ಬೆಂಗಳೂರು: ಕೊರೊನಾ ಸಾಂಕ್ರಾಮಿಕ ಪಿಡುಗು ಸದ್ಯಕ್ಕೆ ನಿಯಂತ್ರಣಕ್ಕೆ ಬರುವ ಲಕ್ಷಣಗಳು ಕಾಣಿಸ್ತಿಲ್ಲ. ಪ್ರತಿದಿನ ಮೂರಂಕಿ ಗಡಿ ದಾಟುತ್ತಿರುವ ವೈರಸ್ ಎಲ್ಲರಲ್ಲೂ ಆತಂಕ ಸೃಷ್ಟಿಸುತ್ತಿದೆ. ಸೋಂಕಿತರ ಸಂಖ್ಯೆಯಲ್ಲಿ ಏರಿಕೆಯಾಗುತ್ತಿರುವ ಪರಿಣಾಮ ಬಿಬಿಎಂಪಿ ನಗರದಲ್ಲಿ ಮೂರು ಕೋವಿಡ್ ಕೇರ್ ಸೆಂಟರ್‌ಗಳಿಗೆ ಚಾಲನೆ ನೀಡಿದೆ.
15 ದಿನದ ಹಿಂದೆ 300ರಷ್ಟಿದ್ದ ಕೊರೊನಾ ಪ್ರಮಾಣ, ವಾರದ ಹಿಂದೆ 700ಕ್ಕೆ ಏರಿತ್ತು. ಈಗ 900ರ ಗಡಿ ದಾಟಿದೆ. ಹೀಗೆ ಸೋಂಕು ನಿರಂತರವಾಗಿ ಏರುಗತಿಯಲ್ಲೇ ಸಾಗುತ್ತಿದೆ. ಅದರಲ್ಲೂ ನಗರದಲ್ಲಿಯೇ ಅತೀಹೆಚ್ಚು ಕೊರೊನಾ ಪ್ರಕರಣಗಳು ಕಂಡುಬರುತ್ತಿವೆ. ಹೀಗಾಗಿ, ಸೋಂಕು ನಿಗ್ರಹಕ್ಕೆ ಬಿಬಿಎಂಪಿ ಹಾಗೂ ಆರೋಗ್ಯ ಇಲಾಖೆ ಕಠಿಣ ನಿಯಮಗಳ ಮೊರೆ ಹೋಗಿದೆ.
ಕೋವಿಡ್ ಕೇರ್ ಸೆಂಟರ್ ರಿ ಓಪನ್:
ಈ ಬಗ್ಗೆ ಜನರಲ್ಲಿ ಮನವಿ ಮಾಡಿಕೊಂಡಿರೋ ಸರ್ಕಾರ, ಮಾಸ್ಕ್ ಹಾಗೂ ಸಾಮಾಜಿಕ ಅಂತರದ ಬಗ್ಗೆ ಗಮನ ಹರಿಸುವಂತೆ ಸೂಚಿಸಿದೆ. ಕಳೆದ ವರ್ಷ ನಗರದಲ್ಲಿ ನಾಲ್ಕು ಕಡೆ ಬಹುದೊಡ್ಡ ಕೋವಿಡ್ ಕೇರ್ ಸೆಂಟರ್‌ಗಳನ್ನು ಓಪನ್ ಮಾಡಲಾಗಿತ್ತು. ಯಾವಾಗ ಸೋಂಕಿತರ ಪ್ರಕರಣ ಕಡಿಮೆಯಾಯಿತೋ, ಆಗ ಕೋವಿಡ್ ಕೇರ್ಸೆಂಟರ್ಗಳನ್ನು ಮುಚ್ಚಿತ್ತು. ಆದ್ರೀಗ 2ನೇ ಅಲೆಯಲ್ಲಿ ಪ್ರಕರಣಗಳ ಸಂಖ್ಯೆ ದಿನೇ ದಿನೇ ಏರಿಕೆ ಆಗುತ್ತಿರುವುದರಿಂದ ನಗರದ ಕೋವಿಡ್ ಕೇರ್ ಸೆಂಟರ್‌ಗಳನ್ನು ಪುನಃ ತೆರೆದಿದೆ.
ಲಕ್ಷಣ ರಹಿತ ಮಂದಿಗೆ ಚಿಕಿತ್ಸೆ:
ಕೊರೊನಾ 2ನೇ ಅಲೆ ತಡೆಗೆ 3 ಕಡೆ ಕೋವಿಡ್ ಕೇರ್ ಸೆಂಟರ್ ಬಾಗಿಲು ತೆರೆಯಲು ಸಿದ್ಧವಾಗಿದೆ. ನಗರದ ಹಜ್ ಭವನ, ಹೆಚ್‌ಎಎಲ್ ಹಾಗೂ ಕೋರಮಂಗಲ ಕೋವಿಡ್ ಕೇರ್ಸೆಂಟರ್ಗಳನ್ನು ಪುನಾರಂಭ ಮಾಡಲಾಗಿದೆ. ಕೋರಮಂಗಲದ ಕೋವಿಡ್ ಕೇರ್ಸೆಂಟರ್ 263 ಬೆಡ್‌ಗಳನ್ನ ಒಳಗೊಂಡಿದೆ. ಈ ಕೇಂದ್ರಕ್ಕೆ ವೈದ್ಯಕೀಯ ಸಿಬ್ಬಂದಿ, ಸ್ವಚ್ಛತಾ ಸಿಬ್ಬಂದಿ ನಿಯೋಜನೆ ಮಾಡಲಾಗಿದೆ. ಹಜ್ ಭವನ ಮತ್ತು ಎಚ್‌ಎಎಲ್‌ನಲ್ಲಿನ ಕೋವಿಡ್ ಕೇರ್ ಕೇಂದ್ರಗಳು, ಹಾಸಿಗೆಗಳು ಮತ್ತು ಅಗತ್ಯವಿರುವ ವೈದ್ಯರು, ಸಿಬ್ಬಂದಿಯೊಂದಿಗೆ ಸಿದ್ಧವಾಗಿವೆ. 2ನೇ ಅಲೆಯಲ್ಲಿ ಪ್ರಕರಣಗಳ ಸಂಖ್ಯೆ ಏರಿಕೆ ಆಗುತ್ತಿರುವುದರಿಂದ ನಗರದ ಕೋವಿಡ್ ಕೇರ್ ಸೆಂಟರ್ಗಳನ್ನ ರಿ ಓಪನ್ ಮಾಡಲಾಗುತ್ತಿದ್ದು, ಲಕ್ಷಣ ರಹಿತ (ಅಸಿಂಪ್ಟಾಮ್ಯಾಟಿಕ್) ಮಂದಿಗೆ ಇಲ್ಲಿ ಚಿಕಿತ್ಸೆ ನೀಡಲಾಗುತ್ತದೆ.
2.5 ಕೋಟಿ ವೆಚ್ಚದಲ್ಲಿ ನಿರ್ಮಾಣ:
ಇಲ್ಲಿನ ಕೋವಿಡ್ ಕೇರ್ ಸೆಂಟರ್ಗಳಲ್ಲಿ ಕಾಟ್, ಬೆಡ್, ದಿಂಬುಗಳನ್ನು ಬಿಬಿಎಂಪಿ ಸಿಬ್ಬಂದಿ ವ್ಯವಸ್ಥೆ ಮಾಡಿದ್ದು, ಕೋರಮಂಗಲದ ಸಿಸಿ ಸೆಂಟರ್ ಒಟ್ಟು 263 ಬೆಡ್ ಹಾಗೂ 25 ಕಂಪಾರ್ಟ್‌ಮೆಂಟ್‌ಗಳನ್ನು ಹೊಂದಿದೆ. ಪ್ರತಿ ಕಂಪಾರ್ಟ್‌ಮೆಂಟ್‌ನಲ್ಲಿ 10 ಹಾಸಿಗೆಗಳನ್ನ ಇರಿಸಲಾಗಿದ್ದು, ಇಲ್ಲಿ ಎಲ್ಲಾ ರೀತಿಯ ಸ್ವಚ್ಛತಾ ಸಿದ್ಧತೆಗಳನ್ನೂ ಮಾಡಲಾಗಿದೆ. ಕೋವಿಡ್ ಸೆಂಟರ್ ತೆರೆದ ಕೂಡಲೇ ಇಲ್ಲಿನ ವೈದ್ಯರು ಹಾಗೂ ನರ್ಸ್‌ಗಳು 3 ಶಿಫ್ಟ್‌ನಲ್ಲಿ ಕಾರ್ಯ ನಿರ್ವಹಿಸುತ್ತಾರೆ. ಒಂದು ಶಿಫ್ಟ್‌ನಲ್ಲಿ 16 ಮಂದಿ ವೈದ್ಯರು ಹಾಗೂ 15 ನರ್ಸ್‌ಗಳನ್ನ ನಿಯೋಜಿಸಲಾಗುತ್ತೆ. ಒಂದು ಕೋವಿಡ್ ಸೆಂಟರ್‌ಗೆ ಸರಿ ಸುಮಾರು 2.5 ಕೋಟಿ ವೆಚ್ಚವನ್ನು ಮಾಡಲಾಗಿದೆ.
ಕೋವಿಡ್ ಕೇರ್ ಸೆಂಟರ್‌ಗೆ ವ್ಯಾಪಕ ವಿರೋಧ:
ಕಳೆದ ಬಾರಿ ಕೋವಿಡ್ ಕೇರ್ ಸೆಂಟರ್ ನಿರ್ಮಾಣಕ್ಕೆ ಸ್ಥಳೀಯರಿಂದ ಭಾರೀ ವಿರೋಧ ವ್ಯಕ್ತವಾಗಿತ್ತು. ನಮ್ಮ ಭಾಗದಲ್ಲಿ ಕೋವಿಡ್ ಕೇರ್ ಸೆಂಟರ್ ನಿರ್ಮಾಣ ಮಾಡಿದ್ರೆ, ಸುತ್ತಮುತ್ತಲಿನ ಜನತೆಗೆ ಕೊರೊನಾ ಬರುತ್ತೆ ಎಂದು ಹೆದರಿದ್ದ ಸಾರ್ವಜನಿಕರಿಗೆ ಇದೀಗ ಮತ್ತೆ ಅದೇ ಭಯ ಕಾಡತೊಡಗಿದೆ. ಪರಿಣಾಮ, ಇಲ್ಲಿಯೇ ಏಕೆ ಕೋವಿಡ್ ಕೇರ್ ಸೆಂಟರ್ನ್ನು ನಿರ್ಮಾಣ ಮಾಡ್ತಿದ್ದಾರೆ ಎಂದು ಕೆಲವು ಸ್ಥಳೀಯರು ವಿರೋಧ ವ್ಯಕ್ತಪಡಿಸುತ್ತಿದ್ದಾರೆ.
ದಂಡಂ ದಶಗುಣಂ ಅಸ್ತ್ರ ಪ್ರಯೋಗ:
ಇತ್ತ ಸೋಂಕಿನ ಬಗ್ಗೆ ಜನ ನಿರ್ಲಕ್ಷ್ಯ ಮಾಡಲಾರಂಭಿಸಿದ್ದು, ಒಂದು ವೇಳೆ ಜನ ಮೈಮರೆತು ಓಡಾಟ ನಡೆಸಿದ್ರೆ ಮತ್ತೆ ಎಲ್ಲಾ ಚಟುವಟಿಕೆಗಳಿಗೂ ಕಡಿವಾಣ ಹಾಕುವತ್ತ ಸರ್ಕಾರ ನಿರ್ಧಾರ ಮಾಡಿದೆ. ಜನರ ಈ ವರ್ತನೆ, ಬಿಬಿಎಂಪಿ ಮತ್ತು ಸರ್ಕಾರಕ್ಕೆ ದೊಡ್ಡ ತಲೆನೋವಾಗಿದ್ದು, ಅನಿವಾರ್ಯವಾದ್ರೆ ಮತ್ತೆ ದಂಡಂ ದಶಗುಣಂ ಅಸ್ತ್ರ ಪ್ರಯೋಗಕ್ಕೆ ತೀರ್ಮಾನಿಸಿದೆ. ಸೋಂಕು ಹರಡಬಾರದು ಎಂಬ ಕಾರಣಕ್ಕೆ ಮೂರು ಕೋವಿಡ್ ಕೇರ್ ಸೆಂಟರ್‌ಗಳಿಗೆ ಚಾಲನೆ ನೀಡಲಾಗಿದೆ.
ಇದನ್ನೂ ಓದಿ: ರಾಜ್ಯದಲ್ಲಿಂದು ಮತ್ತೆ 2 ಸಾವಿರ ದಾಟಿದ ಸೋಂಕಿತರ ಸಂಖ್ಯೆ: ಬೆಂಗಳೂರು, ಉಡುಪಿ, ಕಲಬುರಗಿಯಲ್ಲಿ ಹೆಚ್ಚು