ಬೆಂಗಳೂರು: ನಗರದ ಬಸವನಗುಡಿಯ ಗಾಂಧಿ ಬಜಾರ್ ರಸ್ತೆ ನವೀಕರಣ ಕಾಮಗಾರಿ ವೇಳೆ ಪಾದಚಾರಿ ಮಾರ್ಗವನ್ನು 40 ಅಡಿ ಅಗಲಕ್ಕೆ ವಿಸ್ತರಿಸುವ ಕಾರ್ಯಕ್ಕೆ ಹೈಕೋರ್ಟ್ ನಿರ್ಬಂಧ ವಿಧಿಸಿ ಮಧ್ಯಂತರ ಆದೇಶ ನೀಡಿದೆ. ಗಾಂಧಿ ಬಜಾರ್‌ನ ಅಂಗಡಿ ಮಳಿಗೆ ಮಾಲೀಕ ಎಲ್. ಗುಂಡುರಾವ್ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಶಿವಶಂಕರೇಗೌಡ ಅವರಿದ್ದ ನ್ಯಾಯಪೀಠ ಈ ಮಧ್ಯಂತರ ಆದೇಶ ಹೊರೆಡಿಸಿದೆ.
ಅಲ್ಲದೆ, ಸರ್ಕಾರದ ನಗರಾಭಿವೃದ್ಧಿ ಇಲಾಖೆ, ಬಿಬಿಎಂಪಿ ಮತ್ತು ನಗರ ಭೂ ಸಾರಿಗೆ ನಿರ್ದೇಶನಾಲಯಕ್ಕೆ ನೋಟಿಸ್ ಜಾರಿಗೊಳಿಸಿ ಆಕ್ಷೇಪಣೆಗಳನ್ನು ಸಲ್ಲಿಸುವಂತೆ ಸೂಚಿಸಿದೆ. ವಿಚಾರಣೆ ವೇಳೆ ಅರ್ಜಿದಾರರ ಪರ ವಕೀಲ ಜಿ.ಆರ್. ಮೋಹನ್, ಗಾಂಧಿ ಬಜಾರ್‌ನ ನವೀಕರಣದ ನೆಪದಲ್ಲಿ ಬಿಬಿಎಂಪಿ ಮುಖ್ಯ ರಸ್ತೆಯನ್ನು ಕಿರಿದು ಮಾಡಿ ಪಾದಚಾರಿ ಮಾರ್ಗ ಅಗಲೀಕರಣ ಮಾಡುತ್ತಿದೆ. 800 ಮೀಟರ್ ಉದ್ದದ ರಸ್ತೆಯಲ್ಲಿ 100 ಅಡಿ ಅಗಲದ ರಸ್ತೆ ಇತ್ತು, ಅದನ್ನು 23 ಅಡಿಗೆ ಇಳಿಕೆ ಮಾಡಿ, ಪಾದಚಾರಿ ಮಾರ್ಗವನ್ನು ಒಂದು ಕಡೆ 40 ಅಡಿ ಹಾಗೂ ಇನ್ನೊಂದು ಕಡೆ 35 ಅಡಿ ಅಗಲ ಮಾಡಲಾಗುತ್ತಿದೆ ಎಂದು ವಾದ ಮಂಡಿಸಿದರು.
ಅಲ್ಲದೆ, ಇದು ಇಂಡಿಯನ್ ರೋಡ್ ಕಾಂಗ್ರೆಸ್‌ನ ನಿಯಮಗಳಿಗೆ ವಿರುದ್ಧವಾಗಿದೆ. ಇದರಿಂದ ವಾಹನಗಳ ಸಂಚಾರಕ್ಕೆ ಸ್ಥಳಾವಕಾಶವೇ ಇಲ್ಲವಾಗುವುದಿಲ್ಲ. ಮುಖ್ಯ ರಸ್ತೆ ತೀರಾ ಕಿರಿದಾಗುತ್ತದೆ. ರಸ್ತೆಯ ಇಕ್ಕೆಲಗಳಲ್ಲಿ ಬೀದಿ ಬದಿ ವ್ಯಾಪಾರಿಗಳಿಗೆ ಅವಕಾಶ ನೀಡಲಾಗುತ್ತದೆ. ಇದರಿಂದ ಈಗಾಗಲೇ ಇರುವ ಅಂಗಡಿ ಮಳಿಗೆಗಳಿಗೆ ಸಾರ್ವಜನಿಕರು ಬರಲಾಗುವುದಿಲ್ಲ. ಜನ ಸಾಮಾನ್ಯರಿಗೆ ತೀವ್ರ ತೊಂದರೆ ಆಗಲಿದೆ. ಹಾಗಾಗಿ ಪಾದಚಾರಿ ಮಾರ್ಗ ಅಗಲೀಕರಣ ಮಾಡದಂತೆ ನ್ಯಾಯಾಲಯ ಮಧ್ಯಂತರ ಆದೇಶ ಹೊರಡಿಸಬೇಕು ಎಂದು ಕೋರಿದರು. ವಾದ ಆಲಿಸಿದ ನ್ಯಾಯಾಪೀಠ ಮಧ್ಯಂತರ ಆದೇಶ ನೀಡಿದೆ.
ಚೆನ್ನಾಗಿರೋ ರಸ್ತೆಯೆಲ್ಲ ಅಧ್ವಾನ: ವಿಚಾರಣೆ ವೇಳೆ ನ್ಯಾಯಮೂರ್ತಿ ಶಿವಶಂಕರೇಗೌಡ ಅವರು, ಚೆನ್ನಾಗಿರುವ ರಸ್ತೆಯನ್ನೆಲ್ಲ ಅಧ್ವಾನ ಮಾಡಿಟ್ಟಿದ್ದೀರಿ, ಅಲ್ಲಿ ಹೇಗೆ ಜನರು ಓಡಾಡ್ತಾರೆ, ಏಕೆ ಹೀಗೆ ಮಾಡಲಾಗಿದೆ. ಮರಗಳನ್ನು ಹಾಳು ಮಾಡಿದ್ದೀರಿ, ಪಾಲಿಕೆ ಏಕೆ ಹೀಗೆ ಸಾರ್ವಜನಿಕರಿಗೆ ಅನಗತ್ಯ ತೊಂದರೆ ನೀಡುತ್ತಿದೆ ಎಂದು ಪಾಲಿಕೆಯ ಕಾರ್ಯವೈಖರಿಗೆ ಬೇಸರ ವ್ಯಕ್ತಪಡಿಸಿದರು.
ಕನಕುಪ್ಪೆಯಲ್ಲಿದ್ದ ಕಾಲೇಜು ಹೆಬ್ಬೂರಿಗೆ ಸ್ಥಳಾಂತರ, ಸರ್ಕಾರಕ್ಕೆ ನೋಟಿಸ್: ಪ್ರತ್ಯೇಕ ಪ್ರಕರಣದಲ್ಲಿ ತುಮಕೂರು ಜಿಲ್ಲೆಯ ಕನಕುಪ್ಪೆ ಗ್ರಾಮದಿಂದ ಸರ್ಕಾರಿ ಪಿಯು ಕಾಲೇಜನ್ನು ಹೆಬ್ಬೂರಿಗೆ ಸ್ಥಳಾಂತರ ಮಾಡುವ ನಿರ್ಧಾರ ಪ್ರಶ್ನಿಸಿ ಗ್ರಾಮಸ್ಥರು ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಂಬಂಧ ಹೈಕೋರ್ಟ್ ಸರ್ಕಾರಕ್ಕೆ ನೋಟಿಸ್ ಜಾರಿ ಮಾಡಿದೆ. ಕನಕುಪ್ಪೆ ಗ್ರಾಮದ ಸಿ.ಎಸ್. ಯತೀಶ್ ಮತ್ತಿತರರು ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಸ್.ಆರ್. ಕೃಷ್ಣಕುಮಾರ್ ಮತ್ತು ನ್ಯಾ. ವೆಂಕಟೇಶ್ ನಾಯಕ್ ಅವರಿದ್ದ ವಿಭಾಗೀಯಪೀಠ, ಸರ್ಕಾರಕ್ಕೆ ಮತ್ತು ಸಾರ್ವಜನಿಕ ಶಿಕ್ಷಣ ಇಲಾಖೆಗೆ ನೋಟಿಸ್ ಜಾರಿ ಮಾಡಿ ವಿಚಾರಣೆಯನ್ನು ಮೇ 18ಕ್ಕೆ ಮುಂದೂಡಿದೆ.
ವಿಚಾರಣೆ ವೇಳೆ ಅರ್ಜಿದಾರರ ಪರ ವಕೀಲರು, ವಿದ್ಯಾರ್ಥಿಗಳ ಸಂಖ್ಯೆ ಕಡಿತವಾಗಿದೆ ಎನ್ನುವ ಕಾರಣಕ್ಕೆ ಕನಕುಪ್ಪೆ ಗ್ರಾಮದಲ್ಲಿರುವ ಪಿಯು ಕಾಲೇಜನ್ನು ಹೋಬಳಿ ಕೇಂದ್ರ ಹೆಬ್ಬೂರಿಗೆ ಸ್ಥಳಾಂತರ ಮಾಡಲಾಗುತ್ತಿದೆ. ಈ ಕುರಿತು ಸರ್ಕಾರ 2023ರ ಮಾರ್ಚ್ 21ರಂದು ಆದೇಶ ಹೊರಡಿಸಿದೆ. ಇದರಿಂದ ಸುಮಾರು 60ಕ್ಕೂ ಅಧಿಕ ವಿದ್ಯಾರ್ಥಿಗಳಿಗೆ ತೊಂದರೆ ಆಗಲಿದೆ ಎಂದು ವಿವರಿಸಿದರು.
ಜತೆಗೆ, ಪ್ರಸಕ್ತ ವರ್ಷ ಹೊಸದಾಗಿ ಸಾಕಷ್ಟು ವಿದ್ಯಾರ್ಥಿಗಳು ಸೇರ್ಪಡೆಯಾಗಲಿದ್ದಾರೆ. ಆದರೆ ಸ್ಥಳಾಂತರ ಮಾಡುವುದರಿಂದ ಗ್ರಾಮೀಣ ಭಾಗದ ಹಲವು ವಿದ್ಯಾರ್ಥಿಗಳಿಗೆ ತೊಂದರೆಯಾಗಲಿದೆ. ಹಾಗಾಗಿ ಕನಕುಪ್ಪೆ ಗ್ರಾಮದಿಂದ ಹೆಬ್ಬೂರಿಗೆ ಪಿಯು ಕಾಲೇಜು ಸ್ಥಳಾಂತರ ಸಂಬಂಧ 2023ರ ಮಾರ್ಚ್ 21ರಂದು ಹೊರಡಿಸಿರುವ ಆದೇಶ ರದ್ದುಗೊಳಿಸಬೇಕೆಂದು ಕೋರಿದರು.
ಇದನ್ನೂ ಓದಿ: ತಡೆಯಾಜ್ಞೆ ನಡುವೆಯೂ ಗೇಮ್ಸ್ ಕ್ರಾಫ್ಟ್ ಕಂಪೆನಿಗೆ ನೋಟಿಸ್ ಜಾರಿ : ನೋಟಿಸ್ ರದ್ದು ಮಾಡಿದ ಹೈಕೋರ್ಟ್