ಬೆಂಗಳೂರು: ಕೆಜಿ ಹಳ್ಳಿ ಹಾಗೂ ಡಿಜೆ ಹಳ್ಳಿ ಗಲಭೆ ಪ್ರಕರಣ ಸಂಬಂಧ ಈಗಾಗಲೇ ಕಾರ್ಪೋರೇಟರ್ ಪತಿ ಆರೆಸ್ಟ್ ಆಗಿದ್ದು, ಕಾರ್ಪೋರೇಟರ್ ಕ್ಯಾಂಡಿಟೇಟ್ ಕೂಡ ಅರೆಸ್ಟ್ ಆಗಿದ್ದಾರೆ. ಇದೀಗ ಹಾಲಿ ಕಾರ್ಪೋರೇಟರ್ ಕೂಡಾ ಅರೆಸ್ಟ್ ಆಗುವ ಸಾಧ್ಯತೆಯಿದೆ.
ಸಿಸಿಬಿ ಪೊಲೀಸರ ತನಿಖೆಯಲ್ಲಿ ಗಲಭೆಗೆ ಪ್ರಚೋದನೆ ನೀಡಿರುವ ಆರೋಪದಡಿ ಕಾರ್ಪೋರೇಟರ್ ಬಂಧನವಾಗುವ ಸಾಧ್ಯತೆಯಿದೆ ಎಂದು ಪೊಲೀಸ್ ಮೂಲಗಳಿಂದ ತಿಳಿದು ಬಂದಿದೆ. ಹೀಗಾಗಿ ಪುಲಿಕೇಶಿನಗರ ವಾರ್ಡ್ನ ಕಾರ್ಪೋರೇಟರ್ ಜಾಕೀರ್ ಹುಸೇನ್ಗೆ ಸಿಸಿಬಿ ಪೊಲೀಸರು ಬಲೆ ಹಾಕಲು ಮುಂದಾಗಿದ್ದಾರೆ.
ಜಾಕೀರ್ ಹುಸೇನ್ ಮೇಲೆ, ಬಂಧಿತರೊಂದಿಗೆ ವಾಟ್ಸಾಪ್ ಕರೆ ಮೂಲಕ ಮಾತನಾಡಿ ಗಲಭೆಗೆ ಕುಮ್ಮಕ್ಕು ನೀಡಿದ ಆಪಾದನೆ ಕೇಳಿ ಬಂದಿದೆ. ತನ್ನ ಕಡೆಯಿಂದ ಒಂದು ಸಾವಿರಕ್ಕೂ ಅಧಿಕ ದೊಂಬಿಕೋರರನ್ನು ಸೇರಿಸಿದ್ದ ಆರೋಪ ಕೇಳಿ ಬಂದಿದ್ದು, ಪೊಲೀಸರು ತನಿಖೆಯಲ್ಲಿ ಜಾಕೀರ್ ಪಾತ್ರದ ಬಗ್ಗೆ ಸಾಕ್ಷಿ ಸಂಗ್ರಹಿಸುತ್ತಿದ್ದಾರೆ.
ಮೂರನೇ ಸುತ್ತಿನ ಆಪರೇಷನ್ಗೆ ಸಿಸಿಬಿ ಪೊಲೀಸರ ಸಿದ್ಧತೆ...
ಈಗಾಗಲೇ 290ಕ್ಕೂ ಅಧಿಕ ಮಂದಿಯನ್ನು ಪೊಲೀಸರು ಅರೆಸ್ಟ್ ಮಾಡಿದ್ದಾರೆ. ಘಟನೆಯಲ್ಲಿ ಭಾಗಿಯಾದ ಹಾಗೂ ಕುಮ್ಮಕ್ಕು ನೀಡಿದ ನೂರಕ್ಕೂ ಅಧಿಕ ಮಂದಿ ಎಸ್ಕೇಪ್ ಆಗಿದ್ದು, ತಲೆಮರೆಸಿಕೊಂಡಿರುವ ಸುಮಾರು 100 ಆರೋಪಿಗಳಿಗಾಗಿ ತಲಾಶ್ ನಡೆಸಲಾಗುತ್ತಿದೆ.
ತಲೆಮರೆಸಿಕೊಂಡವರಲ್ಲಿ 40ಕ್ಕೂ ಅಧಿಕ ಪುಂಡರು ನವೀನ್ ಮಾಡಿದ್ದ ಪೋಸ್ಟ್ ಶೇರ್ ಮಾಡಿದ್ದರು. ಫೇಸ್ಬುಕ್ ಪೋಸ್ಟ್ ಶೇರ್ ಮಾಡಿ, ಗಲಭೆಗೆ ಕರೆ ನೀಡಿದ್ದರು. ತಲೆಮರೆಸಿಕೊಂಡಿರುವ ಆರೋಪಿಗಳಲ್ಲಿ ಶೇ. 90ಕ್ಕೂ ಅಧಿಕ ಪುಂಡರು ಎಸ್ಡಿಪಿಐಗೆ ಸೇರಿದ್ದಾರೆ ಎನ್ನಲಾಗಿದೆ. ಬಂಧನಕ್ಕೆ ಹೆದರಿ ಬಹುತೇಕರು ಬೆಂಗಳೂರು ಬಿಟ್ಟು ಪರಾರಿಯಾಗಿದ್ದಾರೆ. ಈಗಾಗಲೇ ಸಿಸಿಟಿವಿ ದೃಶ್ಯಾವಳಿ ಹಾಗೂ ಸಿಕ್ಕ ವಿಡಿಯೋ ಮೂಲಕ ಪುಂಡರ ಗುರುತು ಪತ್ತೆ ಹಚ್ಚುವ ಕೆಲಸವನ್ನು ಪೊಲೀಸರು ಮಾಡುತ್ತಿದ್ದಾರೆ. ಇನ್ನೊಂದೆಡೆ ಬಂಧಿತ ಆರೋಪಿಗಳಿಗೆ ಉಗ್ರ ಸಂಘಟನೆಗಳ ಲಿಂಕ್ ಇದೆಯಾ ಎಂಬುದರ ಬಗ್ಗೆಯೂ ರಾಜ್ಯ ಆಂತರಿಕ ಭದ್ರತಾ ವಿಭಾಗ ಹಾಗೂ ಸಿಸಿಬಿಯ ಆ್ಯಂಟಿ ಟೆರರಿಸಂ ಫೋರ್ಸ್ (ಎಟಿಸಿ) ಸೆಲ್‌ನಿಂದ ತನಿಖೆ ಚುರುಕುಗೊಳಿಸಿದ್ದಾರೆ. ಉಗ್ರರೊಂದಿಗೆ ಲಿಂಕ್ ಇದೆ ಎನ್ನುವ ಮಾಹಿತಿ ಇದ್ದು, ಸಾಕ್ಷ್ಯಗಳಿಗಾಗಿ ಪೊಲೀಸರು ಹುಡುಕಾಟ ನಡೆಸುತ್ತಿದ್ದಾರೆ.