ಬೆಂಗಳೂರು: ಕೃಷಿ ವಿಶ್ವವಿದ್ಯಾಲಯ (ಜಿಕೆವಿಕೆ) ಆವರಣ ಹಾಗೂ ವಿದ್ಯಾರ್ಥಿ ಹಾಸ್ಟೆಲ್ಗಳನ್ನು ಕೋವಿಡ್ ಆರೈಕೆ ಕೇಂದ್ರವಾಗಿ ಬಳಸಿಕೊಳ್ಳಲು ಬಿಬಿಎಂಪಿ ಮುಂದಾಗಿದೆ. ಆದ್ರೆ ಇದಕ್ಕೆ ವಿದ್ಯಾರ್ಥಿಗಳು ಹಾಗೂ ಪೋಷಕರು ಆತಂಕದಿಂದ ವಿರೋಧ ವ್ಯಕ್ತಪಡಿಸಿದ್ದಾರೆ.
ಜಿಕೆವಿಕೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಹೆಸರುವಾಸಿಯಾಗಿದೆ. ಇಲ್ಲಿ ಸ್ನಾತಕೋತ್ತರ ಹಾಗೂ ಪಿಹೆಚ್ಡಿ ಪದವಿಯ ವಿದ್ಯಾಭ್ಯಾಸ ಮಾಡುತ್ತಿರುವ ವಿದ್ಯಾರ್ಥಿಗಳು ವರ್ಷಗಟ್ಟಲೆ ಅಧ್ಯಯನ ಮಾಡಬೇಕಿದ್ದು, ಇಲ್ಲಿ ಕೋವಿಡ್ ರೋಗಿಗಳಿಗೆ ಚಿಕಿತ್ಸೆ ನೀಡುವುದರಿಂದ ವಿದ್ಯಾಭ್ಯಾಸಕ್ಕೆ ತೊಂದರೆಯಾಗಲಿದೆ. ಆದ್ರೆ ಬಿಬಿಎಂಪಿ ಆಯುಕ್ತರು ರಾತ್ರೋರಾತ್ರಿ ಹೊರಡಿಸಿರುವ ಆದೇಶದಿಂದ ವಿದ್ಯಾರ್ಥಿಗಳು ಆತಂಕಗೊಂಡಿದ್ದಾರೆ.
ನಗರದಲ್ಲಿ ಐಐಎಸಿ, ಬೆಂಗಳೂರು ವಿಶ್ವವಿದ್ಯಾಲಯ ಸೇರಿದಂತೆ ದೊಡ್ಡ ದೊಡ್ಡ ಆವರಣಗಳು ಇರಬೇಕಾದರೆ ಕೃಷಿ ವಿವಿಯೇ ಯಾಕೆ..? ಸರ್ಕಾರಿ ಕಟ್ಟಡಗಳು ಬೇರೆ ಇಲ್ಲವೇ ಎಂದು ಪ್ರಶ್ನಿಸಿ ಪತ್ರ ಬರೆದಿದ್ದಾರೆ.
ಈ ಕುರಿತು ವಿದ್ಯಾರ್ಥಿ ಪ್ರವೀಣ್ ಮಾತನಾಡಿ, ಜಿಕೆವಿಕೆ ಉಳಿಸಿ ಎಂಬ ಆಂದೋಲನವನ್ನು ಎಲ್ಲಾ ವಿದ್ಯಾರ್ಥಿಗಳು ಕೈಗೊಂಡಿದ್ದಾರೆ. ಈಗಲೂ ಕ್ಯಾಂಪಸ್ನಲ್ಲಿ ವಿದ್ಯಾರ್ಥಿಗಳು ಓದುತ್ತಿದ್ದಾರೆ. ಈ ಸಂದರ್ಭದಲ್ಲಿ ಆರು ನೂರು ಜನರನ್ನು ಕ್ವಾರಂಟೈನ್ ಮಾಡಿರುವುದಕ್ಕೆ ಹೊರಟಿರುವುದು ಸರಿಯಲ್ಲ ಎಂದರು.
ಧಾರವಾಡ ಜಿಲ್ಲೆಯನ್ನು ಕೃಷಿಕ ಹಾಗೂ ವಿದ್ಯಾರ್ಥಿಯ ತಂದೆ ಮಾತನಾಡಿ, ಜಿಕೆವಿಕೆ ವಿಶ್ವವಿದ್ಯಾಲಯವನ್ನು ಕ್ವಾರಂಟೈನ್ ಕೇಂದ್ರ ಮಾಡಿದ್ರೆ ಮಕ್ಕಳ ಭವಿಷ್ಯಕ್ಕೆ ಹಾಗೂ ಮಕ್ಕಳನ್ನು ನಂಬಿಕೊಂಡ ನಮ್ಮ ಭವಿಷ್ಯಕ್ಕೆ ತೊಂದರೆ ಉಂಟಾಗುತ್ತದೆ. ಮುಂದಿನ ದಿನದಲ್ಲಿ ಮಕ್ಕಳಿಗೆ ಕೊರೊನಾ ಹರಡಿದ್ರೆ ಏನು ಗತಿ. ದಯಮಾಡಿ, ಸರ್ಕಾರ ಹಾಗೂ ಬಿಬಿಎಂಪಿ ಈ ನಿರ್ಧಾರವನ್ನು ವಾಪಸ್ ಪಡೆಯಬೇಕು ಎಂದು ಮನವಿ ಮಾಡಿದ್ದಾರೆ.
ಇಂದಿನಿಂದಲೇ ಜಿಕೆವಿಕೆ ಬಳಕೆಗೆ ನಿರ್ಧಾರ: ಈಗಾಗಲೇ ರೋಗ ಲಕ್ಷಣ ಇಲ್ಲದ ಕೊರೊನಾ ಸೋಂಕಿತರನ್ನು ಆರೈಕೆ ಕೇಂದ್ರಗಳಿಗೆ ರವಾನಿಸಲಾಗಿದೆ. ಹಜ್ ಭವನದ 432 ಹಾಸಿಗೆಗಳಲ್ಲಿ 395 ಹಾಸಿಗೆಗಳು ಭರ್ತಿಯಾಗಿವೆ. ರವಿಶಂಕರ್ ಗುರೂಜಿ ಆಶ್ರಮದಲ್ಲೂ 109ಕ್ಕೂ ಹೆಚ್ಚು ರೋಗಿಗಳನ್ನು ದಾಖಲಿಸಲಾಗಿದೆ. ಹೀಗಾಗಿ ಜಿಕೆವಿಕೆ ವಿದ್ಯಾರ್ಥಿನಿಯರ ಹಾಸ್ಟೆಲ್ನ 661 ಬೆಡ್, ಜಿಕೆವಿಕೆ ಬಳಿಯ ತೋಟಗಾರಿಕಾ ಕಾಲೇಜಿನ ಹಾಸ್ಟೆಲ್ನಲ್ಲಿ ತಲಾ 500 ಹಾಸಿಗೆಗಳನ್ನು ಬಳಸಿಕೊಳ್ಳಲು ಬಿಬಿಎಂಪಿ ತೀರ್ಮಾನಿಸಿದ್ದು, ಇದಕ್ಕೆ ಪೋಷಕರು ಹಾಗೂ ವಿದ್ಯಾರ್ಥಿಗಳು ವಿರೋಧ ವ್ಯಕ್ತಪಡಿಸಿದ್ದಾರೆ.