ಬೆಂಗಳೂರು: ರಾಜ್ಯದಲ್ಲಿ ಕೊರೊನಾ ಸೋಂಕು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಬೆಂಗಳೂರು ನಗರ, ಗ್ರಾಮಾಂತರ ಜಿಲ್ಲೆ ಸೇರಿದಂತೆ ಒಟ್ಟು 9 ಜಿಲ್ಲೆಗಳ ನ್ಯಾಯಾಲಯಗಳಲ್ಲಿ ಮತ್ತೆ ಸೀಮಿತ ಕಲಾಪ ನಡೆಸಲು ಹೈಕೋರ್ಟ್ ಆದೇಶಿಸಿದೆ.
ಈ ಕುರಿತು ಮುಖ್ಯ ನ್ಯಾಯಮೂರ್ತಿಗಳ ಆದೇಶದ ಮೇರೆಗೆ ರಿಜಿಸ್ಟ್ರಾರ್ ಜನರಲ್ ಟಿ ಜಿ ಶಿವಶಂಕರೇಗೌಡ ಅಧಿಸೂಚನೆ ಹೊರಡಿಸಿದ್ದಾರೆ.
ಅದರಂತೆ, ಸೋಂಕು ಅಧಿಕವಾಗಿರುವ ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ಬಳ್ಳಾರಿ, ಬೀದರ್, ದಕ್ಷಿಣ ಕನ್ನಡ, ಹಾಸನ, ಕಲಬುರಗಿ, ಮೈಸೂರು ಹಾಗೂ ತುಮಕೂರು ಜಿಲ್ಲೆಗಳಲ್ಲಿ ಸೀಮಿತ ಕಲಾಪ ನಡೆಸಲು ಆದೇಶಿಸಲಾಗಿದ್ದು, ಮುಂದಿನ ಅದೇಶದವರೆಗೆ ಇದು ಚಾಲ್ತಿಯಲ್ಲಿರಲಿದೆ.
ಸಿವಿಲ್, ಕ್ರಿಮಿನಲ್ ಕೇಸ್ ಪ್ರಕರಣಗಳ ವಿಚಾರಣೆಗೆ ನಿರ್ಬಂಧ ವಿಧಿಸಲಾಗಿದ್ದು, ಹೈಕೋರ್ಟ್ ಮತ್ತು ಸುಪ್ರೀಂಕೋರ್ಟ್ ಸೂಚನೆಯಿದ್ದರೆ ಮಾತ್ರ ಸಾಕ್ಷ್ಯ ವಿಚಾರಣೆ ನಡೆಸಲು ಅನುವು ಮಾಡಿಕೊಡಲಾಗಿದೆ.
ತಾವೇ ಖುದ್ದಾಗಿ ವಾದ ಮಾಡುವ ಕಕ್ಷಿದಾರರು ಕೇವಲ ವಿಡಿಯೋ ಕಾನರೆನ್ಸ್ ಮೂಲಕ ಕಲಾಪಕ್ಕೆ ಹಾಜರಾಗಬೇಕು ಎಂದು ಸೂಚಿಸಲಾಗಿದೆ.
ಕೋರ್ಟ್ ಆದೇಶವಿದ್ದರೆ ಮಾತ್ರ ಕಕ್ಷಿದಾರರಿಗೆ ನ್ಯಾಯಾಲಯದ ಒಳಗೆ ಪ್ರವೇಶಕ್ಕೆ ಅವಕಾಶ ನೀಡಬೇಕು.
ಪೊಲೀಸ್ ಅಧಿಕಾರಿಗಳು ಮತ್ತು ನ್ಯಾಯಾಲಯದ ಮುಂದೆ ಹಾಜರುಪಡಿಸಬೇಕಾದ ಆರೋಪಿಗಳಿಗೆ ಮಾತ್ರ ಕೋರ್ಟ್ ಪ್ರವೇಶಕ್ಕೆ ಅವಕಾಶ ನೀಡಲಾಗಿದೆ ಎಂದು ಆದೇಶದಲ್ಲಿ ತಿಳಿಸಲಾಗಿದೆ.
ಒಂದು ವೇಳೆ ವಕೀಲರು, ಕಕ್ಷಿದಾರರು ನ್ಯಾಯಾಲಯದ ಕಲಾಪಕ್ಕೆ ಗೈರು ಹಾಜರಾದರೆ ಜಾಮೀನು ಸೇರಿದಂತೆ ಇತರ ಪ್ರಕರಣಗಳಲ್ಲಿ ಪ್ರತಿಕೂಲ ಆದೇಶ ಬೇಡ ಎಂದು ವಿಚಾರಣಾ ನ್ಯಾಯಾಲಯಗಳಿಗೆ ಹೈಕೋರ್ಟ್ ಸೂಚನೆ ನೀಡಿದೆ.