ಬೆಂಗಳೂರು : ಕೋವಿಡ್ ಎರಡನೇ ಅಲೆ ತೀವ್ರಗೊಂಡು ಹಾಸಿಗೆ, ಆಮ್ಲಜನಕ ಕೊರತೆ ಪರಿಸ್ಥಿತಿ ಉಂಟಾಗಿರುವುದನ್ನು ನಿಭಾಯಿಸಲು ಮಾನವ ಸಂಪನ್ಮೂಲ ಹಾಗೂ ಆಡಳಿತಾತ್ಮಕ ಯೋಜನೆಗಳನ್ನು ಸೇನೆಗೆ ವಹಿಸುವುದು ಸೂಕ್ತ ಎಂದು ಅಡ್ವೊಕೇಟ್ಸ್ ಫಾರ್ ಕೋವಿಡ್ ಎಯ್ಡ್ ಸಂಘಟನೆ ಬರೆದಿದ್ದ ಪತ್ರಕ್ಕೆ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ಅಲ್ಲದೇ, ಅಂತಹ ಸಲಹೆಯನ್ನು ಪರಿಗಣಿಸಲಾಗದು. ಕೋವಿಡ್-19 ನಂತಹ ಗಂಭೀರ ವಿಚಾರದ ಬಗ್ಗೆ ಹಲವು ಅರ್ಜಿಗಳ ಕುರಿತು ವಿಚಾರಣೆ ನಡೆಸುವಾಗ ಪ್ರತಿಯೊಬ್ಬರೂ ಸಹ ಸಂಯಮವನ್ನು ತೋರಬೇಕಾಗುತ್ತದೆ ಎಂದು ಕೋರ್ಟ್ ಹೇಳಿದೆ.
ನ್ಯಾಯಾಲಯ ಕೋವಿಡ್ ಹಿನ್ನೆಲೆಯಲ್ಲಿ ನಾಗರಿಕರ ಸಾಂವಿಧಾನಿಕ ಮತ್ತು ಕಾನೂನು ಹಕ್ಕುಗಳ ಉಲ್ಲಂಘನೆಗೆ ಸಂಬಂಧಿಸಿದಂತೆ 2020ರ ಮಾರ್ಚ್ನಿಂದ ಕಾಲಕಾಲಕ್ಕೆ ಹಲವು ನಿರ್ದೇಶನಗಳನ್ನು ನೀಡುತ್ತಾ ಬಂದಿದೆ. ಆದರೆ, ನ್ಯಾಯಾಲಯ ರಾಜ್ಯದ ಆಡಳಿತವನ್ನು ಹೇಗೆ ನಡೆಸಬೇಕು ಎಂಬುದರ ಕುರಿತು ನಿರ್ಧರಿಸಲಾಗದು ಎಂದು ಆದೇಶದಲ್ಲಿ ತಿಳಿಸಿದೆ.
ವಿಚಾರಣೆ ವೇಳೆ ಪತ್ರದ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ ಮುಖ್ಯ ನ್ಯಾಯಮೂರ್ತಿ ಎಲ್ಲವನ್ನೂ ನ್ಯಾಯಾಲಯವೇ ಮಾಡಲಾಗದು. ಒಂದು ವೇಳೆ ಪತ್ರದಲ್ಲಿ ಉಲ್ಲೇಖಿಸಿರುವಂತೆ ಸೇನೆಗೆ ವಹಿಸಿದರೂ ಕೂಡ ಆಸ್ಪತ್ರೆಗಳಿಗೆ ಮೂಲಸೌಕರ್ಯ ಮತ್ತು ಸಿಬ್ಬಂದಿಯನ್ನು ಎಲ್ಲಿಂದ ತರುವುದು, ಯಾರು ಹೊಂದಿಸುತ್ತಾರೆ. ಪರಿಸ್ಥಿತಿಯನ್ನು ಅರ್ಥಮಾಡಿಕೊಂಡು ಮನವಿಗಳನ್ನು ಸಲ್ಲಿಸಬೇಕು ಎಂದು ತಾಕೀತು ಮಾಡಿದರು.
ಇದಕ್ಕೆ ಪ್ರತಿಕ್ರಿಯಿಸಿದ ಆ ಸಂಘಟನೆಯ ಪರ ವಕೀಲರು, ತಾವು ಬೇರೆ ಉದ್ದೇಶದಿಂದ ಸೇನೆಯ ನೆರವು ಪಡೆಯಬೇಕು ಎಂದು ಹೇಳಿಲ್ಲ. ಸದ್ಯಕ್ಕೆ ಬೆಂಗಳೂರಿನಲ್ಲಿ ರೋಗಿಗಳಿಗೆ ಹಾಸಿಗೆಗಳು ಹಾಗೂ ಆಮ್ಲಜನಕ ದೊರಕುತ್ತಿಲ್ಲ, ಸೇನೆಯಾದರೆ ಪರಿಸ್ಥಿತಿಯನ್ನು ಸಮರ್ಪಕವಾಗಿ ನಿಭಾಯಿಸಲಿದೆ. ಆ ಉದ್ದೇಶಕ್ಕೆ ಸೀಮಿತವಾಗಿ ಹೇಳಿದ್ದೇವೆ ಎಂದು ಸಮಜಾಯಿಷಿ ನೀಡಿದರು. ಆದರೂ ಪೀಠ ಆ ಮನವಿಯನ್ನು ಸಾರಾಸಗಟಾಗಿ ತಳ್ಳಿಹಾಕಿತು.