ಬೆಂಗಳೂರು : ನಗರದ ಚಾಮರಾಜಪೇಟೆಯ ಶ್ರೀ ಚಾಮರಾಜೇಂದ್ರ ಸಂಸ್ಕೃತ ಪಾಠ ಶಾಲೆಯ ಆಸ್ತಿಯನ್ನು ಕಬಳಿಸಿದ ಆರೋಪಕ್ಕೆ ಸಂಬಂಧಿಸಿದಂತೆ ನೆಲಮಂಗಲದ ಶಿವಗಂಗಾ ಮಠಾಧೀಶರಿಗೆ ಭೂಕಬಳಿಕೆ ನಿಷೇಧ ವಿಶೇಷ ನ್ಯಾಯಾಲಯ ನೋಟಿಸ್ ಜಾರಿ ಮಾಡಿದೆ.
ಸಂಸ್ಕೃತ ಶಾಲೆಯ 38 ಗುಂಟೆ ಭೂಮಿಯನ್ನು ಶ್ರೀ ಶೃಂಗೇರಿ ಶಿವಗಂಗಾ ಮಠ ಕಬಳಿಸಿದೆ. ಇದರಲ್ಲಿ ಕೆಲ ಭಾಗವನ್ನು ಮಾರಾಟ ಮಾಡಿದೆ ಎಂದು ಆರೋಪಿಸಿ ನಗರದ ಸಾಮಾಜಿಕ ಕಾರ್ಯಕರ್ತ ಟಿ ಆರ್ ಆನಂದ್ ಭೂಕಬಳಿಕೆ ತಡೆ ವಿಶೇಷ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದಾರೆ. ಈ ಅರ್ಜಿ ವಿಚಾರಣೆ ನಡೆಸಿದ ನ್ಯಾಯಾಲಯ ಮಠಾಧಿಪತಿ ಸೇರಿದಂತೆ ಎಲ್ಲ ಪ್ರತಿವಾದಿಗಳಿಗೆ ನೋಟಿಸ್ ಜಾರಿ ಮಾಡಿ, ವಿಚಾರಣೆಯನ್ನು ಆಗಸ್ಟ್ 4ಕ್ಕೆ ಮುಂದೂಡಿದೆ. ಹಾಗೆಯೇ ವಿಚಾರಣೆಗೆ ಹಾಜರಾಗುವಂತೆ ಮಠಾಧೀಶರಿಗೂ ಸೂಚಿಸಿದೆ.
ಅರ್ಜಿದಾರರ ಆರೋಪ : 1915ರಲ್ಲಿ ಸಂಸ್ಕೃತ ಪಾಠ ಶಾಲೆ ಆರಂಭಿಸಲು ಅಂದಿನ ಮೈಸೂರು ಮಹಾರಾಜರು ಬೆಂಗಳೂರಿನ ಚಾಮರಾಜಪೇಟೆಯಲ್ಲಿ 38 ಗುಂಟೆ ಭೂಮಿಯನ್ನು ದಾನ ಮಾಡಿದ್ದರು. ಈ ಭೂಮಿಯಲ್ಲಿ ಶಾಲಾ ಕಟ್ಟಡ ನಿರ್ಮಿಸಲು ಶೃಂಗೇರಿಯ ಶಾರದಾ ಪೀಠದ ಶಾಖಾ ಮಠವಾಗಿರುವ ನೆಲಮಂಗಲದ ಶ್ರೀಶೃಂಗೇರಿ ಶಿವಗಂಗಾ ಮಠ 5 ಸಾವಿರ ರೂ. ಸಾಲ ನೀಡಿತ್ತು. ಆ ಬಳಿಕ ದಾಖಲೆಗಳನ್ನು ತಿರುಚಿ ಶಾಲೆ ಹೆಸರಲ್ಲಿದ್ದ ಆಸ್ತಿಯನ್ನು ಶಿವಗಂಗಾ ಮಠದ ಹೆಸರಿಗೆ ಮಾಡಿಕೊಳ್ಳಲಾಗಿದೆ.
ಕೋಟ್ಯಂತರ ರೂ.ಬೆಲೆ ಬಾಳುವ ಆಸ್ತಿಯಲ್ಲಿ ಕೆಲ ಭಾಗವನ್ನು ಮಾರಾಟ ಮಾಡಲಾಗಿದೆ ಎಂದು ಅರ್ಜಿದಾರರು ಆರೋಪಿಸಿದ್ದಾರೆ. ಅಲ್ಲದೇ, ಆಸ್ತಿ ಕಬಳಿಕೆ ಮಾಡಿರುವ ಮಠದ ವಿರುದ್ಧ ಕ್ರಮ ಜರುಗಿಸಬೇಕು. ರಾಜವಂಶಸ್ಥರು ನೀಡಿರುವ ಭೂಮಿಯನ್ನು ಮೂಲ ಉದ್ದೇಶಕ್ಕೆ ಮೀಸಲಿಡಬೇಕು ಎಂದು ಅರ್ಜಿದಾರರು ಮನವಿ ಮಾಡಿದ್ದಾರೆ.
ಇದನ್ನೂ ಓದಿ: ಮಕ್ಕಳ ಹೆಸರಲ್ಲಿ 1 ಸಾವಿರ ರೂ ಠೇವಣಿ: ಸರ್ಕಾರಿ ಶಾಲೆ ಉಳಿಸಲು ಕೊಪ್ಪಳದ 'ಗುರು'ಸ್ವಾಮಿಯ ಕೈಂಕರ್ಯ!