಿ ಬಾಗಿಲು ಮುಚ್ಚಿದ ಶಾಲೆಗಳು ಕೂಡ ಇವೆ. ಶೈಕ್ಷಣಿಕ ವರ್ಷದ ಚಟುವಟಿಕೆ ಶುರುವಾದರೂ ಸಹ ಶಾಲೆಗಳನ್ನು ನಡೆಸಲು ಆಗದ ಪರಿಸ್ಥಿತಿ ಉಂಟಾಗಿದೆ. ಈಗಾಗಲೇ ಹಲವಾರು ಮಕ್ಕಳು ಟಿಸಿ ಪಡೆದುಕೊಂಡು ಹೋಗಿದ್ದಾರೆ.
ಲೋಕೇಶ್ ತಾಳಿಕಟ್ಟೆ ಪ್ರತಿಕ್ರಿಯೆ?
ಕೊರೊನಾ ಕಾರಣಕ್ಕೆ ಬಾಗಿಲು ಮುಚ್ಚಿದ ಶಾಲೆಗಳೆಷ್ಟು? ಇದರ ಪರಿಣಾಮ ವಿದ್ಯಾರ್ಥಿಗಳ ಪಾಡೇನು?ಮುಂದಿನ ಶೈಕ್ಷಣಿಕ ಚಟುವಟಿಕೆಗಳ ಸವಾಲುಗಳೇನು? ಎಂಬುದರ ಕುರಿತು ಮಾನ್ಯತೆ ಪಡೆದ ಅನುದಾನ ರಹಿತ ಖಾಸಗಿ ಶಾಲೆಗಳ ಸಂಘದ ಅಧ್ಯಕ್ಷ ಲೋಕೇಶ್ ತಾಳಿಕಟ್ಟೆ ಮಾತಾನಾಡಿದ್ದಾರೆ. ಕಳೆದೊಂದು ವರ್ಷದಿಂದ ಆರ್ಥಿಕ ಸಂಕಷ್ಟಕ್ಕೆ ಸಿಲುಕಿರುವ ಶೇಕಡಾ 50ರಷ್ಟು ಶಾಲೆಗಳು, ಅದರಲ್ಲೂ ಗ್ರಾಮಾಂತರ ಭಾಗದ ಶಾಲೆಗಳು ಇಂದಿಗೂ ಆರಂಭ ಮಾಡಿಲ್ಲ. ಇದರಿಂದ ಆಡಳಿತಾತ್ಮಕವಾಗಿ ಬಹಳಷ್ಟು ಹದಗೆಟ್ಟಿದೆ ಎಂದು ತಿಳಿಸಿದರು.
ಸರ್ವೇಯಲ್ಲಿ ತಿಳಿದು ಬಂದ ವಿಚಾರವೇನು?
ರೂಪ್ಸಾ ಸಂಘದಿಂದ ಸರ್ವೇ ನಡೆಸಿದ ಸಂದರ್ಭದಲ್ಲಿ, 1,500ಕ್ಕೂ ಹೆಚ್ಚು ಶಾಲೆಗಳು, ಮುಂದಿನ ದಿನಗಳಲ್ಲಿ ಶಾಲೆಗಳನ್ನು ಒಪನ್ ಮಾಡೋದಿಲ್ಲ ಎಂದು ತಿಳಿಸಿವೆಯಂತೆ. ಕೊರೊನಾ ಕಾರಣಕ್ಕೆ ನಿಗದಿತ ಸಮಯಕ್ಕೆ ಶಾಲೆಗಳು ಆರಂಭವಾಗದ ಕಾರಣ, ಶಾಲಾ ವಾಹನಗಳು ನಿಂತಲ್ಲೇ ನಿಂತು ಹಾಳಾಗಿವೆ. ಶಿಕ್ಷಕರಿಗೆ ವೇತನ ನೀಡಲಾಗದೆ, ಶಾಲೆಯ ಮೂಲ ಸೌಕರ್ಯಕ್ಕೂ ಹಣವಿಲ್ಲದ ಪರಿಸ್ಥಿತಿ ಉಂಟಾಗಿದೆ. ಹೀಗಾಗಿ ಸರ್ಕಾರವೇ ಶಾಲೆಗಳನ್ನು ಆರಂಭಿಸಿ ಅಂತ ಸೂಚನೆ ನೀಡಿದರೂ ಶಾಲೆಗಳನ್ನು ಆರಂಭಿಸಲು ಆಗದ ಸ್ಥಿತಿಗೆ ಕೆಲ ಶಾಲೆಗಳು ತಲುಪಿವೆ.
ಟಿಸಿ ಪಡೆದ ನಂತರ?
ಆರ್ಥಿಕ ಸಂಕಷ್ಟದಿಂದ ಖಾಸಗಿ ಶಾಲೆಗಳು ಬಂದ್ ಆಗಿರುವ ಕಾರಣಕ್ಕೆ ಹಲವು ಮಕ್ಕಳು ಟಿಸಿಯನ್ನು ಪಡೆದು ಬೇರೆ-ಬೇರೆ ಶಾಲೆಗಳಿಗೆ ನೋಂದಣಿ ಮಾಡಿಕೊಳ್ಳುತ್ತಿದ್ದಾರೆ. ಸ್ಯಾಟ್ಸ್ ಸಮೀಕ್ಷೆ ಪ್ರಕಾರ, 1-10ನೇ ತರಗತಿಯೊಳಗೆ ಸುಮಾರು 1 ಲಕ್ಷಕ್ಕೂ ಹೆಚ್ಚು ಮಕ್ಕಳು ಖಾಸಗಿ ಶಾಲೆಯನ್ನು ತೊರೆದು ಸರ್ಕಾರಿ ಶಾಲೆಗೆ ದಾಖಲಾಗಿದ್ದಾರೆ. 10,12 ನೇ ತರಗತಿಗೆ ಸುಮಾರು ಒಂದು ಲಕ್ಷದ ಎರಡು ಸಾವಿರ ಮಕ್ಕಳು ದಾಖಲಾಗಿಲ್ಲ. ಈ ಮಕ್ಕಳ ಪೈಕಿ ಹಲವರು ಬಾಲಕಾರ್ಮಿಕರಾಗಿ ದುಡಿಯುತ್ತಿದ್ದರೆ, ಕೆಲವರು ಮದುವೆ ಮಾಡಿಕೊಂಡಿದ್ದಾರೆ.
ಇದನ್ನೂ ಓದಿ: ಬೆಣ್ಣೆನಗರಿಯಲ್ಲಿ ತಡವಾಗಿ ತೆರೆದ ಖಾಸಗಿ ಶಾಲೆ; ಸರ್ಕಾರಿ ಶಾಲೆಗಳತ್ತ ವಿದ್ಯಾರ್ಥಿಗಳ ಹೆಜ್ಜೆ
ಟಿಸಿ ಪಡೆಯಲು ಇರುವ ರೂಲ್ಸ್:
ಈಗಾಗಲೇ ಟಿಸಿಯನ್ನು ಎರಡು ಲಕ್ಷಕ್ಕೂ ಹೆಚ್ಚು ಮಕ್ಕಳು ಪಡೆದಿದ್ದು, ಶಿಕ್ಷಣದಿಂದ ವಂಚಿತರಾಗಿದ್ದಾರೆ ಎಂದು ಆರೋಪಿಸಿದ್ದಾರೆ. ಟಿಸಿ ಪಡೆಯಲು ರೂಲ್ಸ್ ಅಂಡ್ ಗೈಡ್ ಲೈನ್ ದೊಡ್ಡ ಮಟ್ಟದಲ್ಲಿ ಏನೂ ಇಲ್ಲ. ಬೇರೆ ಶಾಲೆಗೆ ಸೇರಿಸಿ ಅರ್ಜಿ ಸಲ್ಲಿಸಿದರು ಟಿಸಿ ನೀಡಲಾಗುತ್ತದೆ. ಎನ್ಸಿಪಿಸಿಆರ್ ಗೈಡ್ ಲೈನ್ಸ್ನಲ್ಲೇ ಇದ್ದು, ಟಿಸಿ ಪಡೆಯಲು ವಿದ್ಯಾರ್ಥಿಗೆ ಸಂಪೂರ್ಣ ಹಕ್ಕಿದೆ. ಅದನ್ನು ತಡೆಯಲು ಸಾಧ್ಯವಿಲ್ಲ. ಇನ್ನು ಹಲವೆಡೆ ಪೋಷಕರೇ ಈ ವರ್ಷ ಶಾಲಾ ಶುಲ್ಕ ಕಟ್ಟಲು ಸಾಧ್ಯವಿಲ್ಲ ಎಂದು ಹೇಳಿ ಅರ್ಜಿ ಸಲ್ಲಿಸಿ ಟಿಸಿಯನ್ನು ಪಡೆಯುತ್ತಿದ್ದಾರೆ ಎಂದು ಲೋಕೇಶ್ ತಾಳಿಕಟ್ಟಿ ತಿಳಿಸಿದರು.