ಬೆಂಗಳೂರು: ಪದತ್ಯಾಗದ ಸನ್ನಿವೇಶದಲ್ಲಿರುವ ಸಿಎಂ ಬಿ.ಎಸ್.ಯಡಿಯೂರಪ್ಪ ಆಡಳಿತದ 2 ವರ್ಷದ ಸಾಧನಾ ಸಮಾವೇಶ ಇದೀಗ ಎಲ್ಲರ ಕುತೂಹಲ ಕೆರಳಿಸಿದೆ. ಅದರಲ್ಲಿಯೂ ಸಿಎಂ ಬಿಎಸ್ವೈ ಮಾಡುವ ಭಾಷಣದತ್ತ ಎಲ್ಲರ ಚಿತ್ತ ನೆಟ್ಟಿದೆ.
ವಿಧಾನಸೌಧದ ಬ್ಯಾಂಕ್ವೆಟ್ ಹಾಲ್ನಲ್ಲಿ ನಡೆಯಲಿರುವ ಈ ಕಾರ್ಯಕ್ರಮ ಇದೀಗ ಸಾಕಷ್ಟು ಕುತೂಹಲ ಮೂಡಿಸಿದೆ. ಹೈಕಮಾಂಡ್ನ ಸಂದೇಶದ ನಿರೀಕ್ಷೆಯಲ್ಲಿರುವ ಸಿಎಂ ಬಿಎಸ್ವೈಗೆ ಇದು ವಿದಾಯದ ಕಾರ್ಯಕ್ರಮವಾಗಲಿದೆಯಾ? ಎಂಬ ಕುತೂಹಲ ಎಲ್ಲರದ್ದು.
ಬೆಳಗ್ಗೆ 11 ಗಂಟೆಯಿಂದ ಮಧ್ಯಾಹ್ನ 1 ಗಂಟೆವರೆಗೆ ನಡೆಯಲಿರುವ ಈ ಸಮಾವೇಶದಲ್ಲಿ ಸಿಎಂ ತಮ್ಮ ಸರ್ಕಾರದ ಸಾಧನೆ, ಸವಾಲುಗಳ ಬಗ್ಗೆ ವಿಸ್ತೃತವಾಗಿ ಭಾಷಣ ಮಾಡಲಿದ್ದಾರೆ ಎನ್ನಲಾಗಿದೆ. ಸಿಎಂ ಯಡಿಯೂರಪ್ಪ ಮಾಡಲಿರುವ ಭಾಷಣವೇ ಈಗ ಎಲ್ಲರ ಕುತೂಹಲಕ್ಕೆ ಕಾರಣವಾಗಿದೆ.
ಸಿಎಂ ವಿದಾಯದ ಭಾಷಣ ಮಾಡಲಿದ್ದಾರೆಯೇ?, ಭಾವನಾತ್ಮಕ ಭಾಷಣ ಮಾಡಿ ರಾಜೀನಾಮೆ ನೀಡಲಿದ್ದಾರೆಯೇ? ಭಾಷಣದಲ್ಲಿ ಯಾವೆಲ್ಲಾ ಅಂಶಗಳನ್ನು ಉಲ್ಲೇಖಿಸಲಿದ್ದಾರೆ ಎಂಬ ಬಗ್ಗೆ ಸಾಕಷ್ಟು ಪ್ರಶ್ನೆಗಳು ಮೂಡಿವೆ.
ತಮ್ಮ ಭಾಷಣದಲ್ಲೇ ಪದತ್ಯಾಗದ ಘೋಷಣೆ ಮಾಡಲಿದ್ದಾರಾ?, ತಮ್ಮ ಮುಂದಿನ ರಾಜಕೀಯ ನಡೆಯ ಬಗ್ಗೆಯೂ ಗುಟ್ಟು ಬಿಟ್ಟು ಕೊಡಲಿದ್ದಾರಾ? ಎಂಬ ಬಗ್ಗೆಯೂ ಎಲ್ಲರಲ್ಲಿ ಸಾಕಷ್ಟು ಕುತೂಹಲ ಕೆರಳಿಸಿದೆ. ಹಾಗಾಗಿ ಸಚಿವರು, ಬಿಜೆಪಿ ಶಾಸಕರು, ಕಾರ್ಯಕರ್ತರು, ಪ್ರತಿಪಕ್ಷ, ರಾಜ್ಯದ ಜನತೆಗೆ ಸಿಎಂ ಇಂದು ತಮ್ಮ ಸರ್ಕಾರದ ಸಾಧನಾ ಸಮಾವೇಶದಲ್ಲಿ ಮಾಡುವ ಭಾಷಣ ಮತ್ತು ಬಳಿಕದ ಅವರ ನಡೆ ಬಗ್ಗೆ ಚಿತ್ತ ನೆಟ್ಟಿದೆ.
ಇದನ್ನೂ ಓದಿ: ಸಿಎಂ ಇಂದಿನ ನಡೆಯತ್ತ ಪ್ರತಿಪಕ್ಷ ಕಾಂಗ್ರೆಸ್ ಗಂಭೀರ ಚಿತ್ತ!