ಬೆಂಗಳೂರು: ನಗರದ ಕ್ವೀನ್ಸ್ ರಸ್ತೆಯ ಕೆಪಿಸಿಸಿ ಕಚೇರಿಯಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಕಾಂಗ್ರೆಸ್ ಪಕ್ಷದ ಕೋವಿಡ್ ಕಾರ್ಯಪಡೆ ಸಭೆ ನಡೆಸಿದರು.
ಈ ಸಂದರ್ಭದಲ್ಲಿ ಕಾರ್ಯಾಧ್ಯಕ್ಷರಾದ ಸಲೀಂ ಅಹಮದ್, ಕಾರ್ಯಪಡೆ ಮುಖ್ಯಸ್ಥ ರಮೇಶ್ ಕುಮಾರ್, ಹಿರಿಯ ನಾಯಕ ಹೆಚ್.ಕೆ.ಪಾಟೀಲ್ ಹಾಗೂ ಸಮಿತಿಯ ಇತರ ಸದಸ್ಯರು ಹಾಜರಿದ್ದರು. ರಾಜ್ಯ ಹಾಗೂ ಬೆಂಗಳೂರು ನಗರದಲ್ಲಿ ಹೆಚ್ಚಾಗುತ್ತಿರುವ ಕೊರೊನಾ ಪ್ರಕರಣ ಕುರಿತು ಸುದೀರ್ಘವಾಗಿ ಚರ್ಚಿಸಲಾಯಿತು.
ಸರ್ಕಾರ ಯಾವುದೇ ರೀತಿ ನಮ್ಮ ಸಲಹೆ, ಸೂಚನೆಯನ್ನು ಪರಿಗಣಿಸುತ್ತಿಲ್ಲ. ತನ್ನ ಮನಸ್ಸಿಗೆ ತೋಚಿದ ನಿರ್ಧಾರ ಕೈಗೊಳ್ಳುತ್ತಿದೆ. ದೇಶದ ಇತರೆ ರಾಜ್ಯಗಳಲ್ಲಿ ಕೊರೊನಾ ನಿಯಂತ್ರಣಕ್ಕೆ ಬರುತ್ತಿರುವ ಸಂದರ್ಭದಲ್ಲಿ ನಮ್ಮ ರಾಜ್ಯ ಅತಿ ಹೆಚ್ಚು ಪ್ರಮಾಣದಲ್ಲಿ ರೋಗಿಗಳನ್ನು ಹೊಂದುತ್ತಿದೆ. ಗುಣಮುಖರಾಗುತ್ತಿರುವ ಪ್ರಮಾಣವೂ ಕಡಿಮೆ ಇದೆ. ಸಾವಿನ ಸಂಖ್ಯೆ ಕೂಡ ಹೆಚ್ಚಾಗುತ್ತಿದೆ. ಈ ಎಲ್ಲಾ ಬೆಳವಣಿಗೆಗಳ ಹಿನ್ನೆಲೆ ನಾವು ದನಿ ಎತ್ತಲೇಬೇಕಾಗಿದೆ. ಯಾವ ಕಾರಣಕ್ಕೂ ಸರ್ಕಾರದ ಸದ್ಯದ ನಡೆ ರಾಜ್ಯಕ್ಕೆ ಮಾರಕ. ಎಲ್ಲೆಡೆ ಸಮುದಾಯಕ್ಕೆ ರೋಗ ವ್ಯಾಪಿಸುತ್ತಿರುವ ಸಂದರ್ಭದಲ್ಲಿ ಆತಂಕ ಬೇಡ ಅಂತ ಸರ್ಕಾರ, ಸಚಿವರು, ಸಿಎಂ ಹೇಳುತ್ತಿದ್ದಾರೆ. ಆದರೆ ಅದಕ್ಕೆ ಅಗತ್ಯ ಕ್ರಮ ಕೈಗೊಳ್ಳುವ ಕಾರ್ಯ ಮಾಡುತ್ತಿಲ್ಲ ಎಂದು ಡಿಕೆಶಿ ಆರೋಪಿಸಿದರು.
ಕೊರೊನಾ ನಿಯಂತ್ರಣ ಹೆಸರಿನಲ್ಲಿ ಕೊಂಡುಕೊಳ್ಳುತ್ತಿರುವ ಸಲಕರಣೆಗಳು, ಸಾಧನಗಳಲ್ಲಿ ಕೂಡ ಭ್ರಷ್ಟಾಚಾರ ನಡೆಯುತ್ತಿದೆ. ಇದನ್ನು ಎತ್ತಿ ಹೇಳಿದ ಪ್ರತಿಪಕ್ಷದ ವಿರುದ್ಧವೇ ಗೂಬೆ ಕೂರಿಸುವ ಕೆಲಸ ಮಾಡಲಾಗುತ್ತಿದೆ. ಜನ ಎಲ್ಲವನ್ನೂ ಗಮನಿಸುತ್ತಿದ್ದು, ಸರಿಯಾದ ಸಮಯಕ್ಕೆ ಸರ್ಕಾರಕ್ಕೆ ತಕ್ಕ ಪಾಠ ಕಲಿಸುತ್ತಾರೆ. ನಾವು ಪಕ್ಷವನ್ನು ಇನ್ನಷ್ಟು ಬಲಗೊಳಿಸಿಕೊಳ್ಳುವ ಜತೆಗೆ ಜನರ ವಿಶ್ವಾಸ ಗೆಲ್ಲುವ ಕಾರ್ಯವನ್ನು ಈ ಸಂದಿಗ್ಧ ಪರಿಸ್ಥಿತಿಯಲ್ಲಿ ಮಾಡಬೇಕು ಎಂದು ಕರೆ ಕೊಟ್ಟರು.