ಬೆಂಗಳೂರು: ಕೋವಿಡ್ ನಿಯಂತ್ರಣಕ್ಕೆ ಸಂಬಂಧಿಸಿದಂತೆ ಪ್ರಮುಖ ವಿಚಾರಗಳನ್ನು ಚರ್ಚಿಸಲು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ. ಸುಧಾಕರ್ ಹಿರಿಯ ಅಧಿಕಾರಿಗಳೊಂದಿಗೆ ಇಂದು ವಿಡಿಯೋ ಕಾನ್ಫರೆನ್ಸ್ ಮೂಲಕ ಸಭೆ ನಡೆಸಿದರು.
ಬೆಂಗಳೂರು ನಗರದಲ್ಲಿ ಹಾಸಿಗೆಗಳ ಹಂಚಿಕೆಗೆ ಸಮರ್ಪಕ ಕೇಂದ್ರೀಕೃತ ವ್ಯವಸ್ಥೆ ಕಲ್ಪಿಸುವುದು, ಲಾಕ್ ಡೌನ್ ಸಂದರ್ಭದಲ್ಲಿ ಸೋಂಕಿತರ ಸಂಪರ್ಕ ಪತ್ತೆಗೆ ಬೂತ್ ಮಟ್ಟದ ಟಾಸ್ಕ್ ಫೋರ್ಸ್ ಸಮಿತಿಗಳ ಬಳಕೆ ಸೇರಿದಂತೆ ಸೋಂಕು ಧೃಢಪಟ್ಟವರಿಗೆ ಮತ್ತು ಸೋಂಕಿತರ ಪ್ರಾಥಮಿಕ ಸಂಪರ್ಕಿತರಿಗೆ ಮಾಹಿತಿ ನೀಡುವುದು, ರೋಗಲಕ್ಷಣವಿರುವ ಸೋಂಕಿತರ ಪತ್ತೆ, ರೋಗಲಕ್ಷಣವಿಲ್ಲದ ಸೋಂಕಿತರಿಗೆ ಕೋವಿಡ್ ಕೇರ್ ಸೆಂಟರ್ ಮತ್ತು ರೋಗ ಲಕ್ಷಣವಿದ್ದವರಿಗೆ ಆಸ್ಪತ್ರೆ ವ್ಯವಸ್ಥೆ, ಆ್ಯಂಬುಲೆನ್ಸ್ ಸಂಯೋಜನೆ ಮತ್ತು ಇತರೆ ತುರ್ತು ಸಂದರ್ಭಗಳಲ್ಲಿ ಸಾರ್ವಜನಿಕರ ಅನುಕೂಲಕ್ಕೆ ಸಹಾಯವಾಣಿ ಕಲ್ಪಿಸುವುದು ಮುಂತಾದ ವಿಷಯಗಳ ಬಗ್ಗೆ ಅವರು ಚರ್ಚಿಸಿದರು.
ರ್ಯಾಪಿಡ್ ಆಂಟಿಜೆನ್ ಟೆಸ್ಟ್ ಅವಶ್ಯಕತೆ ಇರುವ ಕ್ಲಸ್ಟರ್ಗಳನ್ನು ಗುರುತಿಸುವುದು ಮತ್ತು ರೋಗಿಗಳನ್ನು ದಾಖಲಿಸಿಕೊಳ್ಳಲು ಇರುವ ಗೊಂದಲ ನಿವಾರಿಸಲು ಆಸ್ಪತ್ರೆಗಳಲ್ಲಿ ಆಂಟಿಜೆನ್ ಟೆಸ್ಟ್ ವ್ಯವಸ್ಥೆ ಕಲ್ಪಿಸುವುದು, RT-PCR ಪರೀಕ್ಷೆಯ ಸ್ಯಾಂಪಲ್ಗಳನ್ನು ಸರ್ಕಾರಿ ಮತ್ತು ಖಾಸಗಿ ಲ್ಯಾಬ್ ಗಳಿಗೆ ಸಮರ್ಪಕವಾಗಿ ಹಂಚುವ ಮೂಲಕ ವರದಿ ವಿಳಂಬವಾಗದಂತೆ ಕ್ರಮ ಕೈಗೊಳ್ಳುವಂತೆ ಸಭೆಯಲ್ಲಿ ಸೂಚಿಸಲಾಯಿತು. ಆ್ಯಂಬುಲೆನ್ಸ್ ಲಭ್ಯತೆ ಹೆಚ್ಚಿಸುವುದು ಮತ್ತು ರ್ಯಾಪಿಡ್ ಆಂಟಿಜೆನ್ ಟೆಸ್ಟ್ಗಾಗಿ ಮೊಬೈಲ್ ಟೆಸ್ಟಿಂಗ್ ವಾಹನ ಸಜ್ಜುಗೊಳಿಸುವ ಕುರಿತು ಚರ್ಚಿಸಲಾಯಿತು.