ಬೆಂಗಳೂರು: ಸರ್ಕಾರ ಮಾನ್ಯತೆ ಪಡೆದಿರುವ ಖಾಸಗಿ ಅನುದಾನ ರಹಿತ ಶಾಲೆಗಳಲ್ಲಿ ಗ್ರಾಮೀಣ ಭಾಗದಲ್ಲಿ ಬಹುತೇಕ ಮಧ್ಯಮ ವರ್ಗದ ವಿದ್ಯಾರ್ಥಿಗಳ ದಾಖಲಾತಿ ಹೆಚ್ಚು. ಹೀಗಾಗಿ, ನಗರ ಪ್ರಾದೇಶಿತ ಶಾಲೆಗಳಿಗಿಂತ ಗ್ರಾಮೀಣ ವಿದ್ಯಾರ್ಥಿಗಳ ಆನ್ಲೈನ್ ಶಿಕ್ಷಣಕ್ಕೆ ಕತ್ತರಿ ಬಿದ್ದಿದೆ. ರಾಜ್ಯದಲ್ಲಿ 21 ಸಾವಿರ ಖಾಸಗಿ ಶಾಲೆಗಳಿದ್ದು, ಲಕ್ಷಾಂತರ ವಿದ್ಯಾರ್ಥಿಗಳು ಓದುತ್ತಿದ್ದಾರೆ. ಅದರಲ್ಲಿ ಶೇ.50 ರಷ್ಟು ಆನ್ಲೈನ್ ಶಿಕ್ಷಣ ಪಡೆಯಲು ಸಾಧ್ಯವಾಗದೇ ಇರುವುದು ಕಂಡು ಬಂದಿದೆ.
ಆನ್ಲೈನ್ ಮುಖಾಂತರ ಮಕ್ಕಳಿಗೆ ಪಾಠ ಅರ್ಥವಾಗುತ್ತಿಲ್ಲ. ಏಕಾಗ್ರತೆ ಜೊತೆಗೆ ದುಬಾರಿ ಮೊಬೈಲ್, ಲ್ಯಾಪ್ಟಾಪ್, ಕಂಪ್ಯೂಟರ್, ಇಂಟರ್ನೆಟ್ ಸೇವೆ ಇಲ್ಲದಿರುವುದು ಆನ್ಲೈನ್ ಶಿಕ್ಷಣದಿಂದ ವಂಚಿತರಾಗಲು ಕಾರಣವಾಗಿದೆ. ಇದರಲ್ಲಿ ಆರ್ಥಿಕವಾಗಿ ಹಿಂದುಳಿದ ಕುಟುಂಬಗಳೇ ಹೆಚ್ಚು.
ಮೈಸೂರು ಜಿಲ್ಲೆಯಲ್ಲಿ ಎಲ್.ಕೆಜಿ. ಯಿಂದ ಪಿಯುಸಿವರೆಗೂ 850 ರಿಂದ 900 ಖಾಸಗಿ ಶಿಕ್ಷಣ ಸಂಸ್ಥೆಗಳಿವೆ. ಇನ್ನು ಈ ವರ್ಷ ಶಾಲೆ ಪ್ರಾರಂಭ ಯಾವಾಗ ಎಂಬುದೇ ಗೊತ್ತಾಗುತ್ತಿಲ್ಲ. ಆದರೆ, ಕೋವಿಡ್ ಸಮಯದಲ್ಲೂ ಆನ್ಲೈನ್ ಶಿಕ್ಷಣ ನೆಪ ಹೇಳಿ ಶುಲ್ಕ ವಸೂಲಿಗೆ ಇಳಿಯುವ ಮೂಲಕ ಖಾಸಗಿ ಶಿಕ್ಷಣ ಸಂಸ್ಥೆಗಳು ದಂಧೆಗಿಳಿದಿವೆ. ಕೋವಿಡ್ನಿಂದ ವಿದ್ಯಾರ್ಥಿಗಳ ಅಧ್ಯಯನದ ಮೇಲೆ ಒಂದು ವರ್ಷ ತೊಡಕಾಗಿದ್ದು, ಆನ್ಲೈನ್ ಶಿಕ್ಷಣ ಅಷ್ಟೊಂದು ಪ್ರಭಾವ ಬೀರಿಲ್ಲ.
ಶಿವಮೊಗ್ಗದಲ್ಲಿ ಖಾಸಗಿ ಶಾಲೆಗಳು ಆನ್ಲೈನ್ ತರಗತಿ ನಡೆಸಲು ಅವಕಾಶ ನೀಡಿದಾಗ ಖುಷಿಯಿಂದಲೇ ತರಗತಿ ಪ್ರಾರಂಭಿಸಿದವು. ಆದರೆ ಶುಲ್ಕ ಕೇಳಿದ್ರೆ, ಶಾಲೆ ಪ್ರಾರಂಭವಾಗುವುದೇ ಗೊತ್ತಿಲ್ಲ, ಹೇಗೆ ಶುಲ್ಕ ಭರಿಸಬೇಕು ಎಂದು ಪೋಷಕರು ಕೇಳುತ್ತಿದ್ದಾರೆ. ಇನ್ನೂ ಕೆಲವರು ಶೇ 25 ರಷ್ಟು ಶುಲ್ಕ ಕಟ್ಟಿದ್ದಾರೆ. ಆದರೆ ಜಿಲ್ಲೆಯಲ್ಲಿ ಖಾಸಗಿ ಶಾಲೆಗಳು ಒತ್ತಾಯಿಸಿ ಶುಲ್ಕ ವಸೂಲಿ ಮಾಡುತ್ತಿರುವ ಕುರಿತು ದೂರು ಬಂದಿಲ್ಲ ಎಂದು ಜಿಲ್ಲಾ ಸಾರ್ವಜನಿಕ ಶಿಕ್ಷಣ ಇಲಾಖೆ ತಿಳಿಸಿದೆ.
ಇತ್ತ ರಾಜ್ಯದ ಹಲವು ಜಿಲ್ಲೆಗಳಲ್ಲಿ ಶಾಲೆಗಳು ಆನ್ಲೈನ್ ಶಿಕ್ಷಣಕ್ಕೆ ಶುಲ್ಕ ಕೇಳುತ್ತಿರುವ ಕಾರಣಕ್ಕೆ ಮಕ್ಕಳು ಪಾಠದಿಂದ ದೂರ ಉಳಿಯುತ್ತಿದ್ದಾರೆ. ಹೀಗಾಗಿ, ಆನ್ಲೈನ್ ಶುಲ್ಕ ಪಡೆದರೆ ಅಂತಹ ಶಾಲೆಗಳ ವಿರುದ್ಧ ಮುಲಾಜಿಲ್ಲದೇ ಇಲಾಖೆ ಕ್ರಮ ಕೈಗೊಳ್ಳಲಿ..