ಬೆಂಗಳೂರು: ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ವ್ಯಾಪ್ತಿಯಲ್ಲಿರುವ ನಿರ್ಗತಿಕರು ಹಾಗೂ ವಲಸೆ ಕಾರ್ಮಿಕರನ್ನು ಪತ್ತೆ ಹಚ್ಚುವಲ್ಲಿ ಪಾಲಿಕೆ ಜವಾಬ್ದಾರಿಯುತವಾಗಿ ಕಾರ್ಯನಿರ್ವಹಿಸುತ್ತಿಲ್ಲ. ಕಾಟಾಚಾರಕ್ಕೆ ವರದಿ ಒಪ್ಪಿಸಿದಂತಿದೆ ಎಂದು ಹೈಕೋರ್ಟ್ ತೀವ್ರ ಅಸಮಾಧಾನ ವ್ಯಕ್ತಪಡಿಸಿದೆ.
ಕೊರೊನಾ ನಿಯಂತ್ರಣ ಮತ್ತು ಲಾಕ್‌ಡೌನ್ ಸಮಸ್ಯೆಗಳಿಗೆ ಸಂಬಂಧಿಸಿದಂತೆ ಸಲ್ಲಿಸಿರುವ ವಿವಿಧ ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳ ವಿಚಾರಣೆ ವೇಳೆ ಮುಖ್ಯ ನ್ಯಾಯಮೂರ್ತಿ ಎ.ಎಸ್.ಓಕ ನೇತೃತ್ವದ ವಿಭಾಗೀಯ ಪೀಠವು ಬಿಬಿಎಂಪಿ ಕಾರ್ಯವೈಖರಿಗೆ ಚಾಟಿ ಬೀಸಿದೆ.
ನಗರದಲ್ಲಿ ಸಂಕಷ್ಟಕ್ಕೆ ಸಿಲುಕಿರುವ ನಿರ್ಗತಿಕ ಮತ್ತು ನಿರಾಶ್ರಿತ ಜನರ ಸ್ಥಿತಿಗತಿ ಮತ್ತು ಅವರಿಗೆ ಒದಗಿಸುತ್ತಿರುವ ಸೌಲಭ್ಯಗಳಿಗೆ ಸಂಬಂಧಿಸಿದಂತೆ ವರದಿ ನೀಡುವಂತೆ ಪೀಠ ಹಿಂದಿನ ವಿಚಾರಣೆ ವೇಳೆ ತಾಕೀತು ಮಾಡಿತ್ತು. ಜತೆಗೆ ದುರ್ಬಲ ವರ್ಗದ ಜನರಿಗೆ ಆಹಾರ ಪೂರೈಕೆ ಮಾಡುತ್ತಿರುವ ಮತ್ತು ಆರೋಗ್ಯ ತಪಾಸಣೆ ನಡೆಸುತ್ತಿರುವ ಕುರಿತು ವರದಿ ಸಲ್ಲಿಸುವಂತೆ ಪಾಲಿಕೆಗೆ ನಿರ್ದೇಶಿಸಿತ್ತು.
ಅದರಂತೆ ಮಂಗಳವಾರ ನಡೆದ ವಿಚಾರಣೆ ವೇಳೆ ಬಿಬಿಎಂಪಿ ಪರ ವಕೀಲರು ಪೀಠಕ್ಕೆ ವರದಿ ಸಲ್ಲಿಸಿದರು. ಅಸಮರ್ಪಕ ವರದಿ ಗಮನಿದ ಪೀಠ ತೀವ್ರ ಬೇಸರ ವ್ಯಕ್ತಪಡಿಸಿತು. ಹಿಂದಿನ ವಿಚಾರಣೆಯಲ್ಲಿ ನ್ಯಾಯಾಲಯವು ಪಾಲಿಕೆಯ ಎಂಟು ವಲಯಗಳಿಂದ ಜಂಟಿ ಆಯುಕ್ತರ ನೇತೃತ್ವದಲ್ಲಿ ಪರಿಶೀಲನೆ ನಡೆಸಿ, ವರದಿ ಸಲ್ಲಿಸುವಂತೆ ಸೂಚಿಸಿತ್ತು. ಆದರೆ, ಪಾಲಿಕೆ ಅಧಿಕಾರಿಗಳು ಕೆಲ ಮಾರ್ಷಲ್‌ಗಳಿಂದ ಸಮೀಕ್ಷೆ ನಡೆಸಿ ವರದಿ ಸಿದ್ಧಪಡಿಸಿದ್ದಾರೆ.
ಬಿಬಿಎಂಪಿ ಈ ವಿಚಾರವನ್ನು ಗಂಭೀರವಾಗಿ ವರ್ತಿಸುತ್ತಿಲ್ಲ. ಕಾಟಾಚಾರಕ್ಕೆ ಕೆಲಸ ಮಾಡುತ್ತಿರುವಂತಿದೆ ಎಂದು ಅಸಮಾಧಾನ ಹೊರ ಹಾಕಿತು. ಅಲ್ಲದೇ, ನಿರಾಶ್ರಿತರನ್ನು ಪತ್ತೆ ಹಚ್ಚಲು, ಅವರಿಗೆ ಆಶ್ರಯ ಹಾಗೂ ಆಹಾರ ಒದಗಿಸಲು ಪಾಲಿಕೆ ಸೂಕ್ತ ಕ್ರಮಗಳನ್ನು ಕೈಗೊಳ್ಳುತ್ತಿಲ್ಲ. ಈ ಸಂಬಂಧ ಏಪ್ರಿಲ್ 11ರಂದು ನಗರಾಭಿವೃದ್ಧಿ ಇಲಾಖೆ ಹೊರಡಿಸಿರುವ ಮಾರ್ಗಸೂಚಿಗಳನ್ನು ಪಾಲನೆ ಮಾಡುತ್ತಿಲ್ಲ. ಪಾಲಿಕೆ ಇಂತಹ ನಿರ್ಲಕ್ಷ್ಯ ಬಿಟ್ಟು ನಗರಾಭಿವೃದ್ಧಿ ಇಲಾಖೆಯ ಮಾರ್ಗಸೂಚಿಗಳನ್ನು ಜಾರಿಗೊಳಿಸಬೇಕು. ಈ ಅನುಪಾಲನಾ ವರದಿಯನ್ನು ಮುಂದಿನ ವಿಚಾರಣೆ ವೇಳೆ ಕೋರ್ಟ್‌ಗೆ ಸಲ್ಲಿಸಬೇಕು ಎಂದು ತಾಕೀತು ಮಾಡಿತು.