ಬೆಂಗಳೂರು: ಭ್ರಷ್ಟಾಚಾರ ಆರೋಪ ಕೇಳಿ ಬಂದ ಬಳಿಕ ಇದೇ ಮೊದಲ ಬಾರಿಗೆ ಐಪಿಎಸ್ ಅಧಿಕಾರಿ ರವಿ.ಡಿ ಚನ್ನಣ್ಣನವರ್ ಸ್ಪಷ್ಟನೆ ನೀಡಿದ್ದಾರೆ. ನನ್ನ ಮೇಲೆ ಬಂದಿರುವ ಆರೋಪಗಳು ಶುದ್ದ ಸುಳ್ಳು. ನನ್ನ ವಿರುದ್ಧ ತೇಜೋವಧೆ ಮಾಡಿದವರ ಕಾನೂನು ಹೋರಾಟ ನಡೆಸುತ್ತಿರುವುದಾಗಿ ಸ್ಪಷ್ಟನೆ ಪತ್ರದಲ್ಲಿ ತಿಳಿಸಿದ್ದಾರೆ.
ಇತ್ತೀಚೆಗೆ ಸಾಮಾಜಿಕ ಜಾಲತಾಣಗಳಲ್ಲಿ ಕೆಲ ವ್ಯಕ್ತಿಗಳು ನನ್ನ ಮೇಲೆ ಮತ್ತು ನನ್ನ ಕುಟುಂಬದ ಮೇಲೆ ಆಧಾರ ರಹಿತ ಆರೋಪ ಮಾಡಿರುವುದು ನನ್ನ ಗಮನಕ್ಕೆ ಬಂದಿರುತ್ತದೆ. ಇವೆಲ್ಲವೂ ಸುಳ್ಳಾಗಿದ್ದು, ದುರುದ್ದೇಶದಿಂದ ಕೂಡಿದೆ.
ಇದನ್ನೂ ಓದಿ: ಲಂಚ ಆರೋಪ: ರವಿ ಚನ್ನಣ್ಣನವರ ಅಮಾನತಿಗೆ ಆಪ್ ಒತ್ತಾಯ
ಸಾಮಾಜಿಕ ಜಾಲತಾಣದಲ್ಲಿ, ನನ್ನ ತಂದೆ-ತಾಯಿಯವರ ಹೆಸರಲ್ಲಿರುವ ಕೆಲ ಪಹಣಿ ಹಾಕಿ, ಆರೋಪಿಸಿದ್ದು, ಅವುಗಳೆಲ್ಲ ಕಾನೂನು ಬದ್ಧವಾಗಿಯೇ ಖರೀದಿಸಿದ್ದು, ಪಿತ್ರಾರ್ಜಿತ ಹಾಗೂ ಸ್ವಯಾರ್ಜಿತ ಆಸ್ತಿಗಳಾಗಿವೆ. ಅವುಗಳನ್ನೆಲ್ಲ ಆಯಾ ವರ್ಷವೇ ಆದಾಯ ತೆರಿಗೆ ಇಲಾಖೆಗೆ ಮಾಹಿತಿ ನೀಡಿರುತ್ತಾರೆ.
ನಿಮ್ಮ ಸೂಕ್ತ ಸಂಗಾತಿ ಹುಡುಕುತ್ತಿರುವಿರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ ನೋಂದಣಿ ಉಚಿತ
ಇವುಗಳನ್ನು ನಾನು ಭ್ರಷ್ಟ ರೀತಿಯಿಂದ ಸಂಪಾದಿಸಿದ್ದೇನೆ ಎಂದು ಸುಳ್ಳು ಸುದ್ದಿಗಳನ್ನು ಹರಡಿ ನನ್ನನ್ನು ತೇಜೋವಧೆ ಮಾಡಬೇಕೆಂದೇ ಸಾಮಾಜಿಕ ಜಾಲತಾಣದಲ್ಲಿ ಬಿಂಬಿಸುತ್ತಿದ್ದಾರೆ. ನಾನೊಬ್ಬ ಅಖಿಲ ಭಾರತೀಯ ಸೇವಕನಾಗಿದ್ದು, ಸೇವಾ ನಿಯಮಗಳ ಅಡಿ ವರ್ತಿಸಬೇಕಾದ್ದು ನನ್ನ ಕರ್ತವ್ಯ.
ಆದ್ದರಿಂದ ಈ ಕುರಿತಂತೆ ನಾನು ಸಾಮಾಜಿಕ ಜಾಲತಾಣದಲ್ಲಿ ಪ್ರತಿಕ್ರಿಯಿಸದೇ ಕಾನೂನು ಬದ್ಧವಾಗಿ ಈ ಕೆಳಕಂಡಂತೆ ಕ್ರಮ ಕೈಗೊಂಡಿರುತ್ತೇನೆ. ನನಗೆ ನಮ್ಮ ದೇಶದ ನ್ಯಾಯಾಂಗ ವ್ಯವಸ್ಥೆಯ ಮೇಲೆ ಸಂಪೂರ್ಣ ನಂಬಿಕೆ ಇದೆ. ನ್ಯಾಯಾಲಯ ತೀರ್ಪು ಕೊಡುವವರಿಗೆ, ಎಲ್ಲ ಸುಳ್ಳು ಸುದ್ದಿಗಳನ್ನು ನಂಬದಂತೆ, ಎಲ್ಲ ಆತ್ಮೀಯರಲ್ಲಿ ಮನವಿ ಮಾಡಿಕೊಳ್ಳುತ್ತೇನೆ.
ಮಾಧ್ಯಮಗಳು ಪ್ರಚಾರ ಮಾಡದಂತೆ ತಡೆಯಾಜ್ಞೆ ತಂದದ್ದು ಅವುಗಳ ಅಭಿವ್ಯಕ್ತಿ ಸತ್ವವನ್ನು ಕುಗ್ಗಿಸಲು ಅಲ್ಲ. ಅನೇಕ ಸಂಕಷ್ಟಗಳ ನಡುವೆ ಬೆಳೆದ ನಾನು, ನನ್ನ ಸ್ವಾಭಿಮಾನ ಮತ್ತು ವ್ಯಕ್ತಿತ್ವದ ಬಗ್ಗೆ ಸದಾ ಎಚ್ಚರದಲ್ಲಿ ಇದ್ದೇನೆ. ಕೆಲವು ಸುಳ್ಳು ಸುದ್ದಿಗಳು ನನ್ನ ಬಗ್ಗೆ ಹರಿದಾಡಿದ ಕಾರಣ ನಾನು ತಡೆಯಾಜ್ಞೆ ತಂದದ್ದನ್ನು ಅನ್ಯತಾ ಭಾವಿಸಬಾರದೆಂದು ಈ ಮೂಲಕ ತಮ್ಮ ಗಮನಕ್ಕೆ ತರಲು ಇಚ್ಚಿಸಿದ್ದೇನೆ.
ಹಾಗೆಯೇ ನನಗೆ ನ್ಯಾಯವಾದಿಗಳ ಬಗ್ಗೆ, ಸ್ವಚ್ಛ ವ್ಯವಸ್ಥೆ ಬಯಸುವವರ ಬಗ್ಗೆ, ಅಪಾರ ಗೌರವವಿದೆ. ಈ ಮೂಲಕ ನನ್ನ ಆತ್ಮೀಯರೆಲ್ಲರಿಗೂ ಮನವಿ ಮಾಡುವುದೇನೆಂದರೆ, ತಾವು ದಯಮಾಡಿ ಯಾವುದೇ ಪ್ರತಿಕ್ರಿಯೆ ನೀಡಬಾರದು. ಅಶ್ಲೀಲ ಪದ ಬಳಕೆ, ಹೀಯಾಳಿಸುವುದನ್ನು ಮಾಡಬಾರದು ಎಂದು ಎಲ್ಲಾ ಮಾಧ್ಯಮಗಳ ಮೂಲಕ ಕೇಳಿಕೊಳ್ಳುತ್ತೇನೆ ಎಂದು ಪತ್ರದಲ್ಲಿ ಉಲ್ಲೇಖಿಸಿದ್ದಾರೆ.
ಇದನ್ನೂ ಓದಿ: ಐಪಿಎಸ್ ಅಧಿಕಾರಿ ರವಿ ಡಿ. ಚನ್ನಣ್ಣನವರ್ ವರ್ಗಾವಣೆಗೆ ತಡೆ ನೀಡಿದ ಸರ್ಕಾರ