ಬೆಂಗಳೂರು: ಕೋವಿಡ್ 19 ವಿರುದ್ಧ ಹೋರಾಡಲು ಸದ್ಯ ರಾಜ್ಯ ಸರ್ಕಾರ, ಆರೋಗ್ಯ ಇಲಾಖೆ ವೈದ್ಯರು ಹರಸಾಹಸ ಪಡ್ತಿದ್ರೆ, ಇತ್ತ ತಮ್ಮ ಕೈಯಲ್ಲಿ ಆದಷ್ಟು ಸಹಾಯ ಮಾಡಲು ಮುಂದಾಗಿರುವ ಕರ್ನಾಟಕ ಕಾರಾಗೃಹ ಮತ್ತು ಸುಧಾರಣಾ ಸೇವೆ ಇಲಾಖೆಯು ಫೇಸ್ ಮಾಸ್ಕ್ಗಳನ್ನ ತಯಾರಿಸುತ್ತಿದೆ.

ಕೊರೊನಾ ವೈರಸ್ನಿಂದ ಉಂಟಾಗುವ ಆರೋಗ್ಯ ಬಿಕ್ಕಟ್ಟನ್ನು ಎದುರಿಸಲು ರಾಜ್ಯಾದ್ಯಂತ 8 ಕಾರಾಗೃಹಗಳಲ್ಲಿ 5000 ಫೇಸ್ ಮಾಸ್ಕ್ಗಳನ್ನ ತಯಾರಿಸಿ ರಾಜ್ಯ ಪೊಲೀಸ್ ಪ್ರಧಾನ ಕಚೇರಿ, ಪೊಲೀಸ್ ಆಯುಕ್ತರ ಕಚೇರಿ, ನಗರ ಸಶಸ್ತ್ರ ಮೀಸಲು, ಬಿಡಬ್ಲೂಎಸ್ಎಸ್ಬಿ ಇಲಾಖೆಗಳಿಗೆ ರವಾನಿಸಲಾಗಿದೆ.

ಹಾಗೇ ಕಾರಾಗೃಹದಲ್ಲಿ ಕೂಡ ಕೊರೊನಾ ವೈರಸ್ ಹರಡುವುದನ್ನ ತಡೆಗಟ್ಟಲು ಮುಂಜಾಗೃತ ಕ್ರಮ ಕೈಗೊಂಡಿದ್ದು, ಹೊಸದಾಗಿ ಪ್ರವೇಶ ಪಡೆದ ಬಂಧಿಗಳನ್ನ ಸಾಮಾನ್ಯ ಬ್ಯಾರಕ್ಗಳಿಗೆ ಸ್ಥಳಾಂತರಿಸುವ ಮೊದಲು ಸಂಪೂರ್ಣವಾಗಿ ಪರೀಕ್ಷಿಸಿ ನಂತ್ರ ಪ್ರತ್ಯೇಕ ಬ್ಯಾರಕ್ಗಳಲ್ಲಿ ಇರಿಸಲಾಗುತ್ತಿದೆ.

ಸದ್ಯ ಸೋಂಕನ್ನು ತಡೆಯಲು ಎಲ್ಲಾ ಕಾರಾಗೃಹದ ಒಳಗೆ ಐಸೋಲೇಷನ್ ವಾರ್ಡ್ ತೆರೆದು ಮುನ್ನೆಚ್ಚರಿಕೆ ಕ್ರಮವಾಗಿ ಯಾವುದೇ ಹೊರಗಿನ ವ್ಯಕ್ತಿಗಳಿಗೆ ಮುಖಾಮುಖಿಯಾಗಿ ಸಂಪರ್ಕ ಮತ್ತು ಸಂದರ್ಶನವನ್ನು ತಾತ್ಕಲಿಕವಾಗಿ ನಿಲ್ಲಿಸಲಾಗಿದೆ. ಅನಿವಾರ್ಯ ಕೈದಿಗಳನ್ನ ನ್ಯಾಯಾಲಯಗಳಿಗೆ ವಿಡಿಯೋ ಕಾನ್ಫರೆನ್ಸ್ ಮೂಲಕ ಹಾಜರುಪಡಿಸಿ, ಕಾರಾಗೃಹದ ಆವರಣದ ಸುತ್ತ ಸ್ವಚ್ಛತೆ, ಕೊರೊನಾ ವೈರಸ್ ಸೋಂಕನ್ನು ತಡೆಗಟ್ಟಲು ಬಂಧಿಗಳಿಗೆ ಸಿಬ್ಬಂದಿ ಅರಿವಿನ ಕಾರ್ಯ ಹಾಗೂ ಮುನ್ನೆಚ್ಚರಿಕೆಯನ್ನು ಸಹ ನೀಡುತ್ತಿದ್ದಾರೆ.