ಬೆಂಗಳೂರು: ಕೊರೊನಾ ವ್ಯಾಕ್ಸಿನ್ ರಾಜ್ಯದಲ್ಲಿ ಮೂರನೇ ಕ್ಲಿನಿಕಲ್ ಟ್ರಯಲ್ ಹಂತದಲ್ಲಿದ್ದು, ವಿಶ್ವ ಆರೋಗ್ಯ ಸಂಸ್ಥೆ ಅನುಮತಿ ನೀಡುತ್ತಿದ್ದಂತೆ ಲಸಿಕೆ ನೀಡಲು ಆರಂಭಿಸುತ್ತೇವೆ ಎಂದು ಸಚಿವ ಡಾ. ಕೆ.ಸುಧಾಕರ್ ತಿಳಿಸಿದ್ದಾರೆ.
ಕಾಂಗ್ರೆಸ್ ಸದಸ್ಯ ಪಿ.ಆರ್.ರಮೇಶ್ ಕೇಳಿದ್ದ ಕೋವಿಡ್ ಸಂಬಂಧಿ ಪ್ರಶ್ನೆಗೆ ಉತ್ತರಿಸಿದ ಆರೋಗ್ಯ ಸಚಿವ ಡಾ. ಕೆ.ಸುಧಾಕರ್, ಮಾಹಿತಿ ಸಂಗ್ರಹಣೆಯಲ್ಲಿ ವಿಫಲವಾಗಿದೆ ಎಂಬ ಆರೋಪ ಸತ್ಯಕ್ಕೆ ದೂರವಾದದ್ದು. ಸೋಂಕಿತರಾದ ಪ್ರತಿಯೊಬ್ಬ ವ್ಯಕ್ತಿಯ ವಿವರ ನಮ್ಮ ಬಳಿ ಇದೆ. ಎ ಸಿಮ್ಟಮ್ಯಾಟಿಕ್ ರೋಗಿಗಳ ದಾಖಲೆಯನ್ನು ನಾವು ಹೊಂದಿದ್ದೇವೆ. ಇಲ್ಲವಾದರೆ ಸರ್ಕಾರ ವಿಫಲ ಅಂತಾಗುತ್ತದೆ. ಎ ಸಿಮ್ಟಮ್ಯಾಟಿಕ್ ರೋಗಿಗಳಲ್ಲಿ ಶೇ. 80ರಷ್ಟು ಮಂದಿ ಕೋವಿಡ್ ಕೇರ್ ಕೇಂದ್ರಕ್ಕೆ ಭೇಟಿ ನೀಡಿರುತ್ತಾರೆ. ಲಸಿಕೆಯ ಮೂರನೇ ಹಂತದ ಕ್ಲಿನಿಕಲ್ ಟ್ರಯಲ್ ನಡೆಯುತ್ತಿದೆ. ಕೋವ್ಯಾಕ್ಸಿನ್ ಅಂತ ಕರೆಯುತ್ತೇವೆ. ವಿಶ್ವ ಆರೋಗ್ಯ ಸಂಸ್ಥೆ ಭರವಸೆ ನೀಡುವವರೆಗೆ ನೀಡುವಂತಿಲ್ಲ. ತಕ್ಷಣ ಕೇಂದ್ರ ಸರ್ಕಾರದ ಮಾರ್ಗಸೂಚಿಯಡಿ ಲಸಿಕೆ ನೀಡುತ್ತೇವೆ ಎಂದರು.
ಆದಷ್ಟು ಕೊರೊನಾ ವಾರಿಯರ್ಸ್ಗೆ ಇದರ ಮೊದಲ ಲಾಭ ಸಿಗಲಿದೆ. 2.23 ಲಕ್ಷ ಮಂದಿ ಸರ್ಕಾರಿ ವ್ಯವಸ್ಥೆ ಅಡಿ ಬರುವ ಕೋವಿಡ್, 2.45 ಲಕ್ಷ ಮಂದಿ ಖಾಸಗಿ ಆಸ್ಪತ್ರೆಯಲ್ಲಿ ಕೊರೊನಾ ವಾರಿಯರ್ಸ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಇವರಿಗೆ ಮೊದಲ ಆದ್ಯತೆಯಲ್ಲಿ ಡೋಸ್ ನೀಡುತ್ತೇವೆ. ಎರಡನೇ ಹಂತ ಹಿರಿಯ ನಾಗರಿಕರು, ತುಂಬಾ ದುರ್ಬಲರು, ಬಡವರಿಗೆ ಆದ್ಯತೆ ನೀಡುತ್ತೇವೆ. ಆ ಮೇಲೆ ಇತರೆ ಸಾಮಾನ್ಯ ನಾಗರಿಕರಿಗೆ ವಿತರಿಸುತ್ತೇವೆ ಎಂದರು.
ವಿತರಣೆಗೆ 1 ಲಕ್ಷ ಸಿಬ್ಬಂದಿ ಸಜ್ಜಾಗಿದ್ದಾರೆ. ರೆಫ್ರಿಜರೇಟರ್, ಇತರೆ ಸಲಕರಣೆಗಳನ್ನು ಸಿದ್ಧಪಡಿಸಿಕೊಂಡಿದ್ದೇವೆ. ವಿಶ್ವ ಆರೋಗ್ಯ ಸಂಸ್ಥೆ ಹಾಗೂ ಐಸಿಎಂಆರ್ ಪರವಾನಗಿ ನೀಡುವವರೆಗೂ ನಿಖರವಾದ ದಿನಾಂಕ ಘೋಷಣೆ ಅಸಾಧ್ಯ. ಜನರಿಗೆ ಗೊಂದಲ ಮೂಡಿಸುವುದು ಸೂಕ್ತವಲ್ಲ ಎಂದರು. ಪ್ರತಿಪಕ್ಷ ನಾಯಕ ಎಸ್.ಆರ್.ಪಾಟೀಲ್ ಮಾತನಾಡಿ, ಜನ ಹಾಗೂ ನಾವು ಕಾತರದಿಂದ ಕಾಯುತ್ತಿರುವುದು ವ್ಯಾಕ್ಸಿನೇಷನ್ಗೋಸ್ಕರ. ಆದರೆ ಅದೇ ದಿನಾಂಕ ಘೋಷಿಸದಿದ್ದರೆ ಹೇಗೆ ಎಂದರು.
ಇದಕ್ಕೆ ಉತ್ತರಿಸಿದ ಸಚಿವ ಡಾ. ಕೆ.ಸುಧಾಕರ್, ಇದು ರಾಜಕೀಯ ಹೇಳಿಕೆ ನೀಡುವ ವಿಚಾರ ಅಲ್ಲ. ವಿಜ್ಞಾನಿಗಳು ವ್ಯಾಕ್ಸಿನ್ ಸಿದ್ಧಪಡಿಸುತ್ತಿದ್ದು, ದಾಖಲೆಯ ವೇಗದಲ್ಲಿ ಔಷಧ ಸಿದ್ಧಪಡಿಸಲಾಗುತ್ತಿದೆ. 50ಕ್ಕೂ ಹೆಚ್ಚು ಸಂಸ್ಥೆಗಳು ಅಧ್ಯಯನ ಆರಂಭಿಸಿದ್ದು, 25 ಸಂಸ್ಥೆಗಳು ಕ್ಲಿನಿಕಲ್ ಟ್ರಯಲ್ ಮೂರನೇ ಹಂತ ತಲುಪಿವೆ. ಇದಕ್ಕೆ ಸಹಕರಿಸಬೇಕು ಎಂದರು.
ಯು.ಬಿ.ವೆಂಕಟೇಶ್ ಹಾಗೂ ಶ್ರೀಕಂಠೇಗೌಡರು, ವ್ಯಾಕ್ಸಿನ್ ಬಳಸಿದ ನಂತರವೂ ಸಚಿವರೊಬ್ಬರಿಗೆ ಕೊರಿನಾ ಬಂದಿದೆ. ಇದು ಹೇಗೆ ಎಂಬುದಕ್ಕೆ ಸುಧಾಕರ್ ಉತ್ತರಿಸಿ, ಸಚಿವರಿಗೆ ಕೇವಲ ಒಂದು ಡೋಸ್ ನೀಡಲಾಗಿತ್ತು. ಆದರೆ ಇವರಿಗೆ ಎರಡನೇ ಡೋಸ್ ನೀಡುವ ಮುನ್ನ ಕೋವಿಡ್ಗೆ ತುತ್ತಾಗಿದ್ದರು. ಈ ಹಿನ್ನೆಲೆ ಅದು ಕೆಲಸ ಮಾಡಿಲ್ಲ. ವ್ಯಕ್ತಿಗಳಿಗೆ ಅವರ ಅಗತ್ಯ ಆಧರಿಸಿ ವ್ಯಾಕ್ಸಿನ್ ಡೋಸ್ ನೀಡಲಾಗುತ್ತದೆ ಎಂದರು.