ಬೆಂಗಳೂರು: ನಗರದ ಟೌನ್ ಹಾಲ್ ಬಳಿ ಫ್ರೀ ಕಾಶ್ಮೀರ ಭಿತ್ತಿ ಪತ್ರ ತೋರಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧನಕ್ಕೆ ಒಳಗಾಗಿರುವ ಆರ್ದ್ರಾ ಜಾಮೀನು ಕೋರಿ ಸಲ್ಲಿಸಿರುವ ಅರ್ಜಿ ವಿಚಾರಣೆಯನ್ನು ಮಾ.3 ಕ್ಕೆ ಮುಂದೂಡಲಾಗಿದೆ.
ದೇಶದ್ರೋಹ ಭಿತ್ತಿ ಪತ್ರ ಪ್ರದರ್ಶಿಸಿದ ಪ್ರಕರಣದ ಆರೋಪಿ ಆರ್ದ್ರಾ ಜಾಮೀನು ಅರ್ಜಿಯನ್ನು ನಗರದ 6ನೇ ಎಸಿಎಂಎಂ ನ್ಯಾಯಾಲಯ ವಿಚಾರಣೆ ನಡೆಸಿತು. ಕೆಲ ಕಾಲ ವಾದ ಪ್ರತಿವಾದ ಆಲಿಸಿದ ನ್ಯಾಯಾಧೀಶರು ವಿಚಾರಣೆಯನ್ನು ಮಂಗಳವಾರಕ್ಕೆ ಮುಂದೂಡಿದರು. ಇದಕ್ಕೂ ಮುನ್ನ ಅರ್ಜಿಯಲ್ಲಿ ತಮ್ಮನ್ನು ಕೂಡ ಪ್ರಾಸಿಕ್ಯೂಷನ್ ಜೊತೆ ಸೇರಿಸಿಕೊಳ್ಳಬೇಕು ಎಂದು ಕೋರಿ ಶ್ರೀರಾಮ ಸೇನೆ ಸಂಘಟನೆ ಪರ ವಕೀಲರು ಅರ್ಜಿ ಸಲ್ಲಿಸಿದರು. ಸೆಕ್ಷನ್ 301ರ ಅಡಿ ಸಲ್ಲಿಸಿರುವ 'ಅಸಿಸ್ಟ್ ಟೂ ಪ್ರಾಸಿಕ್ಯೂಷನ್' ಅರ್ಜಿಯನ್ನು ವಿಚಾರಣೆಗೆ ಪರಿಗಣಿಸುವ ಕುರಿತು ಮಂಗಳವಾರ ನಿರ್ಣಯಿಸುವುದಾಗಿ ತಿಳಿಸಿತು.
ಪಾಕಿಸ್ತಾನ ಜಿಂದಾಬಾದ್ ಘೋಷಣೆ ಕೂಗಿದ ಅಮೂಲ್ಯ ಲಿಯೋನ್ ವಿರುದ್ಧ ಟೌನ್ ಹಾಲ್ ಬಳಿ ಪ್ರತಿಭಟನೆ ನಡೆಸುತ್ತಿದ್ದ ವೇಳೆ ಸ್ಥಳಕ್ಕೆ ಆಗಮಿಸಿದ್ದ ಆರ್ದ್ರಾ ಪ್ರತಿಭಟನಾಕಾರರ ಹಿಂದೆ ನಿಂತು ಫ್ರೀ ಕಾಶ್ಮೀರ ಭಿತ್ತಿ ಪತ್ರ ಪ್ರದರ್ಶಿಸಿದ್ದಳು. ಕೂಡಲೇ ಈಕೆಯನ್ನು ವಶಕ್ಕೆ ತೆಗೆದುಕೊಂಡಿದ್ದ ಎಸ್ಜೆ ಪಾರ್ಕ್ ಠಾಣೆ ಪೊಲೀಸರು ಆರ್ದ್ರಾ ವಿರುದ್ಧ ದೇಶದ್ರೋಹ ಆರೋಪದಡಿ ಪ್ರಕರಣ ದಾಖಲಿಸಿದ್ದರು.