ಬೆಂಗಳೂರು: ರಾಜ್ಯದಲ್ಲಿ ಐಸಿಎಂಆರ್ (ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ) ಮಾರ್ಗಸೂಚಿಯಂತೆ ಕೊರೊನಾ ಲಕ್ಷಣ ಹೊಂದಿರುವವರಿಗೆ ಮಾತ್ರ ತಪಾಸಣೆ ಮಾಡಲಾಗುವುದು. ಜನರು ಎಚ್ಚರಿಕೆಯಿಂದ ಇದ್ದಷ್ಟು ಕೋವಿಡ್ ವಿರುದ್ಧ ಹೋರಾಡಲು ಸಹಾಯವಾಗುತ್ತದೆ ಎಂದು ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ಹೇಳಿದರು.
ಸದಾಶಿವನಗರದ ತಮ್ಮ ನಿವಾಸದ ಬಳಿ ಸುದ್ದಿಗಾರರ ಜತೆ ಮಾತನಾಡಿದ ಅವರು, ಕೋವಿಡ್ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿದೆ. ಆದರೆ, ಆಸ್ಪತ್ರೆಗೆ ದಾಖಲಾಗುವವರ ಸಂಖ್ಯೆ ಕಡಿಮೆ ಆಗಿರುವುದು ಸಮಾಧಾನ ತಂದಿದೆ. ವೈಜ್ಞಾನಿಕವಾಗಿ ಪರಾಮರ್ಶೆ ಮಾಡಿ, ತಜ್ಞರ ಅಭಿಪ್ರಾಯ ಪಡೆದು ಸರ್ಕಾರ ವೀಕೆಂಡ್ ಕರ್ಫ್ಯೂ ರದ್ದು ಮಾಡಿದೆ. ಕೋವಿಡ್ 3ನೇ ಅಲೆ ಇನ್ನು 2 ರಿಂದ 3 ವಾರಗಳಲ್ಲಿ ತೀವ್ರತೆ ಕಳೆದುಕೊಳ್ಳಲಿದೆ ಎಂದು ತಜ್ಞರು ಅಭಿಪ್ರಾಯ ಪಟ್ಟಿದ್ದಾರೆ ಎಂದು ತಿಳಿಸಿದರು.
ನಿಮ್ಮ ಸೂಕ್ತ ಸಂಗಾತಿ ಹುಡುಕುತ್ತಿರುವಿರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ ನೋಂದಣಿ ಉಚಿತ
ಜನರ ಜೀವ ಹಾಗೂ ಜೀವನ ಎರಡೂ ಮುಖ್ಯ: ಜನರ ಜೀವ ಹಾಗೂ ಜೀವನ ಎರಡೂ ಮುಖ್ಯ. ನಮ್ಮ ಆರೋಗ್ಯ ನಮ್ಮ ಕೈಯಲ್ಲಿದೆ. ಈಗ ಜನರು ಜವಾಬ್ದಾರಿ ಹಾಗೂ ಕರ್ತವ್ಯಗಳನ್ನು ಅರಿತು ನಡೆಯಬೇಕು. ಕೋವಿಡ್ ಮಾರ್ಗಸೂಚಿಗಳನ್ನು ಪಾಲಿಸಿ, ಮಾಸ್ಕ್ ಹಾಗೂ ಸಾಮಾಜಿಕ ಅಂತರವನ್ನು ಕಾಪಾಡಿಕೊಳ್ಳಬೇಕು.
ಒಂದು ವೇಳೆ, ಮತ್ತೆ ಕೊರೊನಾ ಸೋಂಕಿತರು ಆಸ್ಪತ್ರೆಗಳಿಗೆ ದಾಖಲಾಗುವುದು ಗಣನೀಯವಾಗಿ ಹೆಚ್ಚಾದರೆ ಸರ್ಕಾರ ಬೇರೆ ದಾರಿ ಇಲ್ಲದೇ ಕಟ್ಟುನಿಟ್ಟಿನ ಕ್ರಮಗಳನ್ನು ಜಾರಿ ಮಾಡಲಿದೆ ಎಂದು ತಿಳಿಸಿದರು
ವೈಜ್ಞಾನಿಕ ಆಧಾರದಲ್ಲಿ ಸರ್ಕಾರ ನಿರ್ಧಾರ: ಮುಖ್ಯಮಂತ್ರಿಗಳ ಜತೆ ನಡೆದ 3 ಗಂಟೆಗಳ ಸುಧೀರ್ಘ ಸಭೆಯಲ್ಲಿ ರಚನಾತ್ಮಕ ಸಲಹೆಗಳನ್ನು ತೆಗೆದುಕೊಂಡು ವೈಜ್ಞಾನಿಕ ಆಧಾರದಲ್ಲಿ ಸರ್ಕಾರ ನಿರ್ಧಾರ ಮಾಡಿದೆ. ಜನರು ಅನಗತ್ಯವಾಗಿ ಗುಂಪು ಸೇರುವುದನ್ನು ಕಡಿಮೆ ಮಾಡಬೇಕು. ಒಳಾಂಗಣ ಹಾಗೂ ಹೊರಾಂಗಣ ಕಾರ್ಯಕ್ರಮಗಳನ್ನು ಮುಂದಕ್ಕೆ ಹಾಕುವುದು ಉತ್ತಮ ಎಂದು ಸಚಿವ ಸುಧಾಕರ್ ಮನವಿ ಮಾಡಿದರು.
ಇದನ್ನೂ ಓದಿ: ಶಾಲಾ ಮಕ್ಕಳಲ್ಲಿ ಹೆಚ್ಚುತ್ತಿರುವ ಕೊರೊನಾ.. 13 ವಿದ್ಯಾರ್ಥಿಗಳು, ಐವರು ಶಿಕ್ಷಕರಿಗೆ ಸೋಂಕು..